100 ಮೀ. ಓಟ: ಹಾರ್ದಿಕ್‌ರನ್ನು ಹಿಂದಿಕ್ಕಿದ ಧೋನಿ!

Update: 2017-12-13 08:40 GMT

ಮೊಹಾಲಿ, ಡಿ.13: ಎಂ.ಎಸ್. ಧೋನಿ ಟೀಮ್‌ಇಂಡಿಯಾದಲ್ಲಿ ಉತ್ತಮ ದೈಹಿಕ ಕ್ಷಮತೆಯಿರುವ ಕ್ರಿಕೆಟಿಗ. ಅವರೋರ್ವ ನೈಜ ಅಥ್ಲೀಟ್. ಫಿಟ್‌ನೆಸ್ ಕಾಪಾಡಿಕೊಳ್ಳಲು ಈಗಲೂ ಜಿಮ್‌ನಲ್ಲಿ ಬೆವರು ಹರಿಸುತ್ತಾರೆ.

ಬುಧವಾರ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯ ಆರಂಭಕ್ಕೆ ಮೊದಲು ನಡೆದ ನೆಟ್‌ಪ್ರಾಕ್ಟೀಸ್ ವೇಳೆ ಭಾರತದ ಮಾಜಿ ನಾಯಕ ಧೋನಿ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 100 ಮೀ. ಓಟದಲ್ಲಿ ಸ್ಪರ್ಧೆಗಿಳಿದರು. ಧೋನಿ ಹಾಗೂ ಪಾಂಡ್ಯ ಅವರ ಓಟದ ವಿಡಿಯೋವನ್ನು ಬಿಸಿಸಿಐ ಟ್ವಿಟರ್ ಪೇಜ್‌ನಲ್ಲಿ ಹಾಕಿದೆ.

  ಆರಂಭದಲ್ಲಿ ವೇಗವಾಗಿ ಓಡಲಾರಂಭಿಸಿದ ಪಾಂಡ್ಯ ಅವರು ಧೋನಿಗಿಂತ ಸ್ವಲ್ಪ ಮುಂದಿದ್ದರು. ಆದರೆ, ಧೋನಿ ಅವರು ಪಾಂಡ್ಯರನ್ನು ಸರಿಗಟ್ಟಿದ್ದಲ್ಲದೆ ಅಂತಿಮವಾಗಿ ಪಾಂಡ್ಯರನ್ನು ಹಿಂದಿಕ್ಕಿದರು. ಪಾಂಡ್ಯ ಉತ್ತಮ ಪ್ರಯತ್ನ ನಡೆಸಿದರೂ ಧೋನಿಯನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ.

ಧೋನಿಗೆ ಈಗ 36 ವರ್ಷ. ಪಾಂಡ್ಯಗೆ 24 ವರ್ಷ. 100 ಮೀ. ಓಟದಲ್ಲಿ ಧೋನಿಯೇ ವಿಜೇತರಾಗಿರುವುದು ಸ್ಪಷ್ಟ. ಪಾಂಡ್ಯ ಮೊದಲ ಸ್ಥಾನ ಪಡೆಯಲು ಯತ್ನಿಸಿದರೂ ಧೋನಿ ಸುಲಭವಾಗಿ ಗುರಿ ತಲುಪಿದರು.

ಭಾರತ-ಶ್ರೀಲಂಕಾ ನಡುವೆ ಎರಡನೇ ಏಕದಿನ ಪಂದ್ಯ ಮೊಹಾಲಿಯಲ್ಲಿ ಬುಧವಾರ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News