ದುರ್ಗದಹಳ್ಳಿ ದೇವಸ್ಥಾನದ ವಿಗ್ರಹ ಕಳವು ಪ್ರಕರಣ: ಮೂವರ ಸೆರೆ

Update: 2017-12-12 12:06 GMT

ಬಣಕಲ್, ಡಿ.12: ಕಳೆದ ಅಕ್ಟೋಬರ್‍ನಲ್ಲಿ ಸುಂಕಸಾಲೆ ಬಳಿಯ ಐತಿಹಾಸಿಕ ದುರ್ಗದಹಳ್ಳಿ ಶ್ರೀಕಾಲಬೈರವೇಶ್ವರ ದೇವಸ್ಥಾನದಲ್ಲಿ ಎರಡು ಬಾರಿ ವಿವಿಧ ವಿಗ್ರಹಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮಂದಿ ವಿಗ್ರಹ ಚೋರರನ್ನು ಬಾಳೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಯುವಕರಾದ ನಾಗರಭಾವಿಯ ಮನೋಜ್ ಆಲಿಯಾಸ್ ಮನು, ಮಲ್ಲತಹಳ್ಳಿಯ ವೆಂಕಟಚಲ ಆಲಿಯಾಸ್ ವೆಂಕಟೇಶ್ ಹಾಗೂ ಮಾಗಡಿ ಸಮೀಪದ ದೊಡ್ಡ ಸೋಮನಹಳ್ಳಿಯ ಗಿರೀಶ್ ಅಲಿಯಾಸ್ ಗಿರಿ ಬಂಧಿತ ಆರೋಪಿಗಳು.

ಅವರಿಂದ ಕಳವು ಮಾಡಿದ ವಿಗ್ರಹಗಳನ್ನು ಪೋಲಿಸರು ಬೆಂಗಳೂರಿಗೆ ಹೋಗಿ ವಶಪಡಿಸಿಕೊಳ್ಳಲಾಗಿದೆ. ದೇವಸ್ಥಾನದ ಕಳಶ ಮಾತ್ರ ಕಳ್ಳರು ಶ್ರೀರಂಗಪಟ್ಟಣ ಸಮೀಪದ ಕಾವೇರಿ ನದಿಗೆ ಎಸೆದಿದ್ದಾರೆ. ಅಲ್ಲಿ ಅದರ ಶೋಧ ಕಾರ್ಯವನ್ನು ಮಾಡಿದ್ದು, ಕಳಶ ಸಿಕ್ಕದಿರುವುದರಿಂದ ಸ್ಥಳೀಯ ಪೊಲೀಸರ ಸಹಾಯ ಕೋರಿದ್ದು, ಅದರ ಶೋಧಕಾರ್ಯ ನಡೆಯುತ್ತಿದೆ. 3 ಮಂದಿ ವಿಗ್ರಹ ಚೋರರನ್ನು ಬಂಧಿಸಿ ದೇವಸ್ಥಾನದ ಸ್ಥಳ ಮಹಜರು ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪುರಾತನ ಐತಿಹಾಸಿಕ ದುರ್ಗದಹಳ್ಳಿಯ ದೇವಸ್ಥಾನದಲ್ಲಿ ಗುರಾಣಿ, ಪಂಜುರ್ಲಿ ಮತ್ತು ದೇವರ ವಿಗ್ರಹವನ್ನು ಮೊದಲ ಬಾರಿಗೆ ಕಳವು ಮಾಡಿದ ಕಳ್ಳರು ಯಾವುದೇ ಸಾಕ್ಷ್ಯ ಬಿಡದೇ ಪರಾರಿಯಾಗಿದ್ದರು. ಬಾಳೂರು ಪೋಲಿಸರಿಗೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಅದರ ನಂತರ ಕೆಲವೇ ದಿನಗಳಲ್ಲಿ ಎರಡನೇ ಬಾರಿಗೆ ದೇವಸ್ಥಾನದ ಕಳಶವನ್ನು ಕಳವು ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿದ್ದ ಬಾಳೂರು ಪೊಲೀಸರು 2ನೇ ಬಾರಿಯ ಕಳವು ಜಾಡನ್ನು ಹಿಡಿದು ದೇವಸ್ಥಾನದಲ್ಲಿ ತೀವ್ರ ಶೋಧ ನಡೆಸಿದಾಗ ವಾಹನದ ವೀಲ್ ಅಲೈಮೆಂಟ್ ಮಾಡಿದ್ದ ಬೆಂಗಳೂರಿನ ಗ್ಯಾರೇಜ್ ಒಂದರ ಚೀಟಿಯೊಂದು ಕಳ್ಳರು ದೇವಸ್ಥಾನದ ಮೇಲೇರುವಾಗ ಸಿಕ್ಕಿದ್ದು ಕಳ್ಳತನ ಮಾಡಿದ ಕದೀಮರನ್ನು ಸೆರೆ ಹಿಡಿಯಲು ಸಾಧ್ಯವಾಯಿತು.

ಕಾರ್ಯಚರಣೆಯಲ್ಲಿ ಬಾಳೂರು ಪೋಲಿಸರಾದ ಪಿಎಸೈ ಮಂಜಯ್ಯ, ದಫೇದಾರ್ ರವೀಂದ್ರ, ಇಮ್ತಿಯಾಜ್, ಸಿಬ್ಬಂದಿಗಳಾದ ಜಾಫರ್, ಗಿರೀಶ್, ದೇವರಾಜ್, ವೈಭವ್,ಅನ್ವರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News