ಚಿಕ್ಕಮಗಳೂರು : ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಬಿ.ರವಿಕುಮಾರ್

Update: 2017-12-11 15:07 GMT

ಚಿಕ್ಕಮಗಳೂರು, ಡಿ.11: ಜಿಲ್ಲೆಯ ರಂಗಭೂಮಿ ಕ್ಷೇತ್ರದಲ್ಲಿ ನಾಟಕ ಕಲಾವಿದನಾಗಿ, ನಿರ್ದೇಶಕನಾಗಿ ಮಾಡಿರುವ ಸೇವೆಯನ್ನು ಪರಿಗಣಿಸಿ ಕರ್ನಾಟಕ ನಾಟಕ ಅಕಾಡೆಮಿ ನೀಡುವ ವಾರ್ಷಿಕ ಪ್ರಶಸ್ತಿಗೆ ಚಿಕ್ಕಮಗಳೂರಿನ ಮೆಸ್ಕಾಂ ಜಾಗೃತದಳದಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿ.ರವಿಕುಮಾರ್ ಭಾಜನರಾಗಿದ್ದಾರೆ.

 ಬಿ.ರವಿಕುಮಾರ್ ಬಿಡುವಿಲ್ಲದ ಒತ್ತಡದ ಆರಕ್ಷಕ ಸೇವೆಯ ನಡುವೆಯೂ ರಂಗಭೂಮಿಯ ಅಪಾರ ಒಲವನ್ನು ಹೊಂದಿ ರಂಗಭೂಮಿಯ ಉಳಿವಿಗೆ ಶ್ರಮಿಸುತ್ತಿದ್ದಾರೆ. ಇವರು ನಗರದ ಮಾರ್ಕೇಟ್ ರಸ್ತೆಯ ಹುಲಿಬಂಗಾರಸ್ವಾಮಿ ಎಂದು ಖ್ಯಾತರಾಗಿರುವ ಬಂಗಾರಸ್ವಾಮಿ ಮತ್ತು ಯಶೋಧ ದಂಪತಿಗಳ ಹಿರಿಯ ಪುತ್ರ.

ತಮ್ಮ ಪ್ರಾಥಮಿಕ ಶಿಕ್ಷಣ ಮಾಡಿದ ನಗರದ ಪೋರ್ಟರ್‌ಪೇಟೆ ಶಾಲೆಯ ವೈ.ಪುಟ್ಟಸ್ವಾಮಪ್ಪನವರ ರಂಗಭೂಮಿ ಗರಡಿಯಲ್ಲಿ ರಂಗಾಸಕ್ತಿ ಮೂಡಿಸಿಕೊಂಡ ಹಲವು ಕಲಾವಿದರಲ್ಲಿ ಬಿ.ರವಿಕುಮಾರ್ ಸಹ ಒಬ್ಬರು.

ಪುಟ್ಟಸ್ವಾಮಪ್ಪನವರಲ್ಲಿ ಏಕಾಪಾತ್ರಾಭಿನಯಗಳನ್ನು ಕಲಿಯುವ ಮೂಲಕ ರಂಗಭೂಮಿ ಸಂಪರ್ಕಕ್ಕೆ ಬಂದು ನಂತರ ಪ್ರೌಢಶಾಲೆ, ಕಾಲೇಜ್ ಓದಿನ ದಿನಗಳಲ್ಲಿ ಕಾಲೇಜ್‌ಗಳಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದರು.

ಇದರೊಂದಿಗೆ ಸುಮಾರು 15 ಬಾರಿ ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟ, ರಾಜ್ಯಮಟ್ಟ, ರಾಷ್ಟ್ರ ಮಟ್ಟದ ಯುವಜನೋತ್ಸವಗಳಲ್ಲಿ ತಮ್ಮ ತಂಡದೊಂದಿಗೆ ಹಿಂದಿ ನಾಟಕಗಳನ್ನು ರಚಿಸಿ ನಿರ್ದೇಶಿಸಿ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಪೊಲೀಸ್ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತಾವೇ ನಾಟಕ ರಚಿಸಿ ನಿರ್ದೇಶಿಸಿ, ಸ್ವತಃ ರಂಗಪರಿಕರಗಳನ್ನು ತಯಾರಿಸಿ ವಸ್ತ್ರಾಲಂಕಾರದ ಜವಾಬ್ದಾರಿಯನ್ನು ಹೊತ್ತು ವರ್ಣಾಲಂಕಾರವನ್ನು ಮಾಡಿ ಹಲವು ನಾಟಕಗಳನ್ನು ರಂಗದಲ್ಲಿ ಪ್ರಸ್ತುತ ಪಡಿಸಿದ್ದಾರೆ. ಇಂದಿಗೂ ಶಾಲಾ ಮಕ್ಕಳಿಗೆ ಪೌರಾಣಿಕಾ, ಐತಿಹಾಸಿಕ, ಸಾಮಾಜಿಕ ಪಾತ್ರಗಳಿಗೆ ವೇಷ ಭೂಷಣಗಳನ್ನು ತೊಡಿಸಿ ತಮ್ಮ ಕಲೆಯನ್ನು ಧಾರೆ ಎರೆಯುತ್ತಿದ್ದಾರೆ.

ತನ್ನ ಆರಕ್ಷಕ ವೃತ್ತಿಯೊಂದಿಗೆ ರಂಗಕಲೆಯನ್ನು ತನ್ನ ಉಸಿರಾಗಿಸಿಕೊಂಡು ಕಲಾಸೇವೆ ಮಾಡುತ್ತಿರುವ ಬಿ.ರವಿಕುಮಾರ್‌ರವರ ಪ್ರತಿಭೆಯನ್ನು ಗರುತಿಸಿ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿರುವುದು ಸಾಧಕನಿಗೆ ಸಂದ ಗೌರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News