ಗುಜರಾತ್ ಚುನಾವಣೆ : ದಲಿತರಿಗೆ ದಕ್ಕಿದ್ದೇನು?

Update: 2017-12-19 18:10 GMT

ಗುಜರಾತ್‌ನ ಚುನಾವಣಾ ಫಲಿತಾಂಶ ನಿನ್ನೆ ಹೊರಬಿದ್ದಿದೆ. ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಶೇ. 7.5 ಮತ್ತು ಪರಿಶಿಷ್ಟ ಪಂಗಡ ಶೇ. 14 ಹೊಂದಿರುವ ಈ ರಾಜ್ಯದಲ್ಲಿ ಮೂರು ಬಾರಿ ಆಡಳಿತ ನಡೆಸಿದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ 100ರ ಗಡಿ ದಾಟಿಲ್ಲ, 99ಕ್ಕೆ ಬಂದು ನಿಂತು ಈಗ ‘ಗುಜರಾತ್ ಮಾಡೆಲ್‌ಗೆ’ ಕೇವಲ ಸರಳ ಬಹುಮತ ಸಿಕ್ಕಿದೆಯಷ್ಟೆ.

2012ರ ವಿಧಾನಸಭಾ ಚುನಾವಣೆಯಲ್ಲಿ ಶೇ. 47 ಮತಗಳಿಕೆಯೊಂದಿಗೆ 115 ಸೀಟುಗಳನ್ನು ಗೆದ್ದುಕೊಂಡಿದ್ದ ಬಿಜೆಪಿ ಈ ಚುನಾವಣೆಯಲ್ಲಿ 16 ಕ್ಷೇತ್ರಗಳನ್ನು ಕಳೆದುಕೊಂಡು ತೀವ್ರವಾದ ಕುಸಿತ ಕಂಡಿದೆ. ಆದರೂ ಅಧಿಕಾರದ ಮ್ಯಾಜಿಕ್ ನಂಬರ್ ಬಳಿ ನಿಂತು ಈ ಬಾರಿ ಸರಕಾರ ನಡೆಸುವ ಅವಕಾಶವನ್ನು ಉಳಿಸಿಕೊಂಡಿದೆ. 2012ರ ಚುನಾವಣೆಯಲ್ಲಿ ಶೇ. 38.93 ಮತಗಳೊಂದಿಗೆ 61 ಸೀಟುಗಳನ್ನು ಗೆದ್ದುಕೊಂಡಿದ್ದ ಕಾಂಗ್ರೆಸ್ ಈ ಬಾರಿ ಶೇ. 41.4 ಮತಗಳಿಕೆ ಮತ್ತು 77 ಸೀಟುಗಳನ್ನು ಗೆಲ್ಲುವ ಮೂಲಕ ಸುಮಾರು ಶೇಕಡಾ 10ರಷ್ಟು ಮತಗಳಿಕೆ ಮತ್ತು 16 ಸೀಟುಗಳ ಸುಧಾರಣೆ ಕಂಡಿದೆ. ಇದರ ನಡುವೆ ಕಾಂಗ್ರೆಸ್ ಅನ್ನು ತಮ್ಮ ಸಮುದಾಯದ ಮತಗಳೊಂದಿಗೆ ಬೆಂಬಲಿಸಿದ್ದ ಜಿಗ್ನೇಶ್ ಮತ್ತು ಕೆಲವು ಯುವ ನಾಯಕರು ಐದಾರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.

ದಲಿತರಿಗೆ ದಕ್ಕಿದ್ದೇನು?

ಜಿಗ್ನೇಶ್ ಮೇವಾನಿ ಉನಾ ಘಟನೆಯ ನಂತರ ದಲಿತ ಸಮುದಾಯದ ನಾಯಕನಾಗಿ ಹೊರಹೊಮ್ಮಿ ಈ ಬಾರಿ ವಡಗಾಮ್ ಮೀಸಲು ಕ್ಷೇತ್ರದಲ್ಲಿ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರೂ ಸಹ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಬೇಷರತ್ ಬೆಂಬಲ ಘೋಷಣೆಯಾಗಿತ್ತು. ಇದಕ್ಕೆ ಪ್ರತಿಯಾಗಿ ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ದಲಿತ ಸಮುದಾಯವು ತನ್ನ ಮತಗಳನ್ನು ನೀಡುವ ಮೂಲಕ ಬೆಂಬಲ ನೀಡುವ ಒಪ್ಪಂದದ ಪರಿಣಾಮವಾಗಿ ಜಿಗ್ನೇಶ್ ಮೇವಾನಿ ಕೂಡ ಗೆಲುವು ದಾಖಲಿಸಿದ್ದಾರೆ.

ಕಾಂಗ್ರೆಸ್‌ನ ಅಧಿಕಾರಾವಧಿಯಲ್ಲಿ ದಲಿತರ ಮೇಲೆ ನಡೆಯುತ್ತಿದ್ದ ಜಾತಿ ದೌರ್ಜನ್ಯಗಳು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೂಡ ಹೆಚ್ಚಿನ ಪ್ರಮಾಣದಲ್ಲಿ ಮುಂದುವರಿಯುತ್ತಲೇ ಇವೆ. 2016ರ ವರದಿಯ ಪ್ರಕಾರ ಪರಿಶಿಷ್ಟ ಜಾತಿ ಜನರ ಮೇಲಿನ ದೌರ್ಜನ್ಯ ಪ್ರಮಾಣ ಶೇ. 32.5ರಷ್ಟು ಮತ್ತು ಜಾತಿ ದೌರ್ಜನ್ಯಗಳ ಮಾಹಿತಿ ಆಧಾರದಲ್ಲಿ ದೇಶದಲ್ಲಿ 5ನೇ ಸ್ಥಾನವನ್ನು ಗುಜರಾತ್ ಪಡೆದಿದೆ. ಇವೆಲ್ಲಾ ಭೀಕರತೆಗಳ ನಡುವೆ ಸಹ ಶೇಕಡಾ 22ರಷ್ಟಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಒಂದು ಸಾಂಘಿಕ ನೆಲೆಯಿಂದ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳುವಲ್ಲಿ ವಿಫಲವಾಗಿರುವ ಸಂಗತಿ ನಮಗೆ ಗೋಚರಿಸುತ್ತದೆ. ಸ್ವಾತಂತ್ರೋತ್ತರದಲ್ಲಿ ಪ್ರತೀ ಬಾರಿ ಚುನಾವಣೆಗಳು ಬಂದಾಗಲೂ ಸಹ ಶೋಷಿತರು ತಮ್ಮ ಸಮುದಾಯದ ಮತಗಳನ್ನು ಮೇಲ್ಜಾತಿಗರ ಪಕ್ಷಗಳಿಗೆ ನೀಡಿ ನಮ್ಮನ್ನು ಅವು ಉದ್ಧರಿಸುತ್ತವೆ ಎಂಬ ಭ್ರಮೆಯಲ್ಲಿಯೇ ಮುಳುಗಿರುವುದು ಮಾತ್ರ ನಿಜವಾದ ದುರಂತ.

ಗುಜರಾತ್‌ನಲ್ಲಿ ಒಟ್ಟು ಮೀಸಲು ಕ್ಷೇತ್ರಗಳು 39. ಈ ಚುನಾವಣೆಯಲ್ಲಿ ಈ ಬಾರಿ 39 ಮೀಸಲು ಸ್ಥಾನಗಳ ಪೈಕಿ ಕಾಂಗ್ರೆಸ್ 19 ಸ್ಥಾನಗಳನ್ನು, ಬಿಜೆಪಿ 16 ಸ್ಥಾನಗಳನ್ನು, ಭಾರತೀಯ ಟ್ರೈಬಲ್ಸ್ ಪಾರ್ಟಿ (ಬಿಟಿಪಿ) 2 ಸ್ಥಾನಗಳನ್ನು ಮತ್ತು ಸ್ವತಂತ್ರ ಅಭ್ಯರ್ಥಿಗಳು 2 ಸ್ಥಾನಗಳನ್ನು ಗೆದ್ದುಕೊಂಡಿವೆ. ಅಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಮೀಸಲು ಕ್ಷೇತ್ರಗಳಿಂದ ನಾಲ್ಕನೆಯ ಒಂದು ಭಾಗದಷ್ಟು ಕಾಂಗ್ರೆಸ್ ಪಕ್ಷದಡಿಯಲ್ಲಿ ಗೆದ್ದಿದ್ದರೆ, ಬಿಜೆಪಿಯಿಂದ ಐದನೆಯ ಒಂದರಷ್ಟು ಗೆದ್ದಿದ್ದಾರೆ. ಇಷ್ಟು ಪ್ರಮಾಣದಲ್ಲಿ ಪರಿಶಿಷ್ಟರು ಗೆದ್ದು ವಿಧಾನಸಭೆಯನ್ನು ಪ್ರವೇಶ ಮಾಡಿದ್ದರೂ ಸಹ ಗುಜರಾತ್ ಎಂಬ ನೆಲ ಶೋಷಿತ ಸಮುದಾಯಗಳಿಗೆ ಅಕ್ಷರಶಃ ನರಕವಾಗಿದೆ. ಬೆಳಕಿಗೆ ಬಾರದ ಅದೆಷ್ಟೋ ಉನಾ ಮಾದರಿಯ ಘಟನೆಗಳು ಆ ನೆಲದಲ್ಲಿ ಹುದುಗಿ ಹೋಗಿವೆ. ಹಾಗಾಗಿ ಶೋಷಿತ ಸಮುದಾಯದ ನಾಯಕನಾಗಿ ಮತಕ್ರಾಂತಿ ಮಾಡುವ ಮೂಲಕ ಸ್ವತಂತ್ರ ರಾಜಕಾರಣ ಮಾಡುವ ಅವಕಾಶವನ್ನು ಈ ಚುನಾವಣೆಯಿಂದ ಜಿಗ್ನೇಶ್ ನಿಚ್ಚಳವಾಗಿ ತಪ್ಪಿಸಿಕೊಂಡಿದ್ದಾರೆ ಎಂಬುದು ಅಷ್ಟೇ ಸತ್ಯ. ಸೂಕ್ಷ್ಮವಾಗಿ ಗಮನಿಸುವುದಾದರೆ ಉನಾ ಘಟನೆ ನಡೆದು ಒಂದೂವರೆ ವರ್ಷಗಳ ನಂತರ ಚುನಾವಣೆ ನಡೆದಿದೆ. ಅಂದರೆ ಜಿಗ್ನೇಶ್ ಗೆ ತನ್ನ ಸಮುದಾಯವನ್ನು ಒಂದು ಸ್ಪಷ್ಟವಾದ, ಸ್ವತಂತ್ರವಾದ ರಾಜಕೀಯ ನೆಲೆಯ ಅಡಿಯಲ್ಲಿ ಸಂಘಟಿಸುವ ಎಲ್ಲಾ ಅವಕಾಶ ಮತ್ತು ಸಮಯ ಎರಡೂ ಕೂಡ ಇದ್ದಾಗ್ಯೂ ತನ್ನ ಸಮುದಾಯದ ಮತಗಳನ್ನು ಕಾಂಗ್ರೆಸ್ ಎಂಬ ಮತ್ತದೇ ಮನುವಾದಿ ಪಕ್ಷಕ್ಕೆ ಚಲಾಯಿಸಿದ್ದುದು ನಿಜವಾಗಿಯೂ ವಿಷಾದನೀಯ ಸಂಗತಿ.

ಒಂದೊಮ್ಮೆ ಜಿಗ್ನೇಶ್ ಮೇವಾನಿ ತನ್ನ ಸ್ವಂತ ಶಕ್ತಿ ಸಾಮರ್ಥ್ಯದಿಂದಾಗಿ 39 ಮೀಸಲು ಕ್ಷೇತ್ರಗಳಲ್ಲಿ ಸುಮಾರು ಹತ್ತರಿಂದ ಹದಿನೈದನ್ನು ಗೆಲ್ಲುವ ಪ್ರಯತ್ನ ಮಾಡಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿಟ್ಟು ಯಾರೇ ಸರಕಾರ ರಚನೆ ಮಾಡಲು ಸಹ ತನ್ನ ಬೆಂಬಲದ ಅನಿವಾರ್ಯತೆಯನ್ನು ಸೃಷ್ಟಿ ಮಾಡಿ ಕಿಂಗ್ ಮೇಕರ್ ಆಗಬಹುದಿತ್ತು, ಮತ್ತು ಆ ಮೂಲಕ ಅಧಿಕಾರ ಹಂಚಿಕೆಗೆ ಮುಂದಾಗಿ ತನ್ನ ಸಮುದಾಯವನ್ನು ಉದ್ದರಿಸುವ ಯೋಜನೆಗಳನ್ನು ರೂಪಿಸಿಕೊಳ್ಳುವ, ಭೂಮಿ ಹಂಚಿಕೆ ಮಾಡಿಕೊಡುವ ಅವಕಾಶಗಳನ್ನು ತನ್ನ ಅಧಿಕಾರದ ಮುಖೇನ ಪಡೆದುಕೊಳ್ಳಬಹುದಿತ್ತು. ಇಂತಹ ಸಾಧ್ಯತೆಗಳನ್ನು ಗ್ರಹಿಸಿಕೊಳ್ಳುವುದು ಸಹ ಜಿಗ್ನೇಶ್‌ರಿಂದ ಸಾಧ್ಯವಾಗಲಿಲ್ಲ.

ಈ ದೇಶವನ್ನು ಇಲ್ಲಿಯವರೆಗೂ ಆಳಿದ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಶೋಷಿತರ ಬದುಕನ್ನು ಎಷ್ಟು ಪ್ರಮಾಣದಲ್ಲಿ ಉದ್ಧರಿಸಿವೆ ಎಂಬುದಕ್ಕೆ ನಿಮಗೆ ಯಾವ ಸಾಕ್ಷಗಳೂ ಸಿಗುವುದಿಲ್ಲ. ಶೋಷಿತರು ಸಾಮಾಜಿಕವಾಗಿ, ಆರ್ಥಿಕವಾಗಿ ಎಷ್ಟು ಪ್ರಮಾಣದಲ್ಲಿ ಇನ್ನೂ ಹಿಂದುಳಿದಿದ್ದಾರೆ ಎಂಬುದಕ್ಕೆ ಮಾತ್ರ ಸಾಕ್ಷಗಳು ಅಂಕಿಅಂಶಗಳ ಸಮೇತ ಸಿಗುತ್ತವೆ. ಅಂದರೆ ನಮ್ಮನ್ನಾಳಿದ ಪಕ್ಷಗಳು ನಮ್ಮನ್ನು ಉದ್ಧರಿಸಿಲ್ಲ, ಅಂತಹ ಇಚ್ಛಾಶಕ್ತಿಯು ಅವುಗಳಿಗೆ ಇದ್ದಂತಿಲ್ಲ ಎಂಬುದನ್ನು ಊಹಿಸುವುದು ಈ ಕಾಲಕ್ಕೆ ಬಹಳ ಕಷ್ಟದ ಕೆಲಸವೇನಲ್ಲ ಬಿಡಿ. ಹಾಗಿದ್ದರೂ ಸಹ ಪರ್ಯಾಯಗಳ ಆಯ್ಕೆ ಶೋಷಿತ ಸಮುದಾಯಗಳಿಗೆ ಯಾಕೆ ಗುಜರಾತ್‌ನಂತಹ ರಾಜ್ಯದಲ್ಲಿ ಇನ್ನೂ ಸಾಧ್ಯವಾಗಿಲ್ಲ ಎಂಬುದು ಮಾತ್ರ ದೊಡ್ಡ ಪ್ರಶ್ನೆಯಾಗಿದೆ. ಈ ದೇಶದ ಶೋಷಿತ ಸಮುದಾಯವು ಒಂದು ಅವಲೋಕನ ಮಾಡಿಕೊಳ್ಳಲೇಬೇಕಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಆಶಿಸಿದ್ದು ಸಹ ಶೋಷಿತ ಸಮುದಾಯಗಳ ಸ್ವತಂತ್ರ ರಾಜಕಾರಣ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಜೊತೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಒಂದೇ ಎಂಬ ಭಾವವನ್ನು ಶೋಷಿತ ಸಮುದಾಯವು ಇನ್ನಾದರೂ ಅರ್ಥೈಸಿಕೊಳ್ಳಬೇಕಿರುವುದು ಈ ಕಾಲದ ಜರೂರು.

ಕರ್ನಾಟಕ ಸಹ ಇನ್ನು ನಾಲ್ಕೈದು ತಿಂಗಳಿನಲ್ಲಿ ವಿಧಾನಸಭಾ ಚುನಾವಣೆಗೆ ಸಿದ್ಧಗೊಳ್ಳುತ್ತಿದೆ. ಪ್ರತಿಯೊಂದು ಪಕ್ಷಗಳು ಚುನಾವಣಾ ಕೇಂದ್ರಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಇಲ್ಲಿಯೂ ಸಹ 51 ಮೀಸಲು ಕ್ಷೇತ್ರಗಳು ಇದ್ದು ಕಾಂಗ್ರೆಸ್, ಬಿಜೆಪಿ ಮತ್ತಿತರ ಮೇಲ್ಜಾತಿಗರ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಕೊಳ್ಳುವ ಸಿದ್ಧತೆಯಲ್ಲಿವೆ. ಕರ್ನಾಟಕದ ಜನತೆಯಾದರೂ ಗುಜರಾತ್‌ನ ದಲಿತರಂತೆ ಎಚ್ಚರ ತಪ್ಪಿ ಮೇಲ್ಜಾತಿಗರ ಪಕ್ಷಗಳಿಗೆ ಮತಗಳನ್ನು ನೀಡುವುದರಿಂದ ಹಿಂದೆ ಸರಿದು ತಮ್ಮದೇ ಆದ ಸ್ವಂತ ಪಕ್ಷವನ್ನು ಸಾಮೂಹಿಕವಾಗಿ ಬೆಂಬಲಿಸಿ, ಸೀಟುಗಳನ್ನು ಗೆದ್ದುಕೊಂಡು ವಿಧಾನಸಭೆಯನ್ನು ಪ್ರವೇಶ ಮಾಡಿ ಸ್ವತಂತ್ರ ರಾಜಕಾರಣ ಮಾಡುವ ಮೂಲಕ ಈ ನೆಲದ ದಲಿತರ, ಶೋಷಿತರ ಹಿತ ಕಾಯಬೇಕಿದೆ. ಜಿಗ್ನೇಶ್ ಮೇವಾನಿ ಎಲ್ಲಿ ಎಡವಿದ್ದಾರೆೆ ಎಂಬುದು ನಮಗೆ ಈಗ ತಿಳಿದಿದೆ, ಹಾಗಾಗಿ ಅಂತಹುದೇ ತಪ್ಪನ್ನು ಇಲ್ಲಿನ ದಲಿತ ಹೋರಾಟಗಾರರು, ಸಂಘಟನೆಗಳು ಸಹ ಮಾಡದೆ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಗುಜರಾತ್‌ನ ದಲಿತರು ಕಳೆದುಕೊಂಡ ಅವಕಾಶವನ್ನು ಕರ್ನಾಟಕದ ದಲಿತರು ಸಹ ಕೈಚೆಲ್ಲಿಕೊಳ್ಳದೆಯೇ ಸ್ವತಂತ್ರ ರಾಜಕಾರಣದ ಅವಕಾಶವನ್ನು ಸೃಷ್ಟಿಸಿಕೊಂಡು ಮಾದರಿಯಾಗಲಿ.

ಒಂದೊಮ್ಮೆ ಜಿಗ್ನೇಶ್ ಮೇವಾನಿ ತನ್ನ ಸ್ವಂತ ಶಕ್ತಿ ಸಾಮರ್ಥ್ಯದಿಂದಾಗಿ 39 ಮೀಸಲು ಕ್ಷೇತ್ರಗಳಲ್ಲಿ ಸುಮಾರು ಹತ್ತರಿಂದ ಹದಿನೈದನ್ನು ಗೆಲ್ಲುವ ಪ್ರಯತ್ನ ಮಾಡಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿಟ್ಟು ಯಾರೇ ಸರಕಾರ ರಚನೆ ಮಾಡಲು ಸಹ ತನ್ನ ಬೆಂಬಲದ ಅನಿವಾರ್ಯತೆಯನ್ನು ಸೃಷ್ಟಿ ಮಾಡಿ ಕಿಂಗ್ ಮೇಕರ್ ಆಗಬಹುದಿತ್ತು, ಮತ್ತು ಆ ಮೂಲಕ ಅಧಿಕಾರ ಹಂಚಿಕೆಗೆ ಮುಂದಾಗಿ ತನ್ನ ಸಮುದಾಯವನ್ನು ಉದ್ಧರಿಸುವ ಯೋಜನೆಗಳನ್ನು ರೂಪಿಸಿಕೊಳ್ಳುವ, ಭೂಮಿ ಹಂಚಿಕೆ ಮಾಡಿಕೊಡುವ ಅವಕಾಶಗಳನ್ನು ತನ್ನ ಅಧಿಕಾರದ ಮುಖೇನ ಪಡೆದುಕೊಳ್ಳಬಹುದಿತ್ತು. ಇಂತಹ ಸಾಧ್ಯತೆಗಳನ್ನು ಗ್ರಹಿಸಿಕೊಳ್ಳುವುದು ಸಹ ಜಿಗ್ನೇಶ್‌ರಿಂದ ಸಾಧ್ಯವಾಗಲಿಲ್ಲ.

Writer - ಅಪ್ಪಗೆರೆ ಡಿ. ಟಿ. ಲಂಕೇಶ್

contributor

Editor - ಅಪ್ಪಗೆರೆ ಡಿ. ಟಿ. ಲಂಕೇಶ್

contributor

Similar News