ಹೊನ್ನಾವರದಲ್ಲಿ ಲಾರಿ ಚಾಲಕ ನಾಪತ್ತೆ

Update: 2017-12-11 13:20 GMT

ಹೊನ್ನಾವರ, ಡಿ.11: ಹೊನ್ನಾವರದ ಬಡ ಕುಟುಂಬದ ಪರೇಶ್ ಮೇಸ್ತಾ ಎಂಬ ಯುವಕ ಡಿ.6ರಂದು ನಾಪತ್ತೆಯಾಗಿ ಎರಡು ದಿನಗಳ ನಂತರ ಕೆರೆಯೊಂದರಲ್ಲಿ ಶವವಾಗಿ ಪತ್ತೆಯಾದ ನಂತರದ ಬೆಳವಣಿಗೆಯಲ್ಲಿ ಸಿರಸಿ ತಾಲೂಕಿನ ಗಡಿಹಳ್ಳಿ ಬಿಳಿಗಿರಿಕೊಪ್ಪದ ನಿವಾಸಿ ಅಬ್ದುಲ್ ಗಫೂರ್ ಶುಂಠಿ (34) ಎಂಬವರು ನಾಪತ್ತೆಯಾಗಿದ್ದಾರೆ.  

ಹೊನ್ನಾವರದಿಂದ ಮಿನಿಲಾರಿಯೊಂದರಲ್ಲಿ ಇವರು ಮರಳು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಹೊನ್ನಾವರ ತಾಲೂಕಿನ ಹಡೀನಬಾಳ ಎಂಬಲ್ಲಿ ದ್ವಂಸಗೊಂಡ ಸ್ಥಿತಿಯಲ್ಲಿ ಲಾರಿ ಪತ್ತೆಯಾಗಿದೆ.

ಈ ಕುರಿತು ಡಿ.8ರಂದೇ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಗಫೂರ್ ಪತ್ನಿ ದೂರು ನೀಡಿದ್ದರೂ ಮೇಸ್ತಾ ಸಾವಿನ ನಂತರ ನಡೆದ ಹಿಂಸಾಚಾರದಲ್ಲಿ ಅಬ್ದುಲ್ ಗಪೂರ್ ನಾಪತ್ತೆ ಪ್ರಕರಣ ಮುಚ್ಚಿಹೋಗಿತ್ತು. ಇದು ಸಹ ಪರೇಶ್ ಮೇಸ್ತಾನ ಸಾವಿನಂತೆಯೇ ನಿಗೂಢವಾಗಿದ್ದು, ಪ್ರತಿಕಾರದ ರೂಪವಾಗಿ ದುಷ್ಕರ್ಮಿಗಳು ಈತನನ್ನು ಕೊಲೆ ಮಾಡಿರಬಹುದೇ ಎಂದು ಗಫೂರ್ ಕುಟುಂಬ ಅನುಮಾನ ವ್ಯಕ್ತಪಡಿಸಿದೆ.

ಹೊನ್ನಾವರಕ್ಕೆ ಮರಳು ಸಾಗಾಟ ಮಾಡುತ್ತಿದ್ದ ಅಬ್ದುಲ್ ಗಫೂರ್ ಅವರ ಲಾರಿಯಲ್ಲಿ ಮೂವರು ಪ್ರಯಾಣಿಸಿದ್ದು, ಹಡೀನ್ ಬಾಳ ಎಂಬಲ್ಲಿ ಏಕಾಏಕಿ ಲಾರಿಯ ಮೇಲೆ ಕಲ್ಲು ತೂರಾಟ ನಡೆದಿದ್ದು, ದುಷ್ಕರ್ಮಿಗಳು ಲಾರಿಯನ್ನು ಸಂಪೂರ್ಣವಾಗಿ ಜಖಂಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ದುಷ್ಕರ್ಮಿಗಳಿಗೆ ಹೆದರಿ ಲಾರಿಯನ್ನು ಅಲ್ಲಿ ನಿಲ್ಲಿಸಿ ಓಡಿ ಹೋದ ಮೂವರಲ್ಲಿ ಇಬ್ಬರು ಸುರಕ್ಷಿತವಾಗಿ ಮನೆ ಸೇರಿದ್ದು, ಅಬ್ದುಲ್ ಗಫೂರ್ ಮಾತ್ರ ಇದುವರೆಗೂ ಪತ್ತೆಯಾಗಲಿಲ್ಲ.

"ಗಫೂರ್ ರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರಬೇಕು ಇಲ್ಲವೇ ಅಪಹರಿಸಿರಬೇಕು. ನನ್ನ ತಮ್ಮನ ಜೀವಕ್ಕೆ ಅಪಾಯ ಒದಗಿ ಬಂದಿದೆ" ಎಂದು ನಾಪತ್ತೆಯಾಗಿರುವ ಗಫೂರ್ ಸಹೋದರ ಸುಹೇಲ್ ಶುಂಠಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News