ಸಾಂಸ್ಕೃತಿಕ ಕಲೆಗಳಿಂದ ಮಾನಸಿಕ ನೆಮ್ಮದಿ : ಸಂಸದ ಮುದ್ದಹನುಮೇಗೌಡ

Update: 2017-12-11 14:18 GMT

ತುಮಕೂರು,ಡಿ.11:ಯಾಂತ್ರಿಕ ಜೀವನದಲ್ಲಿ ಮಾನಸಿಕ ನೆಮ್ಮದಿ ಮುಖ್ಯವಾಗಿದ್ದು, ಒತ್ತಡ ನಿವಾರಣೆಗೆ ಸಾಂಸ್ಕೃತಿಕ ಕಲೆಗಳು ನೆರವಾಗುತ್ತವೆ ಎಂದು ಸಂಸದ ಎಸ್.ಪಿ. ಮುದ್ದ ಹನುಮೇಗೌಡ ಅಭಿಪ್ರಾಯಪಟ್ಟಿದ್ದಾರೆ.

ನಗರದ ಅಮಾನಿಕೆರೆ ಗಾಜಿನ ಮನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸೌರಭ(ತುಮಕೂರು ಅಮಾನಿಕೆರೆ ಉತ್ಸವ)ವನ್ನು ಉದ್ಘಾಟಿಸಿ ಮಾತನಾಡಿದ ಅವರು,ತುಮಕೂರು ಬದಲಾಗುತ್ತಿದ್ದು,ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ.

ಪಾಸ್‍ಪೋರ್ಟ್ ಸೇವಾ ಕೇಂದ್ರ, ಎಚ್‍ಎಎಲ್, ಇಸ್ರೋ ಕೇಂದ್ರಗಳು ತುಮಕೂರಿನಲ್ಲಿ ಸ್ಥಾಪನೆಯಾಗುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ಎಂಎಸ್‍ಎಂಇ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದ್ದು, ತುಮಕೂರು ನಾಗರಿಕರಿಗೆ ಎಲ್ಲ ರೀತಿಯ ಸೌಲಭ್ಯಗಳು ದೊರೆಯಬೇಕೆನ್ನುವ ಉದ್ದೇಶದಿಂದ ಅಮಾನಿಕೆರೆಯಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಂಸ್ಕೃತಿಕ ಸೌರಭದಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಡಾ.ರಫೀಕ್ ಅಹಮದ್ ಅವರು, ಅಮಾನಿಕೆರೆಗೆ ವಾರಾಂತ್ಯದಲ್ಲಿ ಮೂರ್ನಾಲ್ಕು ಸಾವಿರ ಜನರು ಬರುತ್ತಾರೆ.ಅಮಾನಿಕೆರೆಯಲ್ಲಿ ವಾಕಿಂಗ್ ಪಾಥ್, ಸೈಕಲ್ ಪಾಥ್, ಸೋಲಾರ್ ಟ್ರೈನ್, ಇ-ಲಾಂಜ್ ನಂತರ ಕಾಮಗಾರಿಗಳನ್ನು 78 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುತ್ತಿದ್ದು, ಸ್ಮಾರ್ಟ್ ಸಿಟಿ ಯೋಜನೆಯ ಪರಿವರ್ತನೆಯನ್ನು ಇನ್ನು ನಾಲ್ಕೈದು ವರ್ಷಗಳಲ್ಲಿ ಜನರು ಕಾಣಬಹುದಾಗಿದೆ.ಅಮಾನಿಕೆರೆಯಲ್ಲಿ ನಿರ್ಮಾಣವಾಗಿರುವ ಗಾಜಿನ ಮನೆ ಭಾರತದ ಲ್ಲಿರುವ ದೊಡ್ಡ ಗಾಜಿನ ಮನೆಗಳಲ್ಲಿ ಒಂದಾಗಿದೆ.ಅಮಾನಿಕೆರೆಯು ತುಂಬಿರುವುದರಿಂದ ಇಲ್ಲಿಗೆ ಭೇಟಿ ನೀಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗದ ವತಿಯಿಂದ ಪ್ರತಿ ತಿಂಗಳ ಕೊನೆಯ ರವಿವಾರ ಅಮಾನಿಕೆರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲು ಅನುವು ಮಾಡಿಕೊಡಬೇಕೆಂದು ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಟೂಡಾ ಸದಸ್ಯ ಆಟೋರಾಜು, ಹೇಮಂತ್‍ಕುಮಾರ್, ಟೂಡಾ ಆಯುಕ್ತ ರಂಗಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ, ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣ್‍ದಾಸ್, ಎನ್.ಆರ್. ಜ್ಞಾನಮೂರ್ತಿ, ಮುಂಜಾನೆ ಗೆಳೆಯರ ಬಳಗದ ಅಧ್ಯಕ್ಷ ವೆಂಕಟೇಶ್ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸೌರಭದಲ್ಲಿ ಕನಕಪುರದ ಗುರುಮಾದಪ್ಪ ಮತ್ತು ತಂಡದಿಂದ ಕಂಸಾಳೆ ಪ್ರದರ್ಶನ, ಶಿಕಾರಿಪುರ ತಾಲ್ಲೂಕಿನ ಪರಮೇಶಪ್ಪ ಮತ್ತು ತಂಡದಿಂದ ಡೊಳ್ಳು ಪ್ರದರ್ಶನ, ಚಿಂತಾಮಣಿ ತಾಲ್ಲೂಕಿನ ವಿಶ್ವನಾಥ್ ಮತ್ತು ತಂಡದಿಂದ ಕರ್ನಾಟಕ ವಾದ್ಯ ಸಂಗೀತ, ಸಿದ್ದಲಿಂಗಯ್ಯ ಹಿರೇಮಠ್ ಮತ್ತು ತಂಡದಿಂದ ಹಿಂದೂಸ್ತಾನಿ ಸಂಗೀತ, ಬಾಲಾ ವಿಶ್ವನಾಥ್ ಮತ್ತು ತಂಡದಿಂದ ನೃತ್ಯ ರೂಪಕ, ಮಲ್ಲಿಕಾರ್ಜುನ ಕೆಂಕೆರೆ ಮತ್ತು ತಂಡದಿಂದ ಸುಗಮ ಸಂಗೀತ, ಡಾ.ಲಕ್ಷ್ಮಣ್‍ದಾಸ್ ಮತ್ತು ತಂಡದಿಂದ ರಂಗಗೀತೆ, ಶಂಕರ್ ಭಾರತೀಪುರ ಮತ್ತು ತಂಡದಿಂದ ಜಾನಪದ ಗೀತೆ ಗಾಯನ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News