ಆಹಾರ ಉತ್ಪಾದನೆಯಲ್ಲಿ ಚೇತರಿಕೆ:ಕೃಷಿ ಸಚಿವ ಕೃಷ್ಣ ಬೈರೇಗೌಡ

Update: 2017-12-13 15:57 GMT

ಬೆಂಗಳೂರು, ಡಿ. 13: ಪ್ರಸ್ತುತ ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಬಿದ್ದಿರುವುದರಿಂದ ಹಿನ್ನೆಲೆಯಲ್ಲಿ ಈ ಸಾಲಿನಲ್ಲಿ 10.05ಮಿಲಿಯನ್ ಟನ್‌ನಿಂದ 10.10ಮಿಲಿಯನ್ ಟನ್ ಆಹಾರ ಉತ್ಪಾದನೆಯಾಗುವ ನಿರೀಕ್ಷೆ ಇದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 13.05 ಮಿಲಿಯನ್ ಟನ್ ಆಹಾರ ಧಾನ್ಯಗಳ ಉತ್ಪಾದನೆಯಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, ಆ ಪ್ರಮಾಣದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಆಗುತ್ತಿರಲಿಲ್ಲ. ಈ ಹಂಗಾಮಿನಲ್ಲಿ ಚೇತರಿಕೆ ಆಗುವ ಸಾಧ್ಯತೆಗಳಿವೆ ಎಂದರು.

ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ 32ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಈಗಾಗಲೇ 30.85ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಮುಂಗಾರಿನಲ್ಲಿ 73ಲಕ್ಷ ಹೆಕ್ಟೇರ್ ಗುರಿ ಹೊಂದಲಾಗಿತ್ತು. ಭೀಕರ ಸ್ವರೂಪದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ 64.56ಲಕ್ಷ ಹೆಕ್ಟೇರ್ ಬಿತ್ತನೆಯಾಗಿತ್ತು. ಹಿಂಗಾರಿನಲ್ಲಿ ನಿರೀಕ್ಷೆಯಂತೆ ಬಿತ್ತನೆ ಪ್ರಮಾಣದಲ್ಲಿ ಹೆಚ್ಚಳವಾಗಲಿದ್ದು, ಉತ್ಪಾದನೆ ಗುರಿ 26 ರಿಂದ 27 ಮಿಲಿಯನ್ ಟನ್ ಗುರಿ ಹೊಂದಲಾಗಿದೆ. ನೂರಕ್ಕೆ ನೂರರಷ್ಟು ಸಾಧನೆಯ ನಿರೀಕ್ಷೆಯಿದೆ. ತೇವಾಂಶ ಚೆನ್ನಾಗಿರುವ ಹಿನ್ನೆಲೆಯಲ್ಲಿ ಉತ್ತಮ ಇಳುವರಿ ಬರಲಿದೆ ಎಂದು ಅವರು ತಿಳಿಸಿದರು.

ಸರಾಸರಿಗಿಂತ ಹೆಚ್ಚುವರಿ ಇಳುವರಿಯನ್ನು ತೊಗರಿಯಲ್ಲಿ ಈ ಬಾರಿ ಕಾಣಬಹುದಾಗಿದ್ದು, ಮುಂಗಾರಿನ ನಷ್ಟವನ್ನು ಹಿಂಗಾರು ಸರಿದೂಗಿಸುವ ಆಶಾಭಾವನೆ ಹೊಂದಲಾಗಿದೆ ಎಂದು ಅವರು, ಈ ಬಾರಿ ಬೇಸಿಗೆ ಬೆಳೆಗೆ ಕಾವೇರಿ ಮತ್ತು ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರ ನೀರು ನೀಡಲು ತೀರ್ಮಾನಿಸಿದ್ದು, ಉತ್ತಮ ಬೆಳೆಯಾಗಲಿದೆ ಎಂದರು.

ಖರೀದಿ: ಹೆಸರು ಮತ್ತು ಉದ್ದು, ಶೇಂಗಾ(ನೆಲಗಡಲೆ)ವನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿ ಈಗಾಗಲೇ ನಡೆಯುತ್ತಿದ್ದು, ತೊಗರಿ ಖರೀದಿ ಶೀಘ್ರದಲ್ಲೆ ಪ್ರಾರಂಭವಾಗಲಿದ್ದು, ಕೇಂದ್ರ ಸರಕಾರದೊಂದಿಗೆ ಈ ನಿಟ್ಟಿನಲ್ಲಿ ಪತ್ರ ವ್ಯವಹಾರ ನಡೆಸಲಾಗುತ್ತಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ರಾಗಿಯನ್ನು ಕ್ವಿಂಟಾಲ್ 2,300 ರೂ. ಬೆಂಬಲ ಬೆಲೆ ನೀಡಿ ಖರೀದಿಸಲಾಗುತ್ತಿದೆ. ಅದೇ ರೀತಿ ಶೇಂಗಾ(ನೆಲಗಡಲೆ)ವನ್ನು ಕ್ವಿಂಟಾಲ್‌ಗೆ 4,450 ರೂ.ನಂತೆ ರಾಜ್ಯದ 15 ಖರೀದಿಗೆ ಕೇಂದ್ರಗಳಲ್ಲಿ ಖರೀದಿಗೆ ಆರಂಭಿಸಿದ್ದು, 47,500ಟನ್ ಖರೀದಿ ಗುರಿಹೊಂದಲಾಗಿದೆ ಎಂದರು.

ಮಣ್ಣು ಆರೋಗ್ಯ ಚೀಟಿ: ರಾಜ್ಯದ 78.32ಲಕ್ಷ ರೈತ ಕುಟುಂಬಗಳಿಗೆ ಮಣ್ಣು ಆರೋಗ್ಯ ಚೀಟಿಯನ್ನು ಕೇಂದ್ರದ ಸಹಯೋಗದೊಂದಿಗೆ ವಿತರಿಸಲಾಗಿದ್ದು, ಈ ಯೋಜನೆಯಡಿ ಆಯಾ ಭಾಗದಲ್ಲಿ ಬೆಳೆಯುವ ಪ್ರಮುಖ ಆರು ಬೆಳೆಗಳ ಬಗ್ಗೆ ರೈತರಿಗೆ ತಿಳುವಳಿಕೆ ನೀಡಿ ಅದಕ್ಕೆ ಸಂಬಂಧಿಸಿದಂತೆ ಮಣ್ಣು ಪರೀಕ್ಷೆ ನಡೆಸಿ ಯಾವ ಬೆಳೆಗೆ ಎಷ್ಟು ಗೊಬ್ಬರ ಹಾಕಬೇಕೆಂಬ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.

ಕೃಷಿ ಇಲಾಖೆಯ ವೆಚ್ಚ 2012-13ರಿಂದ 2017-18ಕ್ಕೆ ಶೇ.247ರಷ್ಟು ಹೆಚ್ಚಾಗಿದ್ದು, 2016-17ರಲ್ಲಿ ಹಂಚಿಕೆಯಾದ ಅನುದಾನಕ್ಕಿಂತ ಹೆಚ್ಚಿನ (ಶೇ.111) ಹಣ ಕೃಷಿಗೆ ವೆಚ್ಚ ಮಾಡಲಾಗಿದೆ. 2017-18ನೆ ಸಾಲಿಗೆ ಕೃಷಿ ಯಾಂತ್ರೀಕರಣಕ್ಕೆ ನಿಗದಿಪಡಿಸಿದ ಅನುದಾನ 458 ಕೋಟಿ ರೂ.ಗಳಿದ್ದು ನವೆಂಬರ್ ಅಂತ್ಯಕ್ಕೆ 132ಕೋಟಿ ರೂ.ವೆಚ್ಚ ಮಾಡಲಾಗಿದೆ ಮತ್ತು ಸೂಕ್ಷ್ಮ ನೀರಾವರಿಗೆ ನಿಗದಿಪಡಿಸಿದ ಅನುದಾನ 512ಕೋಟಿ ರೂ.ಗಳನ್ನು 223ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.

ಕೃಷಿಭಾಗ್ಯ ಯೋಜನೆಯಡಿ 2014-15ರಿಂದ ಈ ವರೆಗೆ 1,81,984 ಕೃಷಿ ಹೊಂಡಗಳನ್ನು ತೆಗೆಯಲಾಗಿದೆ. ಮಾರ್ಚ್ ಅಂತ್ಯದ ವೇಳೆ ಒಟ್ಟಾರೆ 2.10 ಲಕ್ಷ ಕೃಷಿ ಹೊಂಡಗಳನ್ನು ತೆಗೆಯಲಾಗುವುದು. ಆ ಕಾರ್ಯಕ್ಕೆ ಒಟ್ಟು 2 ಸಾವಿರ ಕೋಟಿ ರೂ.ವೆಚ್ಚ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

 ಫಸಲ್‌ಬೀಮಾ ಯೋಜನೆಯನ್ನು 2016ರಲ್ಲಿ ಜಾರಿಗೆ ತಂದಿದ್ದು, 21ಸಾವಿರ ಕೋಟಿ ರೂ.ಪ್ರಿಮಿಯಂ ಸಂಗ್ರಹಿಸಿ 10 ಸಾವಿರ ಕೋಟಿ ರೂ.ರೈತರಿಗೆ ಸಂದಾಯ ಮಾಡಲಾಗಿದೆ. ವಿಮಾ ಸಂಸ್ಥೆಗಳು ನಿಗದಿಪಡಿಸಿರುವ ಪ್ರೀಮಿಯಂ ದರ ಹೆಚ್ಚಿದ್ದು, ಅದನ್ನು ಇಳಿಕೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

‘ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ಕೃಷಿ ಇಲಾಖೆಗೆ ನಿಗದಿಪಡಿಸಿರುವ ಹಣವನ್ನು ಪೂರ್ಣ ಪ್ರಮಾಣದಲ್ಲಿ ವೆಚ್ಚ ಮಾಡಲಾಗುತ್ತಿದೆ. ಪರಿಶಿಷ್ಟ ರೈತರಿಂದ ಹೆಚ್ಚಿನ ಬೇಡಿಕೆ ಇದೆ. ಆದರೆ, ಎಸ್ಸಿ-ಎಸ್ಟಿ ಕೂಲಿ ಕಾರ್ಮಿಕರ ವಿದೇಶಿ ಪ್ರವಾಸ ಯೋಜನೆ ಅನುಷ್ಠಾನ ಸಂಬಂಧ ಸ್ಪಷ್ಟೀಕರಣ ಬೇಕಾಗಿತ್ತು, ಹೀಗಾಗಿ ವಿಳಂಬವಾಗಿತ್ತು. ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯರ ಜತೆ ತಮಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ’
-ಕೃಷ್ಣಬೈರೇಗೌಡ ಕೃಷಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News