ಕರ್ವೆಯ ಸಂಸ್ಕೃತಿ ಚಿಂತನೆ

Update: 2017-12-21 18:38 GMT

ಖ್ಯಾತ ಮಾನವಶಾಸ್ತ್ರಜ್ಞೆ, ಲೇಖಕಿ ಇರಾವತಿ ಕರ್ವೆ ತಮ್ಮ ‘ಯುಗಾಂತ’ ಕೃತಿಯ ಮೂಲಕ ಪ್ರಸಿದ್ಧಿಯನ್ನು ಪಡೆದವರು. ಮಹಾಭಾರತದ ಪಾತ್ರಗಳನ್ನು ಮನಃಶ್ಶಾಸ್ತ್ರೀಯ ನೆಲೆಯಲ್ಲಿ ಅಧ್ಯಯನ ಮಾಡಿ ವಿಶ್ಲೇಷಿಸಿದರು. ಮಹಾಭಾರತದ ರೂಪಕಗಳನ್ನು ಒಡೆದು, ಅದನ್ನು ವಾಸ್ತವದ ಕಣ್ಣಲ್ಲಿ ನೋಡಿ ಬರೆದ ‘ಯುಗಾಂತ’ ಮಹಾಭಾರತ ಕಾವ್ಯಕ್ಕೆ ಹೊಸತೊಂದು ಮಗ್ಗುಲನ್ನು ನೀಡಿದ್ದು ಸುಳ್ಳಲ್ಲ. ಈ ಯುಗಾಂತ ಕೃತಿಯಿಂದ ಪ್ರೇರಣೆ ಪಡೆದು, ಎಸ್. ಎಲ್. ಭೈರಪ್ಪ ‘ಪರ್ವ’ ಕಾದಂಬರಿಯನ್ನು ಬರೆದರು ಎಂದು ಹೇಳಲಾಗುತ್ತದೆ.
‘ನಮ್ಮ ಸಂಸ್ಕೃತಿ’ ಇರಾವತಿ ಕರ್ವೆ ಅವರ ಸಂಸ್ಕೃತಿ ಚಿಂತನೆಯ ಬಿಡಿ ಬರಹಗಳು. ಚಂದ್ರಕಾಂತ ಪೋಕಳೆಯವರು ಇದನ್ನು ಮರಾಠಿಯಿಂದ ಕನ್ನಡಕ್ಕಿಳಿಸಿದ್ದಾರೆ. ಸಂಸ್ಕೃತಿ ಎಂದರೇನು? ಎನ್ನುವು ದರಿಂದ ಹಿಡಿದು ಈ ದೇಶದ ಸಂರಚನೆಯ ಕುರಿತಂತೆ ಬೇರೆ ಬೇರೆ ನೆಲೆಗಳಲ್ಲಿ ಈ ಕೃತಿ ಚರ್ಚಿಸುತ್ತದೆ. ಹಿಂದೂಗಳ ಸಾಂಸ್ಕೃತಿಕ ಇತಿಹಾಸದ ಮರ್ಮ, ಸಾಹೇಬರು ಮತ್ತು ನಮ್ಮ ಸಂಸ್ಕೃತಿ, ಭಾರತದ ಗಿರಿಜನರು, ಗೋಹತ್ಯೆ ನಿಷೇಧದ ಚಳವಳಿ, ಸಮಾಜ ಶಾಸ್ತ್ರೀಯ ದೃಷ್ಟಿಯಲ್ಲಿ ಹೊಸ ಹಿಂದೂ ಕಾನೂನಿನ ಸಮೀಕ್ಷೆ, ಭಾರತೀಯ ಭಾಷೆ ಮತ್ತು ಇಂಗ್ಲಿಷ್‌ನ ಸ್ಥಾನ, ಸಂಸ್ಕೃತಿಯ ಹಿನ್ನೆಲೆಯಲ್ಲಿ ಮಹಿಳೆಯರು ಹೀಗೆ ಒಟ್ಟು 10 ಅಧ್ಯಾಯಗಳು ಇಲ್ಲಿವೆ.
ಸಂಸ್ಕೃತಿಯಲ್ಲಿರುವ ಕೆಡುಕನ್ನು ಉಚ್ಚಾಟನೆ ಮಾಡುವಾಗ ವ್ಯಕ್ತಿ ಅಥವಾ ವರ್ಗದ ಬಗೆಗೆ ದ್ವೇಷವಾಗಲಿ, ಸೇಡಿನ ಭಾವನೆಯಾಗಲಿ ಇರಬಾರದು ಎನ್ನುವಂತಹ ಎಚ್ಚರಿಕೆಯನ್ನು ನೀಡುತ್ತಲೇ ಇಲ್ಲಿ ಸಂಸ್ಕೃತಿಯನ್ನು ವಿಶ್ಲೇಷಿಸಲು ಹೊರಟಿದ್ದಾರೆ. ಹಿಂದೂ ಸಂಸ್ಕೃತಿಯ ಬಗ್ಗೆ ವಿವರಿಸುತ್ತಾ, ಇಲ್ಲಿ ಸಂಸ್ಕೃತಿಯ ಸಂಘರ್ಷ ಜರುಗಿ ಒಬ್ಬರ ಸೋಲು, ಮತ್ತೊಬ್ಬರ ಗೆಲುವು ಎಂಬ ದೃಶ್ಯ ಹಿಂದೂಸ್ಥಾನದಲ್ಲಿ ಕಾಣದೆ, ಅದರ ಸಮನ್ವಯ ಜರುಗಿ, ಇಬ್ಬರ ನಡುವಿನ ಕೊಡುಕೊಳ್ಳುವಿಕೆಯಲ್ಲಿ ಮುಕ್ತಾಯವಾಗುವುದನ್ನು ಅವರು ವಿವರಿಸುತ್ತಾರೆ. ಆಂಗ್ಲರು ನಮ್ಮ ಮೇಲೆ ಬೀರಿರುವ ಪರಿಣಾಮಗಳು, ಅದರ ಒಳಿತು ಕೆಡುಕುಗಳನ್ನು ಚರ್ಚಿಸುತ್ತಾ, ನಮಗೆ ಬೇಕಾಗಿದ್ದು ಹೊಸ ಅರ್ಥಶಾಸ್ತ್ರ, ಹೊಸ ರಾಜ್ಯತಂತ್ರ, ಹೊಸ ವಿಜ್ಞಾನ ಆಗಿರದೆ ಹೊಸ ಸಮಾಜಶಾಸ್ತ್ರ ಬೇಕಾಗಿದೆ ಎಂದು ಅಭಿಪ್ರಾಯಪಡುತ್ತಾರೆ. ಅದು ಒಂದು ಜೀವನದ ವೌಲ್ಯ ಏನು ಎನ್ನುವುದು ನಿರ್ಧಾರಗೊಂಡರೆ ಉಳಿದ ಸಾಮಾಜಿಕ ಜೀವನದ ಕ್ಷೇತ್ರಗಳು ಖಂಡಿತಕ್ಕೂ ನಿಶ್ಚಿತರೂಪ ಪಡೆಯುತ್ತವೆ. ಇದೇ ಸಂದರ್ಭದಲ್ಲಿ ಆ ಸಮಾಜಶಾಸ್ತ್ರ ನಮ್ಮದೇ ನೆಲದ ಸಾಂಸ್ಕೃತಿಕ ಅರಿವಿನಿಂದ ರೂಪುಗೊಳ್ಳಬೇಕು ಎಂದು ಬಯಸುತ್ತಾರೆ. ಸಂಗ್ರಹಗೊಂಡ ಕೊಳಚೆಯಾಚೆಯ ಜೊತೆಗೇ ನಮ್ಮ ಸಂಸ್ಕೃತಿಯೊಳಗಿರುವ ಅವಿನಾಶಿ ವೌಲ್ಯಗಳನ್ನು ಗುರುತಿಸುವ ಕೆಲಸ ನಡೆಯೇಕು ಎಂದು ಅವರು ಹೇಳುತ್ತಾರೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 112 ರೂ. ಮುಖಬೆಲೆ 85 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News