ಹೊನ್ನಾಳಿ, ಚನ್ನಗಿರಿಯಲ್ಲಿ ಮತ್ತೆ ಕಾಣಿಸಿಕೊಂಡ ಒಂಟಿ ಸಲಗ

Update: 2017-12-14 14:44 GMT

ಹೊನ್ನಾಳಿ, ಡಿ. 14: ಈತ್ತೀಚೆಗೆ ದಾವಣಗೆರೆ ಜಿಲ್ಲೆಯಲ್ಲಿ ಏಕಾಏಕಿ ದಾಳಿ ನಡೆಸಿ ಇಬ್ಬರ ಸಾವಿಗೆ ಕಾರಣವಾಗಿ, ಶಿವಮೊಗ್ಗದತ್ತ ತೆರಳಿದ್ದ ಒಂಟಿ ಸಲಗ ಗುರುವಾರ ಮತ್ತೆ ಹೊನ್ನಾಳಿ, ಚನ್ನಗಿರಿ ತಾಲೂಕಿನಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕವನ್ನುಂಟು ಮಾಡಿದೆ.

ಮಹಿಳೆ ಸೇರಿದಂತೆ ಮೂವರು ರೈತರು, ಕೆಲ ಜಾನುವಾರು ಮೇಲೆ ಏಕಾಏಕಿ ದಾಳಿ ನಡೆಸಿದ್ದು, ತಾಲೂಕಿನ ದೇವರ ಹೊನ್ನಾಳಿ ರೈತ ಭರಮಪ್ಪ, ರುದ್ರಿಬಾಯಿ, ಬೆನಕನಹಳ್ಳಿಯ ಮಳಲಿ ರಾಜಪ್ಪ ಆನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಲೆನಾಡಿನತ್ತ ಪಯಣ ಬೆಳೆಸಿದ್ದ 2 ಪುಂಡಾನೆಗಳು ಮತ್ತೆ ಹೊನ್ನಾಳಿ ತಾಲೂಕಿಗೆ ಮರಳಿದ್ದು, ಹೊಲದಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿವೆ. ಈ ಸಂದರ್ಭ ಭರಮಪ್ಪ ಸೊಂಟಕ್ಕೆ ಗಾಯವಾಗಿದ್ದು, ರುದ್ರಿಬಾಯಿ ಎಡಗೈಗೆ ತೀವ್ರ ಪೆಟ್ಟಾಗಿದ್ದು, ಮಳಲಿ ರಾಜಪ್ಪನಿಗೂ ಗಂಭೀರ ಗಾಯಗಳಾಗಿವೆ. ಹೊನ್ನಾಳಿಯ ಹೊಲ, ಗದ್ದೆ, ಅಡಿಕೆ, ಬಾಳೆ ತೋಟದಲ್ಲಿ ನುಗ್ಗುತ್ತಾ ಸಾಗುತ್ತಿದ್ದು, ಒಂಟಿ ಸಲಗ ಕಂಡ ಗ್ರಾಮಸ್ಥರು ಬೆಚ್ಚಿದ್ದಾರೆ. ಅಲ್ಲದೆ, ಆನೆ ಓಡಿಸಲು ಗ್ರಾಮಸ್ಥರು ಗುಂಪಾಗಿ ಸೇರಿಕೊಂಡು ಸಲಗ ಓಡಿಸಲು ಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ಜೊತೆಗೆ ಕೆಲ ಬೈಕ್‍ಗಳನ್ನು ಜಖಂಗೊಳಿಸಿರುವ ಸಲಗ ಆಕಳು, ಎಮ್ಮೆಗಳ ಮೇಲೂ ದಾಳಿ ಮಾಡಿದೆ.

ದೇವರ ಹೊನ್ನಾಳಿಯಲ್ಲಿ ಎರಡು ಹಸುಗಳ ಕರಳು ಹೊರ ಬರುವಂತೆ ಆನೆ ತಿವಿದಿದ್ದು, ಮೂಕ ಹಸುಗಳ ರೋಧನ ಕರಳು ಕಿವುಚುವಂತಿತ್ತು. ಶಿವಮೊಗ್ಗದತ್ತ ಸಾಗಿದ್ದ ಆನೆಯು ಹೋದ ಹಾದಿಯಲ್ಲೇ ಮರಳುತ್ತಿರುವುದು ಹೊನ್ನಾಳಿ, ಚನ್ನಗಿರಿ ರೈತರಲ್ಲಿ ಮತ್ತಷ್ಟು ಭಯವನ್ನುಂಟು ಮಾಡಿದೆ. ಅರಣ್ಯಾಧಿಕಾರಿಗಳು, ಪೆÇಲೀಸ್ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಆನೆ ಓಡಿಸಲು ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ. ಆಯಾ ಗ್ರಾಮಸ್ಥರು ಅಧಿಕಾರಿ, ಸಿಬ್ಬಂದಿಗೆ ಸಾಥ್ ನೀಡುತ್ತಿದ್ದಾರೆ.

ಹೊನ್ನಾಳಿ ತಾಲೂಕಿನಲ್ಲಿ ಗುರುವಾರ ಬೆಳಗಿನ ಜಾವದಿಂದಲೇ ಪುಂಡಾನೆ ಅವಳಿ ಕಂಡು ಬರುತ್ತಿದೆ. ಆನೆ ದಾಳಿಗೆ ತುತ್ತಾದ ಗಾಯಾಳುಗಳಿಗೆ ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಕಾಡಾನೆ ದಾಳಿ ಮಾಡಿದ್ದ ಸ್ಥಳಕ್ಕೆ ಶಾಸಕ ಡಿ.ಜಿ. ಶಾಂತನಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಂದ್ರ, ಡಿ.ಎಸ್. ಪ್ರದೀಪ್ ಇತರರು ಭೇಟಿ ನೀಡಿ, ಪರಿಶೀಲಿಸಿದರು.

ಚನ್ನಗಿರಿ ತಾಲೂಕಿನ ಸೂಳೆಕೆರೆ ಬಳಿ ಜೋಡಿ ಪುಂಡಾನೆಗಳು ಈಚೆಗೆ ಅಗಲಿದ್ದವು. ಒಂದು ಕಾಡಾನೆ ಸೂಳೆಕೆರೆ ಕೆಳ ಭಾಗದಲ್ಲಿ ಪುಣ್ಯಸ್ಥಳದ ಮಾರ್ಗವಾಗಿ ಅಗಲಿತ್ತು. ಮತ್ತೊಂದು ಒಂಟಿ ಸಲಗವು ಚನ್ನಗಿರಿ ಅರಣ್ಯ ಪ್ರದೇಶದಲ್ಲಿ ಒಳ ಹೊಕ್ಕಿತ್ತು. ಈಗ ಒಂದು ಪುಂಡಾನೆ ಶಿವಮೊಗ್ಗದಿಂದ ಹೊನ್ನಾಳಿಯತ್ತ ಮರಳಿಸುವುದು ಸಹಜವಾಗಿ ಚನ್ನಗಿರಿ ತಾಲೂಕಿನ ಜನರ ನಿದ್ದೆಗೆಡಿಸಿದೆ.

ಮೈಸೂರಿಂದ ಗಜ ಪಡೆ ಆಗಮನ

ತಾಲೂಕಿನ ಹಾಲೇಶ್ವರ ಗುಡ್ಡದಲ್ಲಿ ಬೀಡುಬಿಟ್ಟಿರುವ ಒಂಟಿ ಸಲಗ ಹಿಡಿಯಲು ಮೈಸೂರಿನ ಟ್ರ್ಯಾಕ್ ಲೈನ್ ಗಜಪಡೆ ಗುರುವಾರ ರಾತ್ರಿ ಕರೆಸಲಾಗುತ್ತಿದೆ. ಪುಂಡಾನೆ ವಾಪಾಸ್ಸಾಗಿರುವ ಹಿನ್ನೆಲೆಯಲ್ಲಿ ಹೊನ್ನಾಳಿ, ಚನ್ನಗಿರಿ, ಜೋಳದಾಳ್ ಭಾಗದಲ್ಲಿ ಅದು ವಾಪಾಸ್ಸಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಚನ್ನಗಿರಿ, ಹೊನ್ನಾಳಿ ವ್ಯಾಪ್ತಿಯಲ್ಲಿ ಆನೆ ಕಾಣಿಸಿಕೊಂಡ ಪ್ರದೇಶಗಳ ಗ್ರಾಮಸ್ಥರು, ಮಕ್ಕಳು, ರೈತರು ಮನೆಯಿಂದ ಹೊರ ಬರದಂತೆ, ಹೊಲ, ಗದ್ದೆ, ತೋಟಕ್ಕೆ ಹೋಗದಂತೆ ಎಚ್ಚರಿಸಲಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ವೀರೇಶ ನಾಯ್ಕ ತಿಳಿಸಿದ್ದಾರೆ.

ದಾವಣಗೆರೆ, ಚನ್ನಗಿರಿ, ಹೊನ್ನಾಳಿ, ಭದ್ರಾವತಿ, ಶಿವಮೊಗ್ಗದ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಆನೆ ಇರುವ ಪ್ರದೇಶದಲ್ಲಿ ಮೊಕ್ಕಾಂ ಮಾಡಿದ್ದಾರೆ. ಹಾಸನದಲ್ಲಿ ಆನೆ ಹಿಡಿದ ತಂಡ ಮೈಸೂರಿನಿಂದ ಇಲ್ಲಿಗೆ ಬರಲಿದ್ದು, ಶುಕ್ರವಾರ ಬೆಳಿಗ್ಗೆಯಿಂದಲೇ ಸಲಗ ಹಿಡಿಯುವ ಕಾರ್ಯಾಚರಣೆ ಆರಂಭಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.…

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News