ಪಾಕ್ ಐಎಸ್‌ಐಗೆ ಪಠಾಣ್‌ಕೋಟ್ ಪಿಕ್ನಿಕ್ ಗೆ ಅನುಮತಿಸಿದ್ದ ಮೋದಿ: ಲಾಲೂ ಟೀಕೆ

Update: 2017-12-12 13:08 GMT

ಹೊಸದಿಲ್ಲಿ, ಡಿ.12 : ಕಾಂಗ್ರೆಸ್ ಪಕ್ಷ ಪಾಕಿಸ್ತಾನದ ಜತೆ ಸೇರಿಕೊಂಡು ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಯತ್ನಿಸುತ್ತಿದೆಯೆಂದು ಪ್ರಧಾನಿ ಆರೋಪಿಸಿದ ಬೆನ್ನಲ್ಲೇ ಪ್ರಧಾನಿಯನ್ನು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ತೀವ್ರವಾಗಿ ಟೀಕಿಸಿದ್ದಾರೆ. ಪ್ರಧಾನಿಯದ್ದು ಬೂಟಾಟಿಕೆ ಎಂದು ಆರೋಪಿಸಿದ ಲಾಲು, ‘‘ಅವರು ಪಾಕಿಸ್ತಾನದ ಕುಖ್ಯಾತ ಐಎಸ್‌ಐಗೆ ನಮ್ಮ ಅತಿ ಸೂಕ್ಷ್ಮ ಪಠಾಣಕೋಟ್ ವಾಯುನೆಲೆಯಲ್ಲಿ ಪಿಕ್ನಿಕ್ಕಿಗೆ ಅನುಮತಿಸಿದ್ದರು’’ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಪಾಕಿಸ್ತಾನದ ಮೇಲೆ ಪ್ರೀತಿಯಿದೆ ಎಂದು ಹೇಳಲು ಬಿಜೆಪಿ ಹಾಗೂ ಮೋದಿಗೆ ಯಾವ ಹಕ್ಕೂ ಇಲ್ಲ ಎಂದು ಹೇಳಿದ ಲಾಲು, ಪ್ರಧಾನಿ ಆಹ್ವಾನವಿಲ್ಲದೆಯೇ ಪಾಕಿಸ್ತಾನಕ್ಕೆ ತೆರಳಿ ಆಗಿನ ಪ್ರಧಾನಿ ನವಾಜ್ ಶರೀಫ್ ಅವರ ನಿವಾಸಕ್ಕೆ ಭೇಟಿ ನೀಡಿದ್ದನ್ನೂ ಟ್ವೀಟ್ ಒಂದರಲ್ಲಿ ಉಲ್ಲೇಖಿಸಿದ್ದಾರೆ.

ಪ್ರಧಾನಿ ತನ್ನ ಪ್ರಮಾಣ ವಚನ ಸಮಾರಂಭಕ್ಕೂ ನವಾಜ್ ಶರೀಫ್ ಅವರನ್ನು ಆಹ್ವಾನಿಸಿದ್ದರು, ಅವರಿಗೆ ಉಡುಗೊರಗಳನ್ನು ನೀಡಿದ್ದಾರೆ. ‘‘ನೀವು ಪಾಕಿಸ್ತಾನವನ್ನು ದ್ವೇಷಿಸುತ್ತೀರಾದರೆ ಅದರ ಮೋಸ್ಟ್ ಫೇವರ್ಡ್ ನೇಶನ್ ಸ್ಥಾನಮಾನವನ್ನೇಕೆ ಕಸಿದಿಲ್ಲ?,’’ ಎಂದು ಲಾಲು ಪ್ರಶ್ನಿಸಿದ್ದಾರೆ.

ಲಾಲು ಪುತ್ರ ಹಾಗೂ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಕೂಡ ಪ್ರಧಾನಿ ಹಿಂದೊಮ್ಮೆ ಮಾಡಿದ ಟ್ವೀಟನ್ನು ರಿಟ್ವೀಟ್ ಮಾಡಿದ್ದರು. ತಮ್ಮನ್ನು ಬರಮಾಡಿಕೊಳ್ಳಲು ಹಾಗೂ ಬೀಳ್ಕೊಡಲು ಆಗ ಪಾಕ್ ಪ್ರಧಾನಿಯಾಗಿದ್ದ ಶರೀಫ್ ಲಾಹೋರ್ ವಿಮಾನ ನಿಲ್ದಾಣದ ತನಕ ಬಂದಿದ್ದು ತನ್ನ ಹೃದಯಕ್ಕೆ ತಟ್ಟಿದೆ ಎಂದು ಮೋದಿ ಹೇಳಿಕೊಂಡಿದ್ದರು. ಇದನ್ನು ಉಲ್ಲೇಖಿಸಿದ ತೇಜಸ್ವಿ ಇದೇ ಮಾತನ್ನು ವಿಪಕ್ಷದವರು ಹೇಳಿದ್ದರೆ ಮೋದಿ ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News