ಆಶ್ರಯ ಯೋಜನೆ : ಮುಂಗಡ ಹಣ ಪಾವತಿ ರದ್ದುಗೊಳಿಸಲು ಆಗ್ರಹಿಸಿ ಧರಣಿ

Update: 2017-12-11 14:40 GMT

ಶಿವಮೊಗ್ಗ, ಡಿ. 11: ಮಹಾನಗರ ಪಾಲಿಕೆ ಆಡಳಿತವು ಆಶ್ರಯ ಯೋಜನೆಯಡಿ ವಸತಿರಹಿತರಿಂದ ಅರ್ಜಿಯ ಜೊತೆ ಮುಂಗಡ ಹಣ ಕಟ್ಟಿಸಿಕೊಳ್ಳುತ್ತಿರುವುದು ಸರಿಯಲ್ಲ. ಇದು ಬಡವರಿಗೆ ಹೊರೆಯಾಗಿ ಪರಿಣಮಿಸಿದ್ದು, ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ತುಂಗಾ ರಕ್ಷಣಾ ವೇದಿಕೆಯ ಕಾರ್ಯಕರ್ತರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಿದರು. 

2 ಜಿ ಮಾದರಿಯ 6,144 ಮನೆಗಳ ಹಂಚಿಕೆಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯ ಜೊತೆ ಸಾಮಾನ್ಯ ವರ್ಗದವರು 8000 ರೂ. ಹಾಗೂ ಪರಿಶಿಷ್ಟ ಜಾತಿ-ಪಂಗಡದವರಿಗೆ 5,000 ರೂ. ಮುಂಗಡವಾಗಿ ಪಾವತಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಉಳ್ಳವರು ಮಾತ್ರ ಮನೆ ಹೊಂದಲು ಸಾಧ್ಯವಾಗುತ್ತದೆ. ಅರ್ಹ ವಸತಿ ರಹಿತರು ಅರ್ಜಿ ಹಾಕಲು ಸಾಧ್ಯವಾಗದಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. 

ಈ ಹಿನ್ನೆಲೆಯಲ್ಲಿ ತಕ್ಷಣವೇ ಮುಂಗಡ ಹಣ ಪಾವತಿ ಮಾಡುವುದನ್ನು ರದ್ದುಗೊಳಿಸಬೇಕು. ಮನೆ ಹಂಚಿಕೆಯಾದ ನಂತರ ಫಲಾನುಭವಿಗಳಿಂದ ಹಣ ಪಾವತಿಸಿಕೊಳ್ಳುವ ವ್ಯವಸ್ಥೆ ಆರಂಭಿಸಬೇಕು. ಇದರಿಂದ ಸಾವಿರಾರು ಬಡ ವಸತಿ ರಹಿತರು ಅರ್ಜಿ ಸಲ್ಲಿಸಲು ಸಾಧ್ಯವಾಗಲಿದೆ ಎಂದ ಪ್ರತಿಭಟನಾಕಾರರು ತಿಳಿಸಿದ್ದಾರೆ. 

ಇತರೆ ಬೇಡಿಕೆ: ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸಬೇಕು. ನಗರದ ರಸ್ತೆಯ ಮಧ್ಯಭಾಗದಿಂದ ಬಲ ಮತ್ತು ಎಡಬದಿಯಲ್ಲಿ ಎಷ್ಟು ವಿಸ್ತೀರ್ಣ ಇದೆ, ಪಾದಚಾರಿಗಳಿಗೆ ಎಷ್ಟು ಅಡಿ ಮೀಸಲಿಡಲಾಗಿದೆ ಎಂಬುದರ ಕುರಿತಾಗಿ ಪ್ರತಿಯೊಂದು ಮಾರ್ಗಗಳಲ್ಲಿಯೂ ಕಡ್ಡಾಯವಾಗಿ ನಾಮಫಲಕ ಅಳವಡಿಕೆ ಮಾಡಬೇಕು. 
ಕಾನೂನುಬಾಹಿರವಾಗಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡವರು ಹಾಗೂ ಪಾದಚಾರಿ ಮಾರ್ಗ ಕಬಳಿಸಿ ಬಾಡಿಗೆ ನೀಡಿದವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಜಿಲ್ಲೆಯಲ್ಲಿ ಪಾದಚಾರಿ ಮಾರ್ಗಗಳಿಗೆ ಕಬ್ಬಿಣ ತಡೆಗಟ್ಟುಗಳನ್ನು ಅಳವಡಿಸಬೇಕು. ಸಾರ್ವಜನಿಕ ಪಾದಚಾರಿ ಸುರಂಗ ಮಾರ್ಗ ಬಳಕೆಗೆ ಅರಿವು ಮೂಡಿಸಬೇಕು. ಸುರಂಗ ಮಾರ್ಗದಲ್ಲಿ ಸಿಸಿಟಿವಿ ಅಳವಡಿಕೆ ಮತ್ತು ಭದ್ರತಾ ಸಿಬ್ಬಂದಿ ನೇಮಕ ಮಾಡಬೇಕು. ಸರ್ಕಾರಿ ಆಸ್ಪತ್ರೆ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಣೆ ಮಾಡುವುದರ ಮೇಲೆ ನಿರ್ಬಂಧ ಹೇರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. 

ತುಂಗಾ ನದಿಗೆ ಒಳಚರಂಡಿ ನೀರು ಸೇರುವುದನ್ನು ತಪ್ಪಿಸಲು ಶುದ್ದೀಕರಣ ಘಟಕ ನಿರ್ಮಿಸಬೇಕು. ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಯವತಿಯಿಂದ ಬೀದಿಗಿಳಿದು ನಿರಂತರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಶಂಕರ್‍ನಾಗ್ ಸೇರಿದಂತೆ ಮೊದಲಾದವರಿದ್ದರು. 

ಪಾಲಿಕೆ ಆಯುಕ್ತರ ಎತ್ತಂಗಡಿ ಹುನ್ನಾರಕ್ಕೆ ಖಂಡನೆ
ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮುಲ್ಲೈ ಮುಹಿಲನ್‍ರವರನ್ನು ಎತ್ತಂಗಡಿ ಮಾಡಲು ಕೆಲ ಪ್ರಭಾವಿಗಳು ಹುನ್ನಾರ ನಡೆಸಿದ್ದಾರೆಂಬ ಮಾಹಿತಿಯಿದೆ. ಇದು ಖಂಡನಾರ್ಹವಾದುದಾಗಿದೆ. ಯಾವುದೇ ಕಾರಣಕ್ಕೂ ಆಯುಕ್ತರನ್ನು ವರ್ಗಾವಣೆ ಮಾಡಬಾರದು ಎಂದು ಕರ್ನಾಟಕ ತುಂಗಾ ರಕ್ಷಣಾ ವೇದಿಕೆಯ ಕಾರ್ಯಕರ್ತರು ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News