ಅಫ್ರೊಝ್ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ

Update: 2017-12-13 17:25 GMT

ಬೆಂಗಳೂರು, ಡಿ. 13: ರಾಜಸ್ಥಾನದ ರಾಜ್ ಸಮಂದ್‌ನಲ್ಲಿ 'ಲವ್ ಜಿಹಾದ್' ಎಂದು ಆರೋಪ ಹೊರಿಸಿ ಅಫ್ರೊಝ್ ಎಂಬ ಕಾರ್ಮಿಕನ ಹತ್ಯೆ ಹಾಗೂ ಸಜೀವ ದಹಿಸಿದ್ದನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆ ಅಧ್ಯಕ್ಷ ಮುಹಮ್ಮದ್ ತಫ್ಸೀರ್, ರಾಜಸ್ಥಾನದಲ್ಲಿ ನಡೆದಿರುವ ಘಟನೆ ಮಾನವೀಯ ಸಮಾಜ ತಲೆ ತಗ್ಗಿಸುವಂತಹ ಕೃತ್ಯವಾಗಿದೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಅಮಾನುಷವಾಗಿ ಹಲ್ಲೆ ನಡೆಸಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.

'ಲವ್ ಜಿಹಾದ್' ಎಂದು ಸುಳ್ಳು ಆರೋಪ ಹೊರಿಸಿ ಹಲ್ಲೆ ಮಾಡಲು ಮುಂದಾಗಿರುವುದು ವ್ಯವಸ್ಥಿತ ಷಡ್ಯಂತರವಾಗಿದೆ. 'ಲವ್ ಜಿಹಾದ್' ಹೆಸರಿನಲ್ಲಿ ಅಮಾಯಕ ವ್ಯಕ್ತಿಗಳ ಮೇಲೆ ನಡೆಯುವ ಹಲ್ಲೆ, ದರೋಡೆ ಮತ್ತು ಕೊಲೆಗಳನ್ನು ಗಮನಿಸಿದಾಗ ಸರಕಾರಗಳೇ ಅಪರಾಧಿಗಳಿಗೆ ಪರವಾನಿಗೆ ಕೊಟ್ಟಿದೆ ಎಂಬ ಅನುಮಾನ ಕಾಡುತ್ತಿದೆ ಎಂದು ಹೇಳಿದರು.

ರಾಜಸ್ಥಾನ ಮತ್ತು ಕೇಂದ್ರ ಸರಕಾರಗಳು ಕೋಮು ಆಧಾರಿತ ಕೊಲೆಗಳನ್ನು ತಡೆಯಲು ವಿಫಲವಾಗಿದೆ. ಬದಲಿಗೆ ಅಪಪ್ರಚಾರಗಳ ಮೂಲಕ ಅಮಾಯಕ ಅಲ್ಪಸಂಖ್ಯಾತರನ್ನು ಅಮಾನುಷವಾಗಿ ಕೊಲೆ ಮಾಡುವ ಮೂಲಕ ಇಲ್ಲಿನ ದಲಿತ, ಅಲ್ಪಸಂಖ್ಯಾತ ಸಮುದಾಯಗಳನ್ನು ಭಯಪಡಿಸುವ ಕೆಲಸ ಪ್ರತಿನಿತ್ಯ ನಡೆಯುತ್ತಿದೆ ಎಂದು ದೂರಿದರು.

ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿಗಳು ದೇಶದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆಗಳಿಗೆ ಕಡಿವಾಣ ಹಾಕಲು ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿ ಅವಮಾನವೀಯ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಫಯಾಝ್ ದೊಡ್ಡಮನೆ, ಉಪಾಧ್ಯಕ್ಷ ಮುಸ್ವರ್, ಜಿಲ್ಲಾಧ್ಯಕ್ಷ ಮುಬಾರಕ್, ಕಾರ್ಯದರ್ಶಿ ಆಸಿಫ್, ಸದಸ್ಯ ಆರಿಫ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News