ಪರೇಶ್ ಮೇಸ್ತ ಸಾವು ಪ್ರಕರಣವನ್ನು ಎನ್ ಐಎಗೆ ನೀಡಲು ಆಗ್ರಹ

Update: 2017-12-12 13:12 GMT

ಸೊರಬ, ಡಿ.12: ಹೊನ್ನಾವರದಲ್ಲಿ ನಡೆದ ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತ ಸಾವು ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು ಹಾಗು ತಪ್ಪಿತಸ್ಥರನ್ನು ಬಂದಿಸಿ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ಶ್ರೀ ರಾಮಸೇನೆ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ  ಭಜರಂಗದಳ ಸಂಚಾಲಕ ಮಹಿಪಾಲ್ ಮಾತನಾಡಿ, ರಾಜ್ಯದಲ್ಲಿ ಕೆಲವು ವರ್ಷಗಳಿಂದ ಇದೇ ರೀತಿಯಲ್ಲಿ ಹಿಂದೂ ಸಂಘಟನೆಯ ಯುವಕರನ್ನು ಕೊಲ್ಲಲಾಗುತ್ತಿದೆ.  ಅದೇ ರೀತಿ ಹೊನ್ನಾವರದ ಬಡ ಮೀನುಗಾರರ ಕುಟುಂಬದ ಪರೇಶ್ ಮೇಸ್ತ ಅವರನ್ನು ಕೊಲೆ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.  ಈ ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳು ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ.  ಸರ್ಕಾರ ಕೂಡಲೇ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸಬೇಕು. ಪ್ರತ್ಯೇಕವಾದಿಗಳನ್ನು ಹಾಗೂ ದೇಶದ್ರೋಹಿಗಳನ್ನು ಯಾವುದೇ ಮುಲಾಜಿಲ್ಲದೇ ಹತ್ತಿಕ್ಕಬೇಕು. ವೈಯುಕ್ತಿಕ ಹಾಗೂ ರಾಜಕೀಯ ಲಾಭನಷ್ಟಗಳ ಲೆಕ್ಕಾಚಾರ ಹಾಕದೇ ಸರ್ಕಾರ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

 ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಮುಖ್ಯಬೀದಿಯಲ್ಲಿ ಸಾಗಿ ಪಟ್ಟಣ ಪಂಚಾಯ್ತಿ ಮುಂಭಾಗದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ಪ್ರತಿಭಟಿಸಿ ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಭಜರಂಗದಳ ತಾಲೂಕು ಸಂಚಾಲಕ ರವಿ ಗುಡಿಗಾರ, ಅರುಣ ಕುಮಾರ್, ರಂಗನಾಥ, ಆಟೋ ಶಿವು, ನೆಮ್ಮದಿ ಸುಬ್ಬು, ಸಚೀನ್, ಸುರೇಶ ಭಂಡಾರಿ, ಸೀತಾರಾಮ, ನಂದೀಶ, ಗಣೇಶ, ರಾಕೇಶ, ವಿನಾಯಕ ಸೇರಿದಂತೆ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News