ಹೊನ್ನಾವರ: ನಾಪತ್ತೆಯಾಗಿದ್ದ ಗಫೂರ್ ಗೆ ನೀರು ನೀಡಿ ಮಾನವೀಯತೆ ಮೆರೆದ ಹಿಂದೂ ಕುಟುಂಬ

Update: 2017-12-12 11:27 GMT

ಹೊನ್ನಾವರ, ಡಿ.12: ತಾಲೂಕಿನ ಹಡೀನಬಾಳದಲ್ಲಿ ನಾಪತ್ತೆಯಾಗಿದ್ದ ಲಾರಿ ಚಾಲಕ ಅಬ್ದುಲ್ ಗಫೂರ್ ಪತ್ತೆಯಾಗಿದ್ದಾರೆ. ಗುಂಪೊಂದರಿಂದ ಹಲ್ಲೆಗೊಳಗಾಗಿದ್ದ ಇವರು 3 ದಿನಗಳ ಕಾಲ ಮೋರಿಯಲ್ಲಿ ಕಳೆದಿದ್ದು, ಹಿಂದೂ ಕುಟುಂಬವೊಂದು ನೀರು ನೀಡಿತ್ತು ಎಂದು ಗಫೂರ್ ರ ಸಹೋದರ ಸುಹೈಲ್ ಸುಂಠಿ ಮಾಹಿತಿ ನೀಡಿದ್ದಾರೆ.

 “ಹೊನ್ನಾವರದಿಂದ ಮರಳು ತರುತ್ತಿದ್ದಾಗ ಹಡೀನಬಾಳದಲ್ಲಿ ಗುಂಪೊಂದು ಗಫೂರ್ ಹಾಗು ಇತರ ಇಬ್ಬರಿದ್ದ ಲಾರಿಗೆ ಕಲ್ಲು ಹೊಡೆದು ಅವರನ್ನು ತಡೆದಿತ್ತು. ನಂತರ ಲಾರಿಯೊಳಗಿದ್ದ ಮೂವರನ್ನು ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿತ್ತು. ಈ ಸಂದರ್ಭ ಲಾರಿಯಲ್ಲಿದ್ದ ಇಬ್ಬರು ತಪ್ಪಿಸಿಕೊಂಡು ಓಡಿ ಹೋಗಿದ್ದರೆ, ಗಫೂರ್ ಗುಂಪಿನ ಕೈಗೆ ಸಿಕ್ಕಿ ಬಿದ್ದಿದ್ದರು. ಗಫೂರ್ ಮೇಲೆ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದ್ದು, ಹೇಗೋ ಅವರು ತಪ್ಪಿಸಿಕೊಂಡು ಅಲ್ಲೇ ಸಮೀಪದಲ್ಲಿದ್ದ  ಸಣ್ಣ ಕಾಡು ಸೇರಿದ್ದರು”.

“ರಾತ್ರಿ 8:30 ವೇಳೆಗೆ ಗಫೂರ್ ಕಾಡಿನಿಂದ ಹೊರಬರುತ್ತಲೇ ಹಲ್ಲೆ ನಡೆಸಿದ್ದ ಅದೇ ಗುಂಪು ಮತ್ತೊಮ್ಮೆ ಎದುರಾಗಿ, ಅವರ ಬಟ್ಟೆಗಳನ್ನು ಹರಿದು ಹಾಕಿತು. ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಚಾಕುವಿನಿಂದ ಬೆದರಿಸಿತ್ತು. ಗುಂಪಿನಲ್ಲಿದ್ದ ಓರ್ವ ಗಫೂರ್ ರ ಕಾಲಿಗೆ ಕಬ್ಬಿಣದ ರಾಡ್ ನಿಂದ ಬಲವಾಗಿ ಹೊಡೆದಿದ್ದು, ಕಾಲಿಗೆ ಗಂಭೀರ ಗಾಯಗಳಾಗಿವೆ. ಮತ್ತೊಬ್ಬ ಗಫೂರ್ ರ ಮೇಲೆ ಪೆಟ್ರೋಲ್ ಸುರಿಯಲು ಮುಂದಾದ ವೇಳೆ ಹತ್ತಿರದ ದೇವಸ್ಥಾನದ ಪೂಜಾರಿ ಹಾಗು ಕೆಲವರು ರಸ್ತೆಯಲ್ಲಿ ಬರುವುದನ್ನು ಗಮನಿಸಿದ ಗುಂಪು ಗಫೂರ್ ರನ್ನು ಅಲ್ಲೇ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದೆ”.

“ಗಂಭೀರ ಗಾಯವಾಗಿದ್ದ ಕಾಲನ್ನು ಎಳೆದುಕೊಂಡು ಗಫೂರ್ ಬಣಗಲ್ ನ ಗೇರುಬೀಜ ಫ್ಯಾಕ್ಟರಿಯ ಸಮೀಪದಲ್ಲಿದ್ದ ಬ್ರಾಹ್ಮಣರೊಬ್ಬರ ಮನೆಗೆ ತೆರಳಿ ನೀರು ಕೇಳಿ ಕುಡಿದಿದ್ದಾರೆ. ಅಲ್ಲದೆ ದುಷ್ಕರ್ಮಿಗಳು ಹರಿದು ಹಾಕಿದ್ದ ಪ್ಯಾಂಟನ್ನು ಧರಿಸಿ 3 ದಿನಗಳ ಕಾಲ ಸಮೀಪದಲ್ಲಿದ್ದ ಮೋರಿಯಲ್ಲಿ ದಿನ ಕಳೆದಿದ್ದಾರೆ. ಇಂದು ಬೆಳಗ್ಗೆ ವಾಕಿಂಗ್ ಗೆ ತೆರಳುತ್ತಿದ್ದ ದಂಪತಿ ಪರಿಸ್ಥಿತಿ ತಿಳಿಯಾಗಿರುವುದರ ಬಗ್ಗೆ ಮಾತನಾಡುತ್ತಿರುವುದನ್ನು ಗಮನಿಸಿದ ಗಫೂರ್ ಬೆಳಗ್ಗೆ ಸುಮಾರು 6:30ರ ವೇಳೆಗೆ ಮೋರಿಯಿಂದ ಹೊರ ಬಂದು ಸಮೀಪದಲ್ಲಿದ್ದ ಅಂಗಡಿಯಿಂದ ಟೂತ್ ಪೇಸ್ಟ್ ಖರೀದಿಸಿ ಹಿಂದಿರುಗುತ್ತಿದ್ದ ವೇಳೆ ಪೊಲೀಸರು ಎದುರಾಗಿದ್ದಾರೆ”

"ನಡೆದ ಘಟನೆಯನ್ನು ಪೊಲೀಸರಿಗೆ ವಿವರಿಸಿದ ಗಫೂರ್ ರನ್ನು ಪೊಲೀಸರು ಹೊನ್ನಾವರ ಠಾಣೆಗೆ ಕರೆದೊಯ್ದು ಬಳಿಕ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರ ಹಲ್ಲೆಗೊಳಗಾಗಿರುವ ಗಫೂರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಸುಹೈಲ್ ‘ವಾರ್ತಾ ಭಾರತಿ’ಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News