ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ: ಇಕ್ಬಾಲ್ ಹುಸೆನ್

Update: 2017-12-12 18:24 GMT

ರಾಮನಗರ,ಡಿ.12: ಜನತೆ, ಕಾರ್ಯಕರ್ತರು ಹಾಗೂ ಪಕ್ಷದ ವರಿಷ್ಠರು ಒಪ್ಪಿ ಕಣಕ್ಕೆ ಇಳಿಸಿದರೆ ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದು ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೈನ್ ಕಿವಿಮಾತು ಹೇಳಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿ ಮಿನಿವಿಧಾನಸೌಧ ಸಮೀಪ ಮುಂದಿನ ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಪ್ರಾರಂಭಿಸಿರುವ ನೂತನ ಕಾಂಗ್ರೆಸ್ ಪಕ್ಷದ ಕಚೇರಿ ಉದ್ಘಾಟನೆ ಸಂದರ್ಭದಲ್ಲಿ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಹಣ, ಅಧಿಕಾರಕ್ಕಾಗಿ ತಾನೆಂದು ಆಸೆಪಟ್ಟವನಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದಲ್ಲಿ ತೊಡಗಿಸಿಕೊಂಡಿರುವೆ. ಜಿಪಂ ಅಧ್ಯಕ್ಷನಾಗಿದ್ದ ಸಂದರ್ಭ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ವಿಶ್ವಾಸ ಗಳಿಸಿಕೊಂಡಿದ್ದೇನೆ. ಪಕ್ಷ ಇದನ್ನು ಗಮನಿಸಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿಯ ಹೊಣೆ ಹೊತ್ತ ಡಿ.ಕೆ.ಶಿವಕುಮಾರ್ ಅವರು ನಾಲ್ಕು ಕ್ಷೇತ್ರದಲ್ಲಿ ಪ್ರತಿನಿತ್ಯ ಆಗುತ್ತಿರುವ ಬೆಳವಣಿಗೆಳನ್ನು ಗಮನಿಸುತ್ತಿದ್ದಾರೆ. ನಮ್ಮ ಪಕ್ಷದ ಮುಖಂಡ ಮರಿದೇವರು ಅವರ ಸ್ಮರಣಾರ್ಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಅವರ ನೆನಪಿನಲ್ಲಿ ಬಡ ಜನತೆಗೆ ಬಟ್ಟೆ, ಧವಸ ಧಾನ್ಯ ವಿತರಣೆ ಮತ್ತಿತರ ಜನೋಪಯೋಗಿ ಕಾರ್ಯಕ್ರಮವನ್ನು ಕಾರ್ಯಕರ್ತರ ಜೊತೆ ಚರ್ಚಿಸಿ ಕೈಗೊಳ್ಳಲಾಗುವುದು ಎಂದು ಹೇಳಿದರು.

‘ಮನೆ ಮನೆಗೆ ಕಾಂಗ್ರೆಸ್’ ಕಾರ್ಯಕ್ರಮದ ಮೂಲಕ ಜಿಲ್ಲೆಯ ಪ್ರತೀ ಮನೆಗೂ ಸರಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಿಳಿಸುವಲ್ಲಿ ತಾನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಇಕ್ಬಾಲ್ ಹೇಳಿದರು. ಈ ಸಂದರ್ಭ ನಗರಸಭೆಯ ಅಧ್ಯಕ್ಷ ಪಿ.ರವಿಕುಮಾರ್, ಮಾಜಿ ಅಧ್ಯಕ್ಷರಾದ ಚೇತನ್‌ಕುಮಾರ್, ಲೋಹಿತ್‌ಬಾಬು, ಮಾಜಿ ಉಪಾಧ್ಯಕ್ಷ ಮುತ್ತುರಾಜ್, ಜಿಲ್ಲಾ ಎಸ್ಸಿ/ಎಸ್ಟಿ ಘಟಕದ ವೆಂಕಟಸ್ವಾಮಿ, ಮುಖಂಡ ಬೋರ್‌ವೆಲ್ ಸ್ವಾಮಿ, ಯುವ ಘಟಕದ ಅನಿಲ್ ಜೋಗಿಂದರ್, ರಾ.ಶಿ.ದೇವರಾಜು, ಇಕ್ಬಾಲ್ ಶರೀಫ್, ಕೇಬಲ್ ರಾಜು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News