ಗುಜರಾತ್ ಮತದಾರರನ್ನು ಭಾವನಾತ್ಮಕವಾಗಿ ಬ್ಲಾಕ್‌ಮೇಲ್ ಮಾಡುತ್ತಿರುವ ಮೋದಿ : ವೀರಪ್ಪ ಮೊಯ್ಲಿ

Update: 2017-12-11 13:01 GMT

ಬೆಂಗಳೂರು, ಡಿ.11: ಗುಜರಾತ್ ಚುನಾವಣೆಯಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುವಂತೆ ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ಆರೋಪಿಸುವ ಮೂಲಕ ಪ್ರಧಾನಿ ನರೇಂದ್ರಮೋದಿ, ಗುಜರಾತಿನ ಮತದಾರರನ್ನು ಭಾವನಾತ್ಮಕವಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಡಾ.ಎಂ.ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದರು.

ಸೋಮವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಮನೆಗೆ ಕರೆಯದೆ ಹೋಗಿ ಉಪಾಹಾರ ಸೇವಿಸಿದ್ದು ನರೇಂದ್ರ ಮೋದಿಯೇ ಹೊರತು, ಮಾಜಿ ಪ್ರಧಾನಿ ಡಾ.ಮನಮೋಹನ್‌ಸಿಂಗ್ ಅವರಲ್ಲ ಎಂದು ತಿರುಗೇಟು ನೀಡಿದರು.

ತನ್ನನ್ನು ಹತ್ಯೆ ಮಾಡಲು ಒಂದು ವರ್ಷದ ಹಿಂದೆ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಪಾಕಿಸ್ತಾನದವರಿಗೆ ಸುಪಾರಿ ಕೊಟ್ಟಿದ್ದರು ಎಂದು ಆರೋಪಿಸಿರುವ ಮೋದಿ, ಒಂದು ವರ್ಷದಿಂದ ಈ ಬಗ್ಗೆ ಯಾಕೆ ಮೌನವಹಿಸಿದ್ದಾರೆ ಎಂದು ಪ್ರಶ್ನಿಸಿದ ಮೊಯ್ಲಿ, ಅಂತಹ ಪಿತೂರಿಗಳು ಏನಾದರೂ ನಡೆದಿದ್ದರೆ ಅದು ಸ್ವತಃ ನರೇಂದ್ರಮೋದಿ ತಮ್ಮ ಸರಕಾರ ಹಾಗೂ ದೇಶದ ವಿರುದ್ಧ ಮಾಡಿರಬಹುದು ಎಂದು ಟೀಕಿಸಿದರು.

ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಹಾಗೂ ನೆಹರು ಕುಟುಂಬದ ವಿರುದ್ಧ ತೀರ ವೈಯಕ್ತಿಕವಾಗಿ ನರೇಂದ್ರಮೋದಿ ಟೀಕೆಗಳನ್ನು ಮಾಡುತ್ತಿದ್ದಾರೆ. ದೇಶದ ಈ ಹಿಂದಿನ ಯಾವ ಪ್ರಧಾನಿಯೂ ಚುನಾವಣೆಗಾಗಿ ಈ ಮಟ್ಟಕ್ಕೆ ಇಳಿದಿರಲಿಲ್ಲ ಎಂದು ಅವರು ಆರೋಪಿಸಿದರು.

ಕೇಂದ್ರ ಸರಕಾರ ಮೂರುವರೆ ವರ್ಷಗಳಿಂದ ಏನು ಸಾಧನೆ ಮಾಡಿದೆ. ಬರ ಪರಿಹಾರಕ್ಕಾಗಿ ನಮ್ಮ ರಾಜ್ಯಕ್ಕೆ ಅಗತ್ಯ ನೆರವನ್ನು ನೀಡಿಲ್ಲ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಕಡಿಮೆಯಾದರೂ 5.50 ಲಕ್ಷ ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ವಸೂಲಿ ಮಾಡಿದೆ. ಅಲ್ಲದೆ, 2.50 ಲಕ್ಷ ಕೋಟಿ ರೂ.ನಿವ್ವಳ ಲಾಭ ಮಾಡಿದೆ ಎಂದು ಮೊಯ್ಲಿ ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿ ಎದುರು ಬಚ್ಚಾ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮೊಯ್ಲಿ, ಯಡಿಯೂರಪ್ಪಗೆ ವಾಸ್ತವ ಪರಿಸ್ಥಿತಿಯ ಅರಿವಿಲ್ಲ. ದೇಶದಲ್ಲಿ ಮೋದಿಯ ವರ್ಚಸ್ಸು ದಿನೇ ದಿನೇ ಕಡಿಮೆಯಾಗುತ್ತಿದೆ. ಅವರ ಹಾವ-ಭಾವ ನೋಡಿದರೆ ಹತಾಶರಾಗಿರುವುದು ಕಂಡು ಬರುತ್ತದೆ ಎಂದರು.

ಕರ್ನಾಟಕದಲ್ಲಿ ಯಾವ ಮುಖ ಇಟ್ಟುಕೊಂಡು ಯಡಿಯೂರಪ್ಪ ಪ್ರಚಾರ ಮಾಡುತ್ತಿದ್ದಾರೆ. ಇನ್ನು ಅಧಿಕಾರದ ಗುಂಗಿನಲ್ಲಿರುವ ಯಡಿಯೂರಪ್ಪ, ಜೈಲಿಗೆ ಹೋಗಿ ಬಂದ್ದದ್ದನ್ನು ಮರೆತು ಬಿಟ್ಟಿದ್ದಾರೆ. ಅವರ ಅಧಿಕಾರವಧಿಯಲ್ಲಿ ಏನು ಸಾಧನೆ ಮಾಡಿದ್ದಾರೆ. ಅವರ ಚುನಾವಣಾ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ಮತನಾಡಲಿ ಎಂದು ಮೊಯ್ಲಿ ಸವಾಲು ಹಾಕಿದರು.

ಕಾಶ್ಮೀರದಲ್ಲಿ ಯೋಧರ ತಲೆ ಕಡಿಯಲಾಗಿದೆ ಎಂದು ಸುಳ್ಳು ಪಳ್ಳೋ ಹೇಳಿ ಪ್ರಚಾರ ಮಾಡುವಂತೆ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಕರೆ ನೀಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅನಂತ್‌ಕುಮಾರ್ ಹೆಗಡೆ, ಈಶ್ವರಪ್ಪ, ಯಡಿಯೂರಪ್ಪ ನೀಡುತ್ತಿರುವ ಹೇಳಿಕೆಗಳಿಂದಾಗಿ ಬಿಜೆಪಿ ತನ್ನ ಪಾಲಿನ ಮತಗಳನ್ನು ಕಳೆದುಕೊಳ್ಳುತ್ತಿದೆ ಎಂದು ಮೊಯ್ಲಿ ಹೇಳಿದರು.

ಆದರೆ, ನಾವು ಸುಳ್ಳು ಹೇಳುವ ಅಗತ್ಯವಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ಏನು ಭರವಸೆಯನ್ನು ಜನರಿಗೆ ನೀಡಿದ್ದೆವೋ ಅದನ್ನು ಅನುಷ್ಠಾನ ಮಾಡಿದ್ದೇವೆ. 170 ಭರವಸೆಗಳ ಪೈಕಿ 159 ಈಡೇರಿಸಿದ್ದೇವೆ. ನಮ್ಮದು ನುಡಿದಂತೆ ನಡೆದ ಸರಕಾರ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಸರಕಾರದ ಸಾಧನೆಗಳು, ಪ್ರಣಾಳಿಕೆಯಲ್ಲಿ ಬಾಕಿ ಉಳಿದಿರುವ ಕಾರ್ಯಕ್ರಮಗಳ ವಿವರಗಳನ್ನು ‘ಪ್ರತಿಬಿಂಬ’ ಯೋಜನೆಯಡಿ ವೆಬ್‌ಸೈಟ್‌ನಲ್ಲಿ ಹಾಕುತ್ತೇವೆ. ವಿರೋಧ ಪಕ್ಷಕ್ಕೆ ಅಧಿಕಾರಕ್ಕೆ ಬರಬೇಕಾದರೆ ಕರ್ನಾಟಕದ ಅಭಿವೃದ್ಧಿಗಾಗಿ ಏನು ಮಾಡುತ್ತೇವೆ ಎಂಬ ರೂಪುರೇಷೆಯನ್ನೆ ಬಿಜೆಪಿ ಸಿದ್ಧಪಡಿಸಿಲ್ಲ ಎಂದು ಅವರು ಹೇಳಿದರು.

ಇವಿಎಂ ಪರಿಚಯಿಸಿದ್ದು ನಾವು. ಎರಡು ಚುನಾವಣೆಗಳನ್ನು ಮಾಡಿದ್ದೇವೆ. ಇವಿಎಂ ತಿರುಚಲು ಸಾಧ್ಯವಿದೆ, ಸಾಧ್ಯವಿಲ್ಲ ಎಂದು ಏಕಾಏಕಿ ಹೇಳಲು ಆಗುವುದಿಲ್ಲ. ಆದರೆ, ಬೂತ್‌ಮಟ್ಟದ ಏಜೆಂಟ್‌ಗಳು ಅದಕ್ಕೆ ಆಸ್ಪದ ನೀಡದೆ ಎಚ್ಚರಿಕೆ ವಹಿಸಬೇಕು ಎಂದು ಮೊಯ್ಲಿ ತಿಳಿಸಿದರು.

ಇಂದಿರಾಗಾಂಧಿ ಅವಧಿಯಲ್ಲೂ ನಾವು ನೆಲಕಚ್ಚಿದೆವು. ಆದರೆ, ಎರಡೇ ವರ್ಷದಲ್ಲಿ ದೇಶದ ಜನತೆ ಅವರಿಗೆ ಅಧಿಕಾರ ನೀಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಗುಜರಾತ್ ಚುನಾವಣೆಯಲ್ಲಿ ನಾವು ಗೆಲ್ಲುವ ವಿಶ್ವಾಸವಿದೆ. ರಾಹುಲ್‌ಗಾಂಧಿ ಅಲ್ಲಿ ಸಮುದ್ರ ಮಂಥನ ಮಾಡಿದ್ದು, ಬಿಜೆಪಿ ಹಾಗೂ ನರೇಂದ್ರಮೋದಿ ಹತಾಶರಾಗಿದ್ದಾರೆ.
-ವೀರಪ್ಪಮೊಯ್ಲಿ, ಕೇಂದ್ರದ ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News