ಖಾಸಗೀಕರಣಕ್ಕೆ ವಿರೋಧ : ಬಿಎಸ್‍ಎನ್‍ಎಲ್ ನೌಕರರಿಂದ ಮುಷ್ಕರ

Update: 2017-12-12 12:53 GMT

ಮಡಿಕೇರಿ ಡಿ.12 : ಬಿಎಸ್‍ಎನ್‍ಎಲ್ ವ್ಯವಸ್ಥೆಯನ್ನು ಕೇಂದ್ರ ಸರಕಾರ ಖಾಸಗೀಕರಣಗೊಳಿಸುತ್ತಿದೆ ಎಂದು ಆರೋಪಿಸಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಎಸ್‍ಎನ್‍ಎಲ್ ನೌಕರರ ಸಂಘಟನೆಗಳು ಮತ್ತು ನೌಕರರ ಒಕ್ಕೂಟಗಳ ಜಂಟಿ ಕ್ರಿಯಾ ಸಮಿತಿ ಮುಷ್ಕರದ ಹಾದಿ ಹಿಡಿದಿವೆ.

 ಕೇಂದ್ರ ಸರ್ಕಾರ ತನ್ನ ಇತರ ಇಲಾಖೆಗಳ ನೌಕರರಿಗೆ ಮೂರನೇ ವೇತನ ಆಯೋಗದ ಶಿಫಾರಸ್ಸಿನಂತೆ ನೀಡುತ್ತಿರುವ ಸೌಲಭ್ಯಗಳನ್ನು ಬಿಎಸ್‍ಎನ್‍ಎಲ್ ನೌಕರರಿಗೂ ಒದಗಿಸಬೇಕೆಂದು ಮಡಿಕೇರಿ ನಗರದ ಮುಖ್ಯ ಕಛೇರಿ ಎದುರು ಪ್ರತಿಭಟನಾಕಾರರು ಒತ್ತಾಯಿಸಿದರು.

 ದೇಶದಲ್ಲಿರುವ ದೂರವಾಣಿ ಟವರ್‍ಗಳ ನಿರ್ವಹಣೆಯನ್ನು ಕೂಡ ಕೇಂದ್ರ ಸರಕಾರ ಖಾಸಗಿ ವಲಯಕ್ಕೆ ನೀಡಲು ಮುಂದಾಗಿದ್ದು, ಇದು ಸರಿಯಾದ ಕ್ರಮವಲ್ಲವೆಂದರು. ಖಾಸಗೀಕರಣಗೊಂಡರೆ ಭಾರತ ಸಂಚಾರ ನಿಗಮವು ಅಸ್ತಿತ್ವ ಕಳೆದು ಕೊಳ್ಳುವ ಆತಂಕವನ್ನು ಎದುರಿಸಬೇಕಾಗುತ್ತದೆ.

ಅಖಿಲ ಭಾರತ ಮಟ್ಟದಲ್ಲಿ ಡಿ.12 ಮತ್ತು 13 ರಂದು ಮುಷ್ಕರ ನಡೆಸಲಾಗುತ್ತಿದ್ದು, ಕೊಡಗು ಬಿಎಸ್‍ಎನ್‍ಎಲ್ ಕೂಡ ಬೆಂಬಲ ನೀಡುತ್ತಿದೆ ಎಂದು ಪ್ರಮುಖರು ತಿಳಿಸಿದರು. ಸರಕಾರ 75 ಸಾವಿರ ಟವರ್‍ಗಳನ್ನು ಖಾಸಗೀಕರಣಗೊಳಿಸುವ ಹುನ್ನಾರದಲ್ಲಿ ತೊಡಗಿದೆ ಮತ್ತು ಮೂರನೇ ವೇತನ ಆಯೋಗದ ವರದಿಯನ್ನು ತಡೆ ಹಿಡಿಯಲಾಗಿದೆ. ಇದರ ವಿರುದ್ಧ ಎಲ್ಲಾ ಸಂಘಟನೆಗಳು ಒಗ್ಗೂಡಿ ಪ್ರತಿಭಟನೆಯನ್ನು ನಡೆಸುತ್ತಿವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಕನಿಷ್ಠ ವೇತನವನ್ನು ಹೆಚ್ಚಿಸಬೇಕು, ದಿನಗೂಲಿ ನೌಕರರನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಪ್ರಮುಖರಾದ ಕೃಷ್ಣ, ಪ್ರಕಾಶ್, ವಿಜು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News