ದಾವಣಗೆರೆ : ನಗು ಕವನಸಂಕಲನದ ಪರಿಚಯ ಕಾರ್ಯಕ್ರಮ

Update: 2017-12-11 12:31 GMT

ದಾವಣಗೆರೆ,ಡಿ.11 : ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳಿಗೆ ಮಾತ್ರ ಸೀಮಿತರಾಗದೆ ಸಾಹಿತ್ಯವನ್ನು ಅಧ್ಯಯನ ಮಾಡಬೇಕು ಎಂದು ಎಂಎಂ ಶಿಕ್ಷಣ ವಿದ್ಯಾಲಯ ವಿಶ್ರಾಂತ ಪ್ರಾಂಶುಪಾಲ ಡಾ.ಎಚ್.ಬಿ.ವಾಮದೇವಪ್ಪ ಸಲಹೆ ನೀಡಿದರು. 

ಇಲ್ಲಿನ ಸಿದ್ದಗಂಗಾ ಶಾಲೆಯಲ್ಲಿ ಮಕ್ಕಳ ಲೋಕ ಹಾಗೂ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ ಆಶ್ರಯದಲ್ಲಿ ನಗು ಕವನಸಂಕಲನದ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

ಕಥೆ, ಕವನ, ಕಾದಂಬರಿ ಓದುವುದರಿಂದ ಜ್ಞಾನಾರ್ಜನೆ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಓದುವಾಗ ಕಂಠ ಪಾಠ ಮಾಡದೆ ಪುಸ್ತಕವನ್ನು ಆಳವಾಗಿ ಅಧ್ಯಯನ ಮಾಡಬೇಕು. ಗೌರವ, ಪ್ರಶಸ್ತಿಗಾಗಿ ಓದದೆ ಜ್ಞಾನದ ವೃದ್ಧಿಗಾಗಿ ಅಧ್ಯಯನ ಮಾಡಬೇಕು ಎಂದು ಕಿವಿಮಾತು ಹೇಳಿದರು.  
ಮಕ್ಕಳಲ್ಲಿನ ಸೃಜನಶೀಲತೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯತೆ ಇದೆ. ಒತ್ತಾಯ ಪೂರ್ವಕವಾಗಿ ನೀಡುವ ಶಿಕ್ಷಣ ಸರಿಯಲ್ಲ. ಪೋಷಕರು ಮಕ್ಕಳಿಗೆ ಇಂಗ್ಲೀಷ್‍ನಲ್ಲಿ ಓದಿದರೆ ಎಂಜಿನಿಯರ್, ಡಾಕ್ಟರ್ ಆಗುತ್ತಾರೆ  ಎನ್ನುವ ಆಲೋಚನೆಯಲ್ಲಿಯೇ ಇರುತ್ತಾರೆ. ಇದು ಸಾಧನೆಯಾಗುವುದಿಲ್ಲ. ಮಕ್ಕಳ ಕ್ಷೇತ್ರದ ಅನುಗುಣವಾಗಿ ಪ್ರೋತ್ಸಾಹಿಸಿದಲ್ಲಿ ಶಿಖರವನ್ನು ಏರಲು ಸಾಧ್ಯವಾಗುತ್ತದೆ ಎಂದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ.ನಿಂಗೂ ಸೋಲಗಿ ಮಾತನಾಡಿ, ಪ್ರತಿಯೊಬ್ಬರ ಮನೆಯಲ್ಲಿಯೇ ಪುಸ್ತಕಾಲಯವನ್ನು ಮಾಡಬೇಕು. ಒಳ್ಳೆಯ ಪುಸ್ತಕ ಓದುವುದರಿಂದ ಉತ್ತಮ ವಿಚಾರಗಳು ದೊರೆಯುತ್ತವೆ. ಹಾಗೆಯೇ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಯುವ ವಯಸ್ಸಿನಲ್ಲಿಯೇ ಕಷ್ಟಪಟ್ಟಲ್ಲಿ ಮುಂದಿನ ದಿನಗಳು ಸುಖಕರವಾಗಲಿದೆ. ಇಂದು ಸುಖ ಪಟ್ಟಲ್ಲಿ ಮುಂದಿನ ಜೀವನ ಕಷ್ಟಕರವಾಗಲಿದೆ ಎಂದ ಅವರು, ಪ್ರತಿ ಮಗುವಿನ ಸೃಜನಶೀಲತೆಯನ್ನು ಪೋಷಣೆ ಮಾಡಬೇಕು. ಓದುವ ಗುರಿ ಇಟ್ಟುಕೊಂಡಿರಬೇಕು ಎಂದು ತಿಳಿಸಿದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ವಲತಾ, ಸಿದ್ಧಗಂಗಾ ವಿದ್ಯಾಸಂಸ್ಥೆ ಸಂಸ್ಥಾಪಕ ಎಂ.ಎಸ್.ಶಿವಣ್ಣ, ಮಕ್ಕಳ ಲೋಕ ಅಧ್ಯಕ್ಷ ಕೆ.ಎನ್.ಸ್ವಾಮಿ, ಶಿಕ್ಷಕ ಆರ್.ಚೇತನ್ ಮತ್ತಿತರರು ಇದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News