ಮಹಾದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಯಡಿಯೂರಪ್ಪ ಘೋಷಣೆ ಮಾಡಲು ಹೇಗೆ ಸಾಧ್ಯ?: ಸಿಎಂ

Update: 2017-12-21 08:09 GMT

ವಿಜಯಪುರ, ಡಿ. 21: ಮಹಾದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಘೋಷಣೆ ಮಾಡಲು ಹೇಗೆ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

ಇಂದು ವಿಜಯಪುರದಲ್ಲಿ ಮಹಾದಾಯಿ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಲಪ್ರಭಾ ನದಿಗೆ 7.56 ಟಿಎಂಸಿ ನೀರು ಬಿಡುಗಡೆ ಮಾಡುತ್ತೇವೆ ಎಂದು ಗೋವಾ ಮುಖ್ಯಮಂತ್ರಿ ನಮ್ಮ ಸರ್ಕಾರಕ್ಕೆ ಪತ್ರ ಬರೆದು ಅಥವಾ ನ್ಯಾಯಮಂಡಳಿಗೆ ಪ್ರಮಾಣ ಪತ್ರದ ಮೂಲಕ ತಿಳಿಸಬೇಕು. ವಿವಾದ ಬಗೆಹರಿಯುವುದಾದರೆ ನಾನು ಅದನ್ನು ಸ್ವಾಗತಿಸುತ್ತೇನೆ.‌  ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಪ್ರಧಾನಿ ಕರೆಯುವುದಾದರೆ ಭಾಗವಹಿಸಲು ತಾವು ಈಗಲೂ ಸಿದ್ಧ. ಗೋವಾ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಲೂ ತಯಾರಿದ್ದು, ಪ್ರಧಾನಿ ಕೂಡಲೇ ಮುಖ್ಯಮಂತ್ರಿಗಳ ಸಭೆ ಕರೆಯಲಿ ಎಂದು ತಿಳಿಸಿದರು.

ಅದು ಬಿಟ್ಟು ಯಡಿಯೂರಪ್ಪ ಅವರು ನಾನು ಗೋವಾ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸುತ್ತೇನೆ. ಅವರು ಪತ್ರ ಕಳುಹಿಸುತ್ತಾರೆ. ನಾನು ಘೋಷಣೆ ಮಾಡುತ್ತೇನೆ ಎಂದರೆ ಅರ್ಥವೇನು ? ಅದನ್ನು ಯಾರೂ ನಂಬಲಾಗದು. 7.56 ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ಬಿಡುಗಡೆ ಮಾಡುವುದಾಗಿ ಗೋವಾ ಮುಖ್ಯಮಂತ್ರಿ ಪತ್ರ ಮೂಲಕ ಅಧಿಕೃತವಾಗಿ ತಿಳಿಸಬೇಕು. ನ್ಯಾಯಮಂಡಳಿ ಮುಂದೆಯಾದರೂ ಹೇಳಬೇಕು. ಹುಬ್ಬಳ್ಳಿಯಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶದಲ್ಲಿ ಈ ಬಗ್ಗೆ ಘೋಷಣೆ ಮಾಡಲು ಯಡಿಯೂರಪ್ಪ ಯಾರು ? ಗೋವಾ ಮುಖ್ಯಮಂತ್ರಿ ಏನಾದರೂ ಅಲ್ಲಿಗೆ ಬರುವರೇ ?  ಇದು ರಾಜಕೀಯ ಗಿಮಿಕ್ ಎಂದು ಸಿದ್ದರಾಮಯ್ಯ ಹೇಳಿದರು.

ಮಹಾದಾಯಿ ವಿವಾದವನ್ನು ಬಗೆಹರಿಸುವಂತೆ ಮನವಿ ಮಾಡಲು ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿಯವರ ಬಳಿಗೆ ಹೋದಾಗ ರಾಜ್ಯ ಬಿಜೆಪಿ ನಾಯಕರು ಬಾಯಿ ಬಿಡಲಿಲ್ಲ. ನರೇಂದ್ರ ಮೋದಿಯವರೂ ಮಧ್ಯಸ್ಥಿಕೆ ವಹಿಸಿಕೊಳ್ಳಲು ಒಪ್ಪಲಿಲ್ಲ. ಪತ್ರ ಬರೆದರೂ ಅವರಿಂದ ಪತಿಕ್ರಿಯೆ ಬರಲಿಲ್ಲ. ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ನ್ಯಾಯ ಮಂಡಳಿ ಸಲಹೆ ನೀಡಿತು. ಅದಾದ ಬಳಿಕ ಮಾತುಕತೆಗೆ ಆಹ್ವಾನಿಸಿ ಗೋವಾದ ಮುಖ್ಯಮಂತ್ರಿಯವರಿಗೆ 2-3 ಬಾರಿ ಪತ್ರ ಬರೆದರೂ, ಮಾತನಾಡಿದರೂ ಅವರು ಸ್ಪಂದಿಸಲಿಲ್ಲ. ಗೋವಾ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಬಳಿಕ ನೋಡೋಣ ಎಂದು ವಿವರಿಸಿದರು.

ಚುನಾವಣೆಯಾಗಿ ಎಷ್ಟು ದಿನಗಳಾದವು ? ಇಲ್ಲಿಯವರೆಗೆ ರಾಜ್ಯ ಬಿಜೆಪಿ ನಾಯಕರೇಕೆ ಮೌನವಾಗಿದ್ದರು. ಪ್ರಧಾನಿ ಬಳಿಗೆ ನಿಯೋಗ ಕರೆದುಕೊಂಡು ಹೋದಾಗಿನಿಂದ ಇಲ್ಲಿಯವರೆಗೆ ಅವರು ತಟಸ್ಥವಾಗಿ ಇರಲು ಕಾರಣ ಏನು ? ರಾಜ್ಯ ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈಗ ಬಿಜೆಪಿಯವರು ರಾಜಕೀಯ ಗಿಮಿಕ್ ಮಾಡಲು ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News