ದಿಕ್ಕೆಟ್ಟಿರುವ ದಲಿತ ಚಳವಳಿಗಳು ಮತ್ತು ದಲಿತರ ಬದುಕು

Update: 2017-12-21 18:42 GMT

ಭಾರತದ ಇತಿಹಾಸದಲ್ಲಿ ಜರುಗಿದ ಚಳವಳಿಗಳಲ್ಲಿ ಸ್ವಾತಂತ್ರ್ಯ ಹೋರಾಟ ಒಂದೆಡೆಯಾದರೆ ಬಾಬಾಸಾಹೇಬ್ ಬಿ.ಆರ್.ಅಂಬೇಡ್ಕರ್‌ಅಸ್ಪಶ್ಯರ ಹಕ್ಕು ಬಾಧ್ಯತೆಗಳಿಗಾಗಿ ನಡೆಸಿದ ಹೋರಾಟ ಮತ್ತೊಂದು ಕಡೆ. ಈ ದೇಶವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸಲು ಜರುಗಿದ ಸಂಘಟಿತ ಹೋರಾಟವೇ ಸ್ವಾತಂತ್ರ ಚಳವಳಿ. ಹಾಗೆಯೇ ಈ ಮಣ್ಣಿನ ಪಟ್ಟಭದ್ರ ಹಿತಾಸಕ್ತಿಗಳ ದಾಸ್ಯವನ್ನು ಧಿಕ್ಕರಿಸಿ ಉದಯವಾದ ದಮನಿತರ ಹೋರಾಟವೇ ದಲಿತ ಚಳವಳಿಯಾಗಿದೆ. ಈ ದಲಿತ ಚಳವಳಿಯ ಇತಿಹಾಸವನ್ನು ಹುಡುಕುತ್ತಾ ಹೋದರೆ ಭಾರತದ ಇತಿಹಾಸದಲ್ಲಿ 1848ರಲ್ಲಿ ನಡೆದ ಮಹಾತ್ಮ ಜ್ಯೋತಿಬಾ ಫುಲೆ ಹಾಗೂ ಅವರ ಪತ್ನಿ ಸಾವಿತ್ರಿ ಬಾ ಫುಲೆಯವರ ಸಾಮಾಜಿಕ ಚಳವಳಿ ಮುನ್ನೆಲೆಗೆ ನಿಲ್ಲುತ್ತದೆ. ಇವರು ಹುಟ್ಟಿನಲ್ಲಿ ದಲಿತರಲ್ಲದಿದ್ದರೂ ದಲಿತ ಹಾಗೂ ದಮನಿತರ ನಾಲಿಗೆಯ ಮೇಲೆ ಎರಡಕ್ಷರವನ್ನು ಬರೆದ ತಂದೆ-ತಾಯಿಯಾಗಿದ್ದಾರೆ. ಇದೇ ರೀತಿ ಕರ್ನಾಟಕದಲ್ಲಿ ದಲಿತ ಚಳವಳಿಯು ಉಗಮವಾದುದು 12ನೇ ಶತಮಾನದ ಬಸವಣ್ಣರ ಅನುಭವ ಮಂಟಪದಿಂದ ಎಂದು ಹೇಳಬಹುದು. ಅಂದರೆ ಅವರು ನಡೆಸಿದ ಧಾರ್ಮಿಕ (ಹಿಂದೂ ಧರ್ಮದ ಕಟ್ಟುಪಾಡುಗಳ ವಿರುದ್ಧ) ಹೋರಾಟದಲ್ಲಿ ಅನೇಕ ದಲಿತರ ಒಳಗೊಳ್ಳುವಿಕೆಯನ್ನು ನಾವು ಕಾಣಬಹುದು. ಆದರೆ ಕರ್ನಾಟಕದಲ್ಲಿ ದಲಿತ ಚಳವಳಿಯು ಪರಿಪಕ್ವವಾಗಿ ಉಗಮವಾಗಿದ್ದು 1973ರಲ್ಲಿ ನಡೆದ ಬಸವಲಿಂಗಪ್ಪನವರ ‘ಬೂಸಾ ಸಾಹಿತ್ಯ’ ಚಳವಳಿ ಮುಖಾಂತರ ಎನ್ನಬಹುದು. ಅಂದಿನ ದೇವರಾಜ ಅರಸುರವರ ಸರಕಾರದಲ್ಲಿ ಮಂತ್ರಿಯಾಗಿದ್ದ ಬಸವಲಿಂಗಪ್ಪನವರು ಕನ್ನಡ ಸಾಹಿತ್ಯವನ್ನು ಕುರಿತು (ಬ್ರಾಹ್ಮಣೇತರ ಸಾಹಿತ್ಯದ ಪರ) ನೀಡಿದ ಈ ಒಂದು ಹೇಳಿಕೆಯಿಂದ ನಾಡಿನಾದ್ಯಂತ ಗಲಭೆಗಳು ಹುಟ್ಟಿಕೊಂಡವು. ಅಂತಹ ಸಂದರ್ಭದಲ್ಲಿ ಬಸವಲಿಂಗಪ್ಪರವರ ಅನುಯಾಯಿಗಳು ಮತ್ತು ದಲಿತ ನಾಯಕರ ಹತ್ಯೆ, ಮಾರಣಾಂತಿಕ ಹಲ್ಲೆಗಳಾದವು. ಇದನ್ನು ಪ್ರತಿಭಟಿಸಲು ಹುಟ್ಟಿಕೊಂಡ ‘ದಲಿತ ಸಂಘರ್ಷ ಸಮಿತಿ’ಯೇ ಮುಖ್ಯವಾದ ಸಂಘಟಿತ ಹೋರಾಟಕ್ಕೆ ಮುನ್ನುಡಿ ಬರೆದದ್ದು.

ಯಾವುದೇ ಒಂದು ಹೋರಾಟದ ಮುಖ್ಯ ಉದ್ದೇಶ ದಬ್ಬಾಳಿಕೆ, ಅಸಮಾನತೆ, ಗುಲಾಮಗಿರಿಯನ್ನು ವಿರೋಧಿಸುವುದೇ ಆಗಿರುತ್ತದೆ. ಅಂತೆಯೇ ದಲಿತ ಚಳವಳಿಯು ಕೂಡ ತಮ್ಮ ಮೇಲೆ ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿದ್ದ ದೌರ್ಜನ್ಯವನ್ನು ವಿರೋಧಿಸುವುದಾಗಿತ್ತು. ಅಂತೆಯೇ ಜ್ಯೋತಿಬಾ ಫುಲೆಯವರು ಸೃಷ್ಟಿಸಿದ ಸಾಮಾಜಿಕ ಚಳವಳಿಯು ಅಲ್ಲಿನ ಪಟ್ಟಭದ್ರ ಹಿತಾಸಕ್ತಿಯ ದಬ್ಬಾಳಿಕೆಯ ವಿರುದ್ಧ ಸಮಾಜದ ಎಲ್ಲಾ ಜಾತಿ, ವರ್ಗದ ಜನಗಳನ್ನು ಸಮಾಜದಲ್ಲಿ ಸಮಾನವಾಗಿ ಕಾಣವುದಾಗಿತ್ತು. ಇಂತಹ ಚಳವಳಿಯನ್ನು ಮುಂದುವರಿಸಿದ ಇನ್ನೋರ್ವ ಸುಧಾರಕ ಛತ್ರಪತಿ ಶಾಹುಮಹಾರಾಜ್‌ರವರು. ಇವರು 1902ರಲ್ಲಿ ದಲಿತರರಿಗೆ ಶೇ. 50ರಷ್ಟು ಮೀಸಲಾತಿಯನ್ನು ಕೊಡುವ ಮೂಲಕ ದಲಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಮುಂದಾದರು. ಇವರನ್ನು ಅನುಕರಿಸಿ ನಾಲ್ವಡಿ ಕೃಷ್ಣರಾಜರು 1918ರಲ್ಲಿ ಶೇ. 70ರಷ್ಟು ಮೀಸಲಾತಿಯನ್ನು ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ನೀಡುವ ಮೂಲಕ ಅವರ ಏಳಿಗೆಗೆ ಸಹಕರಿಸಿದರು. ಇವರ ಈ ಹೋರಾಟಕ್ಕೆ ರಾಮಸ್ವಾಮಿ ಪೆರಿಯಾರ್, ನಾರಾಯಣಗುರು, ಬಾಬಾಸಾಹೇಬ್ ಅಂಬೇಡ್ಕರ್‌ರಂತಹ ಸಾಮಾಜಿಕ ಚಳವಳಿಗಾರರು ಜೊತೆಯಾಗಿರುವುದು ಇತಿಹಾಸದಿಂದ ತಿಳಿದುಬರುತ್ತದೆ.

ವಿಶ್ವದಲ್ಲಿ ಇದುವರೆಗೂ ಜರುಗಿರುವ ಹೋರಾಟಗಳಲ್ಲಿ ಇಷ್ಟು ಜನ ಮಹನೀಯರು ಒಂದೇ ಧ್ಯೇಯೋದ್ದೇಶಕ್ಕೆ ತಮ್ಮನ್ನು ಅರ್ಪಿಸಿರುವುದು ಎಲ್ಲಿಯೂ ಕಾಣಸಿಗುವುದಿಲ್ಲ. ಭಾರತದಲ್ಲಿ ದಲಿತರು ಹಾಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ಹೋರಾಡಿದ ಎಲ್ಲಾ ಮಹನೀಯರ ಹೋರಾಟದ ಪ್ರತಿನಿಧಿಯಾಗಿ ಅಂಬೇಡ್ಕರರು ತನ್ನ ಜೀವಿತದ ಉದ್ದಕ್ಕೂ ಮನುವಾದಿ ಮನಸ್ಥಿತಿಗಳ ವಿರುದ್ಧ ಹೋರಾಡಿ ತನ್ನ ಜನಾಂಗದ ಹಿತವನ್ನು ಕಾಪಾಡಲು ವಿದ್ಯೆಯಲ್ಲಿ, ಉದ್ಯೋಗದಲ್ಲಿ ಹಾಗೂ ರಾಜಕೀಯದಲ್ಲಿ ಮೀಸಲಾತಿಯನ್ನು ಅಳವಡಿಸಿಕೊಂಡು ಸಂವಿಧಾನವನ್ನು ರಚಿಸಿದರು. 1949 ನವೆಂಬರ್ 25ರಲ್ಲಿ ಸಂವಿಧಾನವನ್ನು ರಚನಾ ಸಮಿತಿಗೆ ಒಪ್ಪಿಸಿ ನೆರೆದಿದ್ದ ಪತ್ರಕರ್ತರ ಮುಂದೆ ‘‘ನನ್ನ ಸಂವಿಧಾನ ಉತ್ತಮವಾಗಿದೆ. ಅದು ಯಥಾವತ್ತಾಗಿ ಜಾರಿಯಾದರೆ ಈ ದೇಶ ಬಹು ಬೇಗನೆ ಅಭಿವೃದ್ಧಿಯಾಗುತ್ತದೆ. ಆದರೆ ಅದು ಜಾರಿಯಾಗುವುದಿಲ್ಲ, ಏಕೆಂದರೆ ಅದನ್ನು ಜಾರಿಮಾಡುವ ಜಾಗದಲ್ಲಿ ನನ್ನ ವೈರಿಗಳಿದ್ದಾರೆ’’ ಎಂಬ ನಿರಾಶೆಯನ್ನು ಹೊರಹಾಕುತ್ತಾರೆ.

ಕರ್ನಾಟಕದಲ್ಲಿ ‘ದಲಿತ ಸಂಘರ್ಷ ಸಮಿತಿ’ ಎಂಬ ಶೀರ್ಷಿಕೆಯಡಿಯಲ್ಲಿ ದಲಿತ ಸಾಹಿತಿಗಳು 1973ರಲ್ಲಿ ಭದ್ರಾವತಿಯ ಸಮಾವೇಶದಲ್ಲಿ ಒಂದು ಸಂಘಟಿತ ಶಕ್ತಿಯಾಗಿ ಹೊರಹೊಮ್ಮುವ ಮೂಲಕ ರಾಜ್ಯದ ದಲಿತ ಸಮುದಾಯದ ಏಳಿಗೆಗೆ ಧ್ವನಿಯಾಯಿತು. ಆದರೆ ಕಾಲಾನಂತರದಲ್ಲಿ ಸಂಘಟನೆಯಲ್ಲಿದ್ದ ನಾಯಕರ ಸ್ವಾರ್ಥ, ನಿಷ್ಠೆಯ ಕೊರತೆಯಿಂದ ಒಡೆದು ಹಂಚಿಹೋದದ್ದನ್ನು ಕಾಣಬಹುದು. ಅಂದು ವಿಭಜನೆಗೊಂಡ ನಾಯಕರು ತಮ್ಮದೇ ಆದ ಸಂಘಟನೆಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಹಿತಾಸಕ್ತಿಯನ್ನು ಪೂರೈಸಿಕೊಳ್ಳುತ್ತಿದ್ದಾರೆ. ಅಂದರೆ ಇವರೆಲ್ಲರಿಗೂ ಬಾಬಾಸಾಹೇಬರು ಕೇಳಿದ್ದು ಕೊಡುವ ಕಾಮಧೇನುವಾಗಿದ್ದಾರೆ. ಇಂತಹ ನಾಯಕರನ್ನು ಹೊಂದಿರುವ ದಲಿತ ಸಮೂಹಗಳ ಬದುಕು ಬೇರೊಬ್ಬರಿಂದ ಹಾಳಾಗುವುದಕ್ಕಿಂತ ಸ್ವತಃ ತಮ್ಮದೇ ಸಮುದಾಯದ ನಾಯಕರಿಂದ ಹದಗೆಟ್ಟಿರುವುದು ಹೆಚ್ಚು. ಬಾಬಾಸಾಹೇಬರು 1956 ಜುಲೈ ತಿಂಗಳಲ್ಲಿ ತಮ್ಮ ಕಾರ್ಯದರ್ಶಿಯಾದ ನಾನಕ್ ಚಂದ್ ರತ್ತು ಜೊತೆಯಲ್ಲಿ ‘‘ನನ್ನ ಹೋರಾಟದ ಫಲವನ್ನು ನನ್ನ ಸಮುದಾಯದಲ್ಲಿನ ಎರಡು ವರ್ಗಗಳು ಮಾತ್ರ ಪಡೆದುಕೊಂಡಿವೆ. ಅವೆಂದರೆ ವಿದ್ಯೆಯಲ್ಲಿನ ಮೀಸಲಾತಿಯನ್ನು ಪಡೆದು ಜವಾಬ್ದಾರಿಯೇ ಇಲ್ಲದೆ ವರ್ತಿಸುವ ವಿದ್ಯಾವಂತರು ಹಾಗೂ ಉದ್ಯೋಗದಲ್ಲಿನ ಮೀಸಲಾತಿ ಪಡೆದು ಸ್ವಾರ್ಥಿಗಳಾದ ನೌಕರರು’’ ಎಂದು ವಿದ್ಯಾವಂತರೂ ಅಲ್ಲದ, ನೌಕರರೂ ಅಲ್ಲದ ತನ್ನ ಮೂರನೇ ವರ್ಗವಾದ ಅಮಾಯಕ ಸಮುದಾಯವನ್ನು ನೆನೆದು ಕಣ್ಣೀರಿಡುತ್ತಾರೆ. ಆ ಸನ್ನಿವೇಶವು ಇಂದಿಗೂ ಪ್ರಸ್ತುತವಾಗಿರುವುದಕ್ಕೆ ಅದೇ ಸಮುದಾಯದಿಂದ ಬಂದಂತಹ ನಾಯಕರು ಕಾರಣವಾಗಿದ್ದಾರೆ.

ಇಂದು ಸಮಾಜದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರವಿರುವ ಲಕ್ಷಾಂತರ ಸಂಘಟನೆಗಳು, ಹಲವು ರಾಜಕೀಯ ಪಕ್ಷಗಳು ನಾಯಿಕೊಡೆಗಳಂತೆ ಬೆಳೆದು ನಿಂತಿವೆ. ಆದರೆ 1984ರ ನಂತರದ ದಿನಗಳಲ್ಲಿ ಕಾನ್ಶಿರಾಂರವರು ನಡೆಸಿದ ಬಹುಜನ ಚಳವಳಿ ಮತ್ತು ಪಕ್ಷವು ಸ್ವಲ್ಪಮಟ್ಟಿಗೆ ಬಾಬಾಸಾಹೇಬರ ಆಶಯಗಳನ್ನು ಈಡೇರಿಸುವ ದಾರಿಯಲ್ಲಿ ಸಾಗಿತ್ತಾದರೂ ನಂತರದ ದಿನಗಳಲ್ಲಿ ವಿಫಲದ ಹಾದಿಯನ್ನು ಹಿಡಿಯಿತು. ಇದನ್ನು ಹೊರತುಪಡಿಸಿದರೆ ಇನ್ಯಾವ ಸಂಘಟನೆಯೂ, ರಾಜಕೀಯ ಪಕ್ಷವೂ ಬಾಬಾಸಾಹೇಬರ ಆಶಯಗಳನ್ನು ಸಾಕಾರಗೊಳಿಸುವಲ್ಲಿ ವಿಫಲವಾಗಿರುವುದನ್ನು ಕಾಣಬಹುದಾಗಿದೆ. ದಲಿತರ ಪ್ರತಿನಿಧಿಗಳಾಗಿ ಹವು ನಾಯಕರು ಇಂದು ರಾಜಕೀಯವನ್ನು ಪ್ರವೇಶಿಸುತ್ತಿದ್ದಾರೆ. ಆದರೆ ಯಾವ ನಾಯಕನಿಗೂ ತನ್ನ ಜನರ ಹಿತಕಾಯುವ ಮನಸ್ಸಿಲ್ಲ. ಬದಲಿಗೆ ಸ್ವಹಿತಾಸಕ್ತಿಯನ್ನು ಪೂರೈಸಿಕೊಳ್ಳಲು(ಅಧಿಕಾರ ಮತ್ತು ಹಣಕ್ಕಾಗಿ) ಇಡೀ ಸಮುದಾಯವನ್ನು ಬಲಿಕೊಡುತ್ತಿದ್ದಾರೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವುದು ಶೋಚನೀಯ. 2016ರ ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೊ ವರದಿಯ ಪ್ರಕಾರ 1,912 ಪ್ರಕರಣಗಳು ವರದಿಯಾಗಿದ್ದು 164 ಅತ್ಯಾಚಾರ, 78 ಕೊಲೆಗಳು ಹಾಗೂ 1,670 ಇತರ ಪ್ರಕರಣಗಳಾಗಿವೆ. ಅಲ್ಲದೆ ಸುಮಾರು 1,526 ಪ್ರಕರಣಗಳು ಪರಿಶಿಷ್ಟ ಜಾತಿಯವರ ಮೇಲೆ, 386 ಪ್ರಕರಣಗಳು ಪರಿಶಿಷ್ಟ ಪಂಗಡದ ಜನರ ಮೇಲೆ ನಡೆದಿವೆ. ಜೊತೆಗೆ ರಾಜ್ಯದಲ್ಲಿ ಪ್ರತೀ ಎರಡು ದಿನಕ್ಕೆ ಒಬ್ಬ ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರವಾಗುತ್ತಿದೆ ಮತ್ತು ನಾಲ್ಕು ಗಂಟೆಗೆ ಒಬ್ಬ ದಲಿತನ ಮೇಲೆ ದೌರ್ಜನ್ಯ, ಪ್ರತೀ ಐದು ದಿನಕ್ಕೆ ಒಬ್ಬ ದಲಿತನ ಮಾರಣಹೋಮವಾಗುತ್ತಿವೆ. ಆದರೆ ನಮ್ಮ ನಾಯಕರು ಇಂತಹ ದೌರ್ಜನ್ಯವನ್ನು ವಿರೋಧಿಸುವುದಕ್ಕಿಂತ ಹೆಚ್ಚಾಗಿ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ. ಇದಕ್ಕೆಲ್ಲಾ ಮುಖ್ಯ ಕಾರಣ ದಲಿತ ನಾಯಕರು ಅನ್ಯರ ದಾಸ್ಯಕ್ಕೆ(ಅಧಿಕಾರ ಮತ್ತು ಹಣಕ್ಕಾಗಿ) ಒಳಗಾಗಿರುವುದು. ಆದ್ದರಿಂದಲೇ ಬಾಬಾಸಾಹೇಬರು ‘‘ಅನ್ಯರ ದಾಸ್ಯಕ್ಕೆ ಒಳಗಾಗುವ ನನ್ನ ಜನ ಬಾಯಿ ಕಟ್ಟಿದ ನಾಯಿಗಳಂತಾಗುತ್ತಾರೆ, ಅವರು ಕಚ್ಚುವುದಿರಲಿ ಬೊಗಳಲು ಸಾಧ್ಯವಾಗದ ಸ್ಥಿತಿಯಲ್ಲಿರುತ್ತಾರೆ’’ ಎಂದಿದ್ದಾರೆ.

ಈ ಎಲ್ಲಾ ವಿಚಾರಗಳನ್ನು ಗಮನಿಸಿದಾಗ ಯಾವುದೇ ನಿರ್ದಿಷ್ಟ ಗುರಿ, ಧ್ಯೇಯೋದ್ದೇಶಗಳಿಲ್ಲದೆ ದಿಕ್ಕೆಟ್ಟು ಸಾಗುತ್ತಿರುವ ದಲಿತ ಸಮುದಾಯದ ನಾಯಕರು ಇನ್ನಾದರೂ ದಲಿತರಿಗೆ ಹತ್ತಿರವಾಗಬೇಕು. ಬಾಬಾಸಾಹೇಬರು ತಮ್ಮ ಜೀವಿತಾವಧಿಯಲ್ಲಿ ಎದುರಿಸಿದ ಏಳುಬೀಳು, ದುಃಖ-ದುಮ್ಮಾನಗಳನ್ನು ಅರಿತುಕೊಳ್ಳಬೇಕು. ತಮ್ಮ ಸ್ವಾರ್ಥ, ಸ್ವಪ್ರತಿಷ್ಠೆ, ಅಂದಾಭಿಮಾನಗಳನ್ನು ಬದಿಗೊತ್ತಿ ಅನ್ಯರ ದಾಸ್ಯವನ್ನು ತೊರೆದು ಜಾಗೃತರಾಗಬೇಕು. ತಮ್ಮ ಸಮುದಾಯದ ಹಿತಾಸಕ್ತಿಯನ್ನು ಕಾಪಾಡಲು ಸಂಘಟಿತರಾಗಬೇಕಾಗಿದೆ.

Writer - ಶ್ರೀನಿವಾಸ್ ಕೆ., ಬೆಂಗಳೂರು

contributor

Editor - ಶ್ರೀನಿವಾಸ್ ಕೆ., ಬೆಂಗಳೂರು

contributor

Similar News