​ರಾಜ್ಯಸಭೆಯಲ್ಲಿ ಮೊದಲ ಬಾರಿಗೆ ಸಚಿನ್ "ಬ್ಯಾಟಿಂಗ್"

Update: 2017-12-21 03:42 GMT

ಹೊಸದಿಲ್ಲಿ, ಡಿ. 21: "ಮಕ್ಕಳ ಆಡುವ ಹಕ್ಕು" ಆಗ್ರಹಿಸಿ ರಾಜ್ಯಸಭೆ ಸದಸ್ಯ ಸಚಿನ್ ತೆಂಡೂಲ್ಕರ್ ಗುರುವಾರ ಸದನದಲ್ಲಿ ಮಾತನಾಡಲಿದ್ದಾರೆ.

ಕ್ರಿಕೆಟ್ ದಂತಕಥೆ ಎನಿಸಿದ ತೆಂಡೂಲ್ಕರ್ 2012ರ ಏಪ್ರಿಲ್‌ನಲ್ಲಿ ರಾಜ್ಯಸಭೆಗೆ ನಾಮಕರಣಗೊಂಡ ಬಳಿಕ ಮೊಟ್ಟಮೊದಲ ಬಾರಿಗೆ ಸದನದಲ್ಲಿ ಚರ್ಚೆ ಆರಂಭಿಸಲಿದ್ದಾರೆ.

ಸದನದ ಕಲಾಪಕ್ಕೆ ಗೈರುಹಾಜರಾಗುವ ಮೂಲಕ ಸುದ್ದಿ ಮಾಡಿರುವ ಸಚಿನ್, "ಮಕ್ಕಳ ಆಡುವ ಹಕ್ಕು ಮತ್ತು ಭಾರತದಲ್ಲಿ ಕ್ರೀಡೆಯ ಭವಿಷ್ಯ" ಎಂಬ ವಿಷಯದ ಬಗ್ಗೆ ಮೇಲ್ಮನೆಯಲ್ಲಿ ಚರ್ಚೆ ಆರಂಭಿಸಲು ಅನುಮತಿ ಕೋರಿ ನೋಟಿಸ್ ನೀಡಿದ್ದಾರೆ.

ಶಿಕ್ಷಣದ ಪಠ್ಯದಲ್ಲಿ ಕ್ರೀಡೆಯನ್ನು ಸೇರಿಸುವ ಮತ್ತು ಎಲ್ಲ ಮಕ್ಕಳಿಗೆ ಕ್ರೀಡಾ ಮೂಲಸೌಕರ್ಯ ದೊರಕುವುದನ್ನು ಸಂವಿಧಾನಾತ್ಮಕ ಹಕ್ಕಾಗಿ ಪರಿವರ್ತಿಸುವಂತೆ ಸಚಿನ್ ಆಗ್ರಹಿಸಲಿದ್ದಾರೆ ಎನ್ನುವುದು ನೋಟಿಸ್‌ನಿಂದ ತಿಳಿದುಬಂದಿದೆ. ಕಾಕತಾಳೀಯ ಎಂದರೆ ಪ್ರಧಾನಿ ನರೇಂದ್ ಮೋದಿ, ಎರಡು ತಿಂಗಳ ಹಿಂದೆ, ಮಕ್ಕಳು ಕ್ರೀಡೆ ಮತ್ತು ಇತರ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ್ದರು ಹಾಗೂ ದೇಶದ ಮಕ್ಕಳಲ್ಲಿ ಬೊಜ್ಜು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಬಿಜೆಪಿ ಸಂಸದ ರಣವಿಜಯ ಸಿಂಗ್ ಜುದೇವ್ ಹಾಗೂ ಕಾಂಗ್ರೆಸ್‌ನ ಪಿ.ಎಲ್.ಪುನಿಯಾ ಕೂಡಾ ನೋಟಿಸ್‌ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಈ ಚರ್ಚೆ ಕುರಿತ ನಿಲುವಳಿಯನ್ನು ನಾವು ಅನುಮೋದಿಸುತ್ತಿದ್ದೇವೆ. ನಾನು ಕ್ರೀಡಾಪ್ರೇಮಿ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ಕ್ರೀಡೆಗೆ ಉತ್ತೇಜನ ಸಿಗಬೇಕು ಎನ್ನುವ ನಿಲುವು ನನ್ನದು ಎಂದು ಜುದೇವ್ ಸ್ಪಷ್ಟಪಡಿಸಿದ್ದಾರೆ.

ಸಚಿನ್ ನಿಲುವನ್ನು ಸರ್ಕಾರ ಬೆಂಬಲಿಸಿದರೆ, ಶಿಕ್ಷಣದ ಹಕ್ಕು ಮತ್ತು ಮಾಹಿತಿ ಹಕ್ಕು ಕಾಯ್ದೆಯ ಮಾದರಿಯಲ್ಲಿ ಹಾಲಿ ಇರುವ ಕಾನೂನಿಗೆ ತಿದ್ದುಪಡಿ ತರುವ ಮಸೂದೆ ಮಂಡಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News