ಡಿಆರ್‌ಕಾಂಗೊ: 4 ಲಕ್ಷ ಮಕ್ಕಳು ಸಾವಿನ ಅಂಚಿನಲ್ಲಿ

Update: 2017-12-13 17:34 GMT

ಕಿನ್‌ಶಾಸ (ಡಿಆರ್‌ಕಾಂಗೊ), ಡಿ. 13: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ (ಡಿಆರ್‌ಸಿ)ದಲ್ಲಿ 4 ಲಕ್ಷಕ್ಕೂ ಅಧಿಕ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಹಾಗೂ ಅವರಿಗೆ ತುರ್ತು ನೆರವು ಸಿಗದಿದ್ದರೆ ತಿಂಗಳುಗಳಲ್ಲೇ ಅವರು ಸಾಯಬಹುದು ಎಂದು ವಿಶ್ವಸಂಸ್ಥೆ ಮಂಗಳವಾರ ಎಚ್ಚರಿಸಿದೆ.

ಕಾಂಗೊದ ಬೃಹತ್ ಕಸೈ ವಲಯದಲ್ಲಿ ಈ ದಯನೀಯ ಪರಿಸ್ಥಿತಿ ಉದ್ಭವಿಸಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಹೇಳಿದೆ.

18 ತಿಂಗಳ ಕಾಲ ನಡೆದ ಹಿಂಸಾಚಾರ, ಸಾಮೂಹಿಕ ವಲಸೆ ಮತ್ತು ಕುಸಿದ ಕೃಷಿ ಉತ್ಪನ್ನ- ಈ ಎಲ್ಲ ಅಂಶಗಳು ಮೇಳೈಸಿ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂದು ಅದು ಹೇಳಿದೆ.

‘‘ಕನಿಷ್ಠ 4 ಲಕ್ಷ 5 ವರ್ಷಕ್ಕಿಂತ ಕೆಳಗಿನ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅವರಿಗೆ ಜೀವರಕ್ಷಕ ಆರೋಗ್ಯ ಸೇವೆ ಮತ್ತು ಪೌಷ್ಟಿಕ ಆಹಾರ ಲಭಿಸದಿದ್ದರೆ 2018ರಲ್ಲಿ ಅವರು ಸಾಯುತ್ತಾರೆ’’ ಎಂದಿದೆ.

ಡಿಆರ್ ಕಾಂಗೊದ ಜನಸಂಖ್ಯೆಯ ಮುಕ್ಕಾಲು ಭಾಗ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಹಾಗೂ ಈ ಪೈಕಿ ಮಕ್ಕಳು ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News