3427 ಕೋಟಿ ರೂ.ಹೂಡಿಕೆಯ ಯೋಜನೆಗಳಿಗೆ ಅಸ್ತು : ಸಿಎಂ ಅಧ್ಯಕ್ಷತೆಯ ಉನ್ನತಮಟ್ಟದ ಸಮಿತಿ ಒಪ್ಪಿಗೆ

Update: 2017-12-11 13:50 GMT

ಬೆಂಗಳೂರು, ಡಿ.11: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿನ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯಲ್ಲಿ 3427 ಕೋಟಿ ರೂ. ಬಂಡವಾಳ ಹೂಡಿಕೆಯ ನಾಲ್ಕು ಹೊಸ ಯೋಜನೆಗಳಿಗೆ ಅನುಮತಿ ನೀಡಲಾಗಿದೆ.

ಸೋಮವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಅನುಮತಿ ನೀಡಿದ ನಾಲ್ಕು ಹೊಸ ಯೋಜನೆಗಳಿಂದಾಗಿ 2595 ಜನರಿge ಉದ್ಯೋಗ ಅವಕಾಶ ಲಭ್ಯವಾಗಲಿದೆ.

ಬೋಯಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 1152 ಕೋಟಿ ರೂ.ವೆಚ್ಚದಲ್ಲಿ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಫೆಸಿಲಿಟಿ ಜೊತೆಯಲ್ಲಿ ಎಲೆಕ್ಟ್ರಾನಿಕ್ಸ್, ಅವೈನಿಕ್ಸ್ ಉತ್ಪಾದನಾ ಮತ್ತು ಜೋಡಣೆ ಘಟಕವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಿದ್ದು, 2300 ಮಂದಿಗೆ ಉದ್ಯೋಗ ದೊರೆಯಲಿದೆ. ಸಿಡಿಸಿ ಡೆವಲಪ್‌ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 740 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಲ್ಲಿ 100 ಎಕರೆ ಪ್ರದೇಶದಲ್ಲಿ ತಂತ್ರಜ್ಞಾನ ಅನ್ವೇಷಣಾ ಅಂತಾರಾಷ್ಟ್ರೀಯ ಪಾರ್ಕ್ ಸ್ಥಾಪಿಸಲಿದ್ದು, ಇದಕ್ಕೆ ಸಮಿತಿ ಒಪ್ಪಿಗೆ ನೀಡಿದೆ. ಇದರಿಂದಾಗಿ 25 ಮಂದಿಗೆ ಉದ್ಯೋಗ ದೊರೆಯಲಿದೆ. ಮಂಗಳೂರಿನ ಇಂಡಿಯನ್ ಕೋಸ್ಟ್ ಗಾರ್ಡ್ ಕಂಪನಿ 1010 ಕೋಟಿ ರೂ. ವೆಚ್ಚದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೈಕಂಪಾಡಿಯಲ್ಲಿ 160 ಎಕರೆ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕರಾವಳಿ ರಕ್ಷಣಾ ಪಡೆ ತರಬೇತಿ ಕೇಂದ್ರಕ್ಕೆ ಒಪ್ಪಿಗೆ ನೀಡಲಾಗಿದ್ದು, ಇದರಿಂದ 250 ಮಂದಿಗೆ ಉದ್ಯೋಗ ಲಭ್ಯವಾಗಲಿದೆ.

ಯೂನಿವರ್ಸಲ್ ಬಿಲ್ಡರ್ಸ್‌ 525 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಲ್ಲಿ 21.25 ಎಕರೆ ಪ್ರದೇಶದಲ್ಲಿ ವಸತಿ ಯೋಜನೆ ಆರಂಭಿಸಲಿದ್ದು ಸಮಿತಿ ಒಪ್ಪಿಗೆ ನೀಡಿದೆ. ಇದರಿಂದ 20 ಮಂದಿಗೆ ಉದ್ಯೋಗ ಅವಕಾಶಗಳು ಸಿಗಲಿದೆ.

ಉನ್ನತಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಹಸಿರು ನಿಶಾನೆ ತೋರಿಸಿರುವ ನಾಲ್ಕು ಯೋಜನೆಗಳ ಪೈಕಿ ಎರಡು ಯೋಜನೆಗಳು ಬೆಂಗಳೂರು ನಗರಕ್ಕೆ ಸೇರಲಿದ್ದು, 1265 ಕೋಟಿ ರೂ.ಬಂಡವಾಳ ಹೂಡಿಕೆಯೊಂದಿಗೆ 45 ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ 1010 ಕೋಟಿ ರೂ.ಗಳ ಒಂದು ಯೋಜನೆಯಾಗಿದ್ದು, ಇದರಿಂದ 250 ಉದ್ಯೋಗ ಅವಕಾಶ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದ 1152 ಕೋಟಿ ರೂ.ಗಳ ಒಂದು ಯೋಜನೆಯಾಗಿದ್ದು, ಇದರಿಂದ 2300 ಉದ್ಯೋಗ ಅವಕಾಶಗಳನ್ನು ಕಲ್ಪಿಸಲಿದೆ.

ಸಭೆಯಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಪ್ರವಾಸೋದ್ಯಮ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಸೇರಿದಂತೆ ಅಪರ ಮುಖ್ಯ ಕಾರ್ಯದರ್ಶಿಗಳು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News