ದೇಶದ ವಿವಿದೆಡೆ 300 ಕಾಫಿ ಹೌಸ್‍ಗಳನ್ನು ತೆರೆಯಲು ಕಾಫಿ ಮಂಡಳಿ ಉದ್ದೇಶ : ಮನುಕುಮಾರ್

Update: 2017-12-13 13:57 GMT

ಚಿಕ್ಕಮಗಳೂರು, ಡಿ.13: ಕಾಫಿ ಉತ್ತೇಜಿಸುವ ನಿಟ್ಟಿನಲ್ಲಿ ದೇಶದ ವಿವಿದೆಡೆ 300 ಕಾಫಿ ಹೌಸ್‍ಗಳನ್ನು ತೆರೆಯಲು ಮಂಡಳಿ ಉದ್ದೇಶಿಸಿದ್ದು ನಗರವೂ ಸೇರಿದಂತೆ ಜಿಲ್ಲೆಯ 3/4 ಕಡೆ ಕಾಫಿ ಹೌಸ್‍ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ತೆರೆಯಲಾಗುವುದು ಎಂದು ಕಾಫಿ ಮಂಡಳಿ ನಿರ್ದೇಶಕ ಕಾಫಿ ಮಂಡಳಿ ಸದಸ್ಯರಾದ ಮನುಕುಮಾರ್ ತಿಳಿಸಿದ್ದಾರೆ.

ಅವರು ಬುಧವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಾಫಿ ಉತ್ತೇಜನಕ್ಕೆ ಕಾಫಿ ಮಂಡಳಿ ಮುಂದಾಗಿದ್ದು ಈಗಾಗಲೇ ಪ್ರಮುಖ ನಗರಗಳಲ್ಲಿರುವ ಮಂಡಳಿ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಕಾಫಿ ಹೌಸ್‍ಗಳನ್ನು ದೇಶದ ಇತರೆ ಭಾಗಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಸುಮಾರು 300 ಹೊಸ ಕಾಫಿಹೌಸ್‍ಗಳನ್ನು ತೆರೆಯಲು ಉದ್ದೇಶಿಸಿದ್ದು ಕಾಫಿಯ ನಿಜವಾದ ಸ್ವಾಧವನ್ನು ಗ್ರಾಹಕರಿಗೆ ನೀಡುವ ಪ್ರಯತ್ನ ಮಾಡಲಾಗುವುದು. ನಗರದ ತಾಲೂಕು ಕಛೇರಿ, ಸೀತಾಳಯ್ಯನಗಿರಿ, ದೇವೀರಮ್ಮಬೆಟ್ಟ, ಕೆಮ್ಮಣ್ಣು ಗುಂಡಿ, ಹೊರನಾಡು ಮುಂತಾದೆಡೆ ತೆರೆಯಲು ಉದ್ದೇಶಿಸಲಾಗಿದೆ. ಸರ್ಕಾರಿ ಕಟ್ಟಡಗಳಲ್ಲಿ ತೆರೆಯಲು ಆದ್ಯತೆ ನೀಡ ಲಾಗುವುದು ಎಂದು ಹೇಳಿದರು.

ಈ ಕಾಫಿ ಹೌಸ್ ನಿರ್ವಹಣೆ ಹೊಣೆ ಖಾಸಗಿಗೆ ನೀಡಲಾಗುವುದು. ಉತ್ತಮ ಗುಣಮಟ್ಟದ, ನಿಜವಾದ ಕಾಫಿಸ್ವಾಧ ಕಾಫಿ ಪಾನೀಯ ನೀಡುವ ಉದ್ದೇಶದಿಂದ ಮಂಡಳಿ ಈ ಚಿಂತನೆ ನಡೆಸಿದೆ. ಈಗಾಗಲೇ ಕಾಫಿ ಮಂಡಳಿ ಬೆಳೆಗಾರರಿಗೆ ಪ್ರೋತ್ಸಾಹ ಧನವನ್ನು ಬಿಡು ಗಡೆಮಾಡಿದ್ದು ಈ ಜಿಲ್ಲೆಯ 8 ಸಾವಿರ ಬೆಳೆಗಾರರಿಗೆ 9.10 ಕೋಟಿ ರೂ.ಗಳ ಹಣ ನೀಡಲಾಗಿದೆ. ದೇಶ ದಲ್ಲೇ ಅತಿಹೆಚ್ಚು ಹಣವನ್ನು ಈ ಜಿಲ್ಲೆಗೆ ನೀಡಲಾಗಿದೆ. ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕು ಗಳಲ್ಲಿ ಸಾಲಪಡೆದಿರುವ ಬೆಳೆಗಾರರಿಗೆ 2.20 ಕೋಟಿ ರೂ.ಬಡ್ಡಿ ಬಾಬ್ತಿಗೆ ಸಹಾಯಧನ ಒದಗಿಸಲಾಗಿದೆ ಎಂದರು.

ಕಾಫಿ ತೋಟಗಳಲ್ಲಿ ನೀರಿನ ಬಳಕೆ ಹಾಗೂ ಮರುನಾಟಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಹಾಯಧನ ನೀಡುವಂತೆ ಮಂಡಳಿ ಕೇಂದ್ರ ಸರ್ಕಾರಕ್ಕೆ ಶಿಫಾರಾಸು ಮಾಡಿದೆ. ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳ ಮೂಲಕ ಇತರೆ ರೈತರಿಗೆ ನೀಡುತ್ತಿರುವ ಸೌಲಭ್ಯಗಳನ್ನು ಕಾಫಿ ಬೆಳೆಯುವ ಸಣ್ಣ ಮತ್ತು ಅತಿಸಣ್ಣ ಬೆಳೆಗಾರರಿಗೂ ಒದಗಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಕಾಫಿಗೆ ಶೇ.18ಕ್ಕಿಂತ ಹೆಚ್ಚು ಚಿಕೋರಿ ಬೆರೆಸಿದರೆ ಅದು ಕಲಬೆರಕೆ ಎಂದು ಪರಿಗಣಿಸುವಂತೆ ಆಹಾರ ಭದ್ರತಾ ಕಾಯ್ದೆಗೆ ತಿದ್ದುಪಡಿ ತರಲು ಕೋರಲಾಗಿದೆ. ಬಿಳಿಕಾಂಡ ಕೊರಕ ಮತ್ತು ದೈತ್ಯ ಶಂಖುಹುಳು ಕಾಟದ ಬಗ್ಗೆ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಬೆಳೆಗಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಂಡಳಿ ಮಾಡುತ್ತಿದೆ. ಬಿಳಿ ಕಾಂಡಕೊರಕ ಹುಳು ಹತೋಟಿ ನಿಟ್ಟಿನಲ್ಲಿ ಆಯ್ದ ತೋಟಗಳಲ್ಲಿ ಸಂಶೋಧನೆ ನಡೆಸಲಾಗುತ್ತಿದ್ದು ಶಂಖುಹುಳು ಹತೋಟಿಗೆ ಕಿಟ್‍ಗಳನ್ನು ರಿಯಾಯ್ತಿ ದರದಲ್ಲಿ ಒದಗಿಸಲಾಗುತ್ತಿದೆ ಎಂದರು.
ಗೋಷ್ಠಿಯಲ್ಲಿ ಪ್ರದೀಪ್‍ಪೈ ಮತ್ತು ಎಂ.ಸಿ.ಕಲ್ಲೇಶ್ ಉಪಸ್ಥಿತರಿದ್ದರು.

‘ಪ್ರಸ್ತುತ ಸಾಲಿನಲ್ಲಿ ಮುಂಗಾರು ಪೂರ್ಣದ ಅಂದಾಜಿನಂತೆ ಜಿಲ್ಲೆಯಲ್ಲಿ ಅರೇಬಿಕಾ 30 ಸಾವಿರ ಟನ್ ಹಾಗೂ 48 ಸಾವಿರ ಟನ್ ರೋಬಸ್ಟಾ ಕಾಫಿ ಫಸಲು ಬರಲಿದೆ ಎಂದು ಹೇಳಲಾಗಿತ್ತು. ಆದರೆ ಎಲೆಚುಕ್ಕೆ ರೋಗ, ಅತಿಯಾದ ಅಕಾಲಿಕ ಮಳೆ, ಆನೆಕಲ್ಲು ಮತ್ತು ಒಣ ವಾತಾವರಣದ ಕಾರಣದಿಂದ ಈಗ ಅಂದಾಜಿನ ಮೊತ್ತದಲ್ಲಿ ಶೇ.12ರಷ್ಟು ಕಡಿಮೆ ಫಸಲು ದೊರೆಯಲಿದೆ’
- ಮನುಕುಮಾರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News