ಬಸ್, ಕಾರು, ಆಟೋಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

Update: 2017-12-12 13:44 GMT

ಶಿವಮೊಗ್ಗ, ಡಿ. 12: ಮನೆ ಮುಂಭಾಗ ನಿಲ್ಲಿಸಿದ್ದ ಎರಡು ಬಸ್, ಕಾರು ಹಾಗೂ ಆಟೋಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ತಡರಾತ್ರಿ ನಗರದ ಎಂ.ಆರ್.ಎಸ್. ವೃತ್ತ ಸಮೀಪದ ಜ್ಯೋತಿ ನಗರ ಬಡಾವಣೆ 2 ನೇ ತಿರುವಿನಲ್ಲಿ ನಡೆದಿದೆ.

ಪ್ರಕಾಶ್ ಎಂಬುವರಿಗೆ ಸೇರಿದ ಎರಡು ಬಸ್, ಕಾರೊಂದಕ್ಕೆ ಬೆಂಕಿ ಹಚ್ಚಲು ಕಿಡಿಗೇಡಿಗಳು ಯತ್ನಿಸಿದ್ದಾರೆ. ಒಂದು ಬಸ್‍ನ ಬಾನೆಟ್‍ಗೆ ಹಾಗೂ ಮತ್ತೊಂದು ಬಸ್‍ನ ಚಕ್ರಕ್ಕೆ ಬೆಂಕಿ ಹಾಕಿದ್ದಾರೆ. ಆದರೆ ಬೆಂಕಿಯಿಂದ ಈ ಎರಡು ಬಸ್‍ಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದ್ದು, ಉಳಿದಂತೆ ಹೆಚ್ಚಿನ ಅನಾಹುತವಾಗಿಲ್ಲ. ಕಾರಿಗೆ ಸ್ವಲ್ಪ ಪ್ರಮಾಣದ ಹಾನಿಯಾಗಿದೆ.

ಪ್ರಕಾಶ್‍ರವರ ಮನೆಯ ಸಮೀಪವೇ ಇರುವ ಅಣ್ಣಪ್ಪ ಎಂಬುವರಿಗೆ ಸೇರಿದ ಆಟೋಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಆಟೋವು ಸಂಪೂರ್ಣ ಸುಟ್ಟು ಕರಕಲಾಗಿದೆ. ಸರಿಸುಮಾರು 1.50 ಲಕ್ಷ ರೂ. ನಷ್ಟವಾಗಿದೆ ಎಂದು ಹೇಳಲಾಗಿದೆ. ವಾಹನಗಳಿಗೆ ಬೆಂಕಿ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ನಾಗರೀಕರು ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಜೊತೆಗೆ ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ, ಹೆಚ್ಚುವರಿ ಎಸ್.ಪಿ. ಮುತ್ತುರಾಜ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದರು. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾಹನಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು ಕ್ರಮಕೈಗೊಂಡಿದ್ದಾರೆ.

ಕಾರಣವೇನು?: ವಾಹನಗಳಿಗೆ ಬೆಂಕಿ ಹಾಕಿದವರ್ಯಾರು ಎಂಬುವುದು ಇಲ್ಲಿಯವರೆಗೂ ಸ್ಪಷ್ಟವಾಗಿಲ್ಲ. ಆದರೆ ಪೊಲೀಸ್ ಇಲಾಖೆಯ ಮೂಲಗಳು ಹೇಳುವ ಪ್ರಕಾರ, ವೈಯಕ್ತಿಕ ವೈಷಮ್ಯದ ಕಾರಣದಿಂದ ಈ ಘಟನೆ ನಡೆದಿದೆ. ಆರೋಪಿಗಳ ಸುಳಿವು ಪತ್ತೆಯಾಗಿದ್ದು ಆದಷ್ಟು ಶೀಘ್ರದಲ್ಲಿಯೇ ಬಂಧಿಸುವುದಾಗಿ ತಿಳಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News