ಮುಖ್ಯಮಂತ್ರಿ ಆಯ್ಕೆ ವಿಚಾರ: ಹಿಮಾಚಲ ಪ್ರದೇಶ ಬಿಜೆಪಿಯಲ್ಲಿ ತೀವ್ರ ಭಿನ್ನಾಭಿಪ್ರಾಯ

Update: 2017-12-23 06:33 GMT

ಶಿಮ್ಲಾ, ಡಿ.23: ಹಿಮಾಚಲ ಪ್ರದೇಶದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಚಾರದಲ್ಲಿ ಬಿಜೆಪಿ ನಾಯಕರ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿದೆಯೆನ್ನಲಾಗಿದೆ. ಕೇಂದ್ರ ವೀಕ್ಷಕರಾದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ನರೇಂದ್ರ ತೋಮರ್ ಅವರು ರಾಜ್ಯಕ್ಕೆ ಆಗಮಿಸಿ ವಿವಿಧ ನಾಯಕರು ಹಾಗೂ ಆರೆಸ್ಸೆಸ್ ಮುಖಂಡರನ್ನು ಭೇಟಯಾಗಿ ಸಮಾಲೋಚನೆ ನಡೆಸಿರುವ ಹೊರತಾಗಿಯೂ ಈ ಸಮಸ್ಯೆ ಏರ್ಪಟ್ಟಿದೆ.

ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿರುವವರೆಂದು ಹೇಳಲಾದ ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಲ್ ಹಾಗೂ ಸೇರಜ್ ಶಾಸಕ ಜೈ ರಾಮ್ ಠಾಕೂರ್ ಅವರ ಬೆಂಬಲಿಗರು ಪರಸ್ಪರ ದೋಷಾರೋಪಣೆ ಮಾಡಲು ಶುರುವಿಟ್ಟುಕೊಂಡು ಶಿಮ್ಲಾದ ಹೊಟೇಲ್ ಪೀಟರ್‌ಹೊಫ್ ನಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿದ್ದಾರೆನ್ನಲಾಗಿದೆ.

ಧುಮಲ್ ಅವರ ಬೆಂಬಲಿಗರು ‘ಧುಮಲ್ ಜಿ ಕೋ ಜೈ ಶ್ರೀ ರಾಮ್, ಹಿಮಾಚಲ್ ಕಾ ನೇತಾ ಕೈಸಾ ಹೋ ? ಪ್ರೇಮ್ ಕುಮಾರ್ ಧುಮಲ್ ಜೈಸಾ ಹೋ’’ ಮುಂತಾದ ಘೋಷಣೆ ಕೂಗಿದರೆ, ಠಾಕೂರ್ ಅವರ ಬೆಂಬಲಿಗರು ‘‘ಹಮಾರ ನೇತಾ ಕೈಸಾ ಹೋ ? ಜೈ ರಾಮ್ ಠಾಕುರ್ ಜೈಸಾ ಹೋ’’ ಮುಂತಾದ ಘೋಷಣೆ ಕೂಗಿದ್ದಾರೆ. ಆರೆಸ್ಸೆಸ್ ನಾಯಕರನ್ನು ಭೇಟಿಯಾಗಿ ಹಿಂದಿರುಗುತ್ತಿದ್ದ ಕೇಂದ್ರ ವೀಕ್ಷಕರ ವಾಹನಗಳನ್ನೂ ಅವರು ಸುತ್ತುವರಿದರು.

ಸದ್ಯ ಇಬ್ಬರು ವೀಕ್ಷಕರೂ ದಿಲ್ಲಿಗೆ ತೆರಳಿದ್ದು, ಅಲ್ಲಿ ಪಕ್ಷ ನಾಯಕತ್ವಕ್ಕೆ ತಮ್ಮ ವರದಿ ಸಲ್ಲಿಸಲಿದ್ದಾರೆ. ಇಬ್ಬರೂ ಅಪಸ್ವರ ಹೆಚ್ಚಾಗಬಹುದೆಂದು ಎಲ್ಲಾ ಶಾಸಕರನ್ನು ಭೇಟಿಯಾಗಿಲ್ಲವೆಂದು ಹೇಳಲಾಗಿದೆ.

44 ಪಕ್ಷದ ಶಾಸಕರ ಪೈಕಿ ಕನಿಷ್ಠ 26 ಮಂದಿ ತಮ್ಮ ಜತೆಗಿದ್ದಾರೆ ಎಂದು ಧುಮಲ್ ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳ ಬೆಂಬಲಿಗರು ಘೋಷಣೆ ಕೂಗಿರುವುದು ಹಿರಿಯ ಬಿಜೆಪಿ ನಾಯಕ ಹಾಗೂ ಕಂಗ್ರಾ ಸಂಸದ ಶಾಂತ ಕುಮಾರ್ ಅವರಿಗೆ ಸಿಟ್ಟು ತರಿಸಿದ್ದು, ಪಕ್ಷದಲ್ಲಿ ಅಶಿಸ್ತು ಸಹಿಸುವ ಪ್ರಶ್ನೆಯಿಲ್ಲ ಎಂದಿದ್ದಾರೆ.

ವೀಕ್ಷಕರ ವರದಿಯಾಧಾರದಲ್ಲಿ ಪಕ್ಷ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ನಂತರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗುವುದು ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News