ಭಾರತ-ಅಫ್ಘಾನಿಸ್ತಾನ ತಂಡಗಳ ನಡುವೆ ಐತಿಹಾಸಿಕ ಟೆಸ್ಟ್ ಸರಣಿ

Update: 2017-12-11 18:25 GMT

ಹೊಸದಿಲ್ಲಿ, ಡಿ.11: ಭಾರತದಲ್ಲಿ 2019ರಿಂದ 2023ರ ತನಕ ಭಾರತದ ಕ್ರಿಕೆಟ್ ತಂಡ ವಿವಿಧ ಮಾದರಿಯ ಕ್ರಿಕೆಟ್‌ನಲ್ಲಿ 81 ಪಂದ್ಯಗಳನ್ನು ಆಡಲಿದ್ದು, ಯುದ್ಧ ಸಂತ್ರಸ್ತ ಅಫ್ಘಾನಿಸ್ತಾನದೊಂದಿಗೆ ಐತಿಹಾಸಿಕ ಸರಣಿ ಆಯೋಜಿಸಲಿದೆ.

ಸೋಮವಾರ ಬಿಸಿಸಿಐನ ವಿಶೇಷ ಸಾಮಾನ್ಯ ಸಭೆಯಲ್ಲಿ ಪ್ರವಾಸ ಸರಣಿಗಳ ನಿರ್ಧಾರವಾಗಿದೆ.

ಇಂಗ್ಲೆಂಡ್, ದಕ್ಷಿಣ ಆಫ್ರಿಕ ಮತ್ತು ಆಸ್ಟ್ರೇಲಿಯ ತಂಡಗಳ ವಿರುದ್ಧದ ಪ್ರವಾಸ ಸರಣಿ ಇದರಲ್ಲಿ ಒಳಗೊಂಡಿದೆ.

ಅಫ್ಘಾನಿಸ್ತಾನ ಮತ್ತು ಟೀಮ್ ಇಂಡಿಯಾ ನಡುವೆ ಮೊದಲ ಬಾರಿ ಟೆಸ್ಟ್ ಸರಣಿ ಆಯೋಜಿಸಲು ವಿಶೇಷ ಸಾಮಾನ್ಯ ಸಭೆ ಒಪ್ಪಿಗೆ ನೀಡಿದೆ. ಆದರೆ ಐತಿಹಾಸಿಕ ಟೆಸ್ಟ್ ಸರಣಿಯ ದಿನಾಂಕ ನಿಗದಿಯಾಗಿಲ್ಲ.

ಆಸ್ಟ್ರೇಲಿಯ 2019ರಲ್ಲಿ ಅಫ್ಘಾನಿಸ್ತಾನದ ವಿರುದ್ಧದ ಟೆಸ್ಟ್ ಸರಣಿ ಆಯೋಜಿಸಲು ಈಗಾಗಲೇ ನಿರ್ಧರಿಸಿದೆ. ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ಸಂಬಂಧ ಗಟ್ಟಿಯಾಗಿರುವ ಹಿನ್ನೆಲೆಯಲ್ಲಿ ಭಾರತ ಐತಿಹಾಸಿಕ ಟೆಸ್ಟ್ ಆಯೋಜಿಸಲು ಮುಂದಾಗಿದೆ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಅಮಿತ್ ಚೌಧರಿ ತಿಳಿಸಿದ್ದಾರೆ.

 ಅಫ್ಘಾನಿಸ್ತಾನ ತಂಡದ ವಿರುದ್ಧ ಟೆಸ್ಟ್ ಸರಣಿ ಆಯೋಜಿಸಲು ಮುಂದಾಗಿರುವ ಬಿಸಿಸಿಐ ಪಾಕಿಸ್ತಾನದ ದ್ವಿಪಕ್ಷೀಯ ಸರಣಿಯ ಬೇಡಿಕೆಯನ್ನು ತಿರಸ್ಕರಿಸಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ 2012ರಿಂದ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಯೋಜನೆಗೊಂಡಿಲ್ಲ.

ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ತಂಡ ಕಳೆದ ಜೂನ್‌ನಲ್ಲಿ ಟೆಸ್ಟ್ ಸ್ಥಾನಮಾನ ಗಿಟ್ಟಿಸಿಕೊಂಡಿತ್ತು.ಏಕದಿನ ಮತ್ತು ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಪೂರ್ವ ಪ್ರದರ್ಶನ ನೀಡಿದ್ದ ಈ ಎರಡು ದೇಶಗಳ ಕ್ರಿಕೆಟ್ ತಂಡಗಳ ಟೆಸ್ಟ್ ಆಡುವ ಕನಸು ನನಸಾಗಲಿದೆ.

ಭಾರತವು ಅಫ್ಘಾನಿಸ್ತಾನ ತಂಡದ ಅಭಿವೃದ್ಧಿಗೆ ಕೊಡುಗೆ ನೀಡಿದೆ. ಭಾರತದ ಗ್ರೇಟರ್ ನೊಯ್ಡಿದಲ್ಲಿ ಅಫ್ಘಾನಿಸ್ತಾನ ತಂಡ ಐರ್ಲೆಂಡ್ ವಿರುದ್ಧ ಸರಣಿ ಆಯೋಜಿಸಿತ್ತು.

ಐಪಿಎಲ್‌ನಲ್ಲೂ ಅಫ್ಘಾನಿಸ್ತಾನದ ಇಬ್ಬರು ಆಟಗಾರರು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ರಶೀದ್ ಖಾನ್ ಮತ್ತು ಮುಹಮ್ಮದ್ ನಬಿ ಅವರು ಈ ವರ್ಷದ ಆರಂಭದಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಆಡುವ ಅವಕಾಶ ಪಡೆದಿದ್ದರು.

ಅಫ್ಘಾನಿಸ್ತಾನ 2010ರಲ್ಲಿ ವರ್ಲ್ಡ್ ಟ್ವೆಂಟಿ-20 ಟೂರ್ನಿಯಲ್ಲಿ ಆಡುವ ಅವಕಾಶ ಪಡೆದಿತ್ತು. ಅಂದಿನಿಂದ ಟ್ವೆಂಟಿ-20ಯಲ್ಲಿ 9ನೇ ಮತ್ತು ಮತ್ತು 50 ಓವರ್‌ಗಳ ಕ್ರಿಕೆಟ್ ರ್ಯಾಂಕಿಂಗ್‌ನಲ್ಲಿ 11ನೇ ಸ್ಥಾನ ಕಾಯ್ದುಕೊಂಡಿದೆ.

 2015-2019ರ ಅವಧಿಯಲ್ಲಿ ಭಾರತದ ಕ್ರಿಕೆಟ್ ತಂಡ 390 ದಿನಗಳ ಕಾಲ ಕ್ರಿಕೆಟ್ ಆಡಿತ್ತು. 2019ರಿಂದ 2023ರ ಅವಧಿಯಲ್ಲಿ ಆಟದ ದಿನಗಳು 306 ದಿನಗಳಿಗೆ ಸೀಮಿತಗೊಳ್ಳಲಿದೆ.

2021ಮತ್ತು 2023ರ ಅವಧಿಯಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವಕಪ್ ಪಂದ್ಯಗಳು ಇದರಲ್ಲಿ ಒಳಗೊಂಡಿಲ್ಲ. ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವಕಪ್‌ನ್ನು ಈ ಅವಧಿಯಲ್ಲಿ ಭಾರತ ಆಯೋಜಿಸಲಿದೆ.

ರಾಜಸ್ಥಾನ ಕ್ರಿಕೆಟ್ ಸಂಸ್ಥೆ(ಆರ್‌ಸಿಎ) ವಿರುದ್ಧದ ಅಮಾನತು ಆದೇಶವನ್ನು ಹಿಂಪಡೆಯಲು ನಿರ್ಧರಿಸಲಾಗಿದ್ದು, ಆದರೆ ಐಪಿಎಲ್‌ನಿಂದ ಹೊರದಬ್ಬಲ್ಪಟ್ಟ ಮಾಜಿ ಆಯುಕ್ತ ಲಲಿತ್ ಮೋದಿಯನ್ನು ಯಾವುದೇ ಕಾರಣಕ್ಕೂ ಕ್ರಿಕೆಟ್ ಆಡಳಿತದಲ್ಲಿ ಹಸ್ತಕ್ಷೇಪ ನಡೆಸಲು ಅವಕಾಶ ನೀಡದಂತೆ ಷರತ್ತು ವಿಧಿಸಲಾಗಿದೆ.

ಐಪಿಎಲ್ ಕೊಚ್ಚಿ ಟಸ್ಕರ್ಸ್‌ ತಂಡದ ವಿವಾದಕ್ಕೆ ಸಂಬಂಧಿಸಿ ಬಿಸಿಸಿಐ ಕಾನೂನು ಹೋರಾಟವನ್ನು ಮುಂದುವರಿಸಲಿದೆ ಎಂದು ಚೌಧರಿ ತಿಳಿಸಿದ್ದಾರೆ. ಆಟಗಾರರನ್ನು ಡೋಪ್ ಟೆಸ್ಟ್ ಒಳಪಡಿಸಲು ನಾಡಾಕ್ಕೆ ಅಧಿಕಾರ ನೀಡುವಂತೆ ವಾಡಾ ನೀಡಿರುವ ಪತ್ರದ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಕ್ರಿಕೆಟಿಗರನ್ನು ಡೋಪ್ ಟೆಸ್ಟ್‌ಗೆ ಒಳಪಡಿಸಬೇಕಾದ ಆವಶ್ಯಕತೆ ಇಲ್ಲ ಎಂದು ಬಿಸಿಸಿಐ ಹೇಳಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News