ಎಐಸಿಸಿ ಅಧ್ಯಕ್ಷರಾಗಿ ರಾಹುಲ್‌ಗಾಂಧಿ ಅವಿರೋಧ ಆಯ್ಕೆ: ಕೆಪಿಸಿಸಿ ಕಚೇರಿಯಲ್ಲಿ ಸಂಭ್ರಮ

Update: 2017-12-12 15:30 GMT

ಬೆಂಗಳೂರು, ಡಿ.12: ಎಐಸಿಸಿ ಅಧ್ಯಕ್ಷರಾಗಿ ರಾಹುಲ್‌ಗಾಂಧಿ ಅವಿರೋಧ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಹುಲ್‌ಗಾಂಧಿ ಯುವ ಪೀಳಿಗೆಯ ನೇತಾರ, ಅವರ ಸಾರಥ್ಯದಲ್ಲಿ ಕಾಂಗ್ರೆಸ್ ಮತ್ತೆ ರಾಜ್ಯ ಹಾಗೂ ರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

 ಈ ತಿಂಗಳಿನಿಂದಲೆ ನಮ್ಮ ಪ್ರವಾಸ ಆರಂಭವಾಗಲಿದೆ. ನಮ್ಮ ಶಾಸಕರು ಗೆದ್ದಿರುವ ಹಾಗೂ ಇತರೆ ಕ್ಷೇತ್ರಗಳಲ್ಲಿಯೂ ಮುಖ್ಯಮಂತ್ರಿ ಪ್ರವಾಸ ಮಾಡಲಿದ್ದಾರೆ. ನಾವು ನಮ್ಮ ಅಭ್ಯರ್ಥಿಗಳು ಪರಾಭವಗೊಂಡಿರುವ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತೇವೆ ಎಂದು ಅವರು ಹೇಳಿದರು.

ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯರನ್ನು ಇಂದು ಅವರ ನಿವಾಸದಲ್ಲಿ ಭೇಟಿ ಮಾಡಿದ ವಿಚಾರದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಕ್ಷೇತ್ರದಲ್ಲಿ ಅವರ ಇಲಾಖೆಗೆ ಸಂಬಂಧಿಸಿದ ಕೆಲ ಕೆಲಸಗಳು ಆಗಬೇಕಿತ್ತು. ಆ ವಿಚಾರವನ್ನು ಚರ್ಚಿಸಲು ಹೋಗಿದ್ದೆ ಎಂದರು.

ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಮಾಡುವ ವಿಚಾರದ ಕುರಿತು ರಾಜ್ಯ ಸರಕಾರ ಕೈಗೊಳ್ಳುವ ನಿರ್ಧಾರಕ್ಕೆ ನಾವು ಸಹಕಾರ ನೀಡಲಿದ್ದೇವೆ ಎಂದ ಪರಮೇಶ್ವರ್, ಹತ್ಯೆಗಳನ್ನು ಬಿಜೆಪಿಯವರು ರಾಜಕೀಯಕ್ಕಾಗಿ ಕೋಮುವಾದದ ಬಣ್ಣ ಬಳಿಯುತ್ತಿದ್ದಾರೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ಪ್ರಧಾನ ಕಾರ್ಯದರ್ಶಿ ಆಗಾ ಸುಲ್ತಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News