‘ದಿ ವೈರ್’ ಮೇಲಿನ ಮಧ್ಯಂತರ ತಡೆಯಾಜ್ಞೆ ತೆರವು

Update: 2017-12-23 14:00 GMT

ಹೊಸದಿಲ್ಲಿ,ಡಿ.23: 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಬಳಿಕ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರ ಉದ್ಯಮಗಳ 'ಅಭೂತಪೂರ್ವ ಏಳಿಗೆ'ಯ ಕುರಿತು ಸುದ್ದಿ ಜಾಲತಾಣ ‘ ದಿ ವೈರ್’ ವರದಿಯೊಂದನ್ನು ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಅದರ ಮೇಲೆ ಹೇರಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಅಹ್ಮದಾಬಾದ್‌ನ ಮಿರ್ಝಾಪುರದ ಸಿವಿಲ್ ನ್ಯಾಯಾಲಯವು ಶನಿವಾರ ತೆರವುಗೊಳಿಸಿದೆ. ಇದರೊಂದಿಗೆ ತನ್ನ ‘ದಿ ಗೋಲ್ಡನ್ ಟಚ್ ಆಫ್ ಜಯ್ ಶಾ’ ಲೇಖನವು ಸಾರ್ವಜನಿಕ ಹಿತಾಸಕ್ತಿಯಲ್ಲಿ ಪ್ರಕಟಿಸಲಾದ ಅಭಿವ್ಯಕ್ತಿ ಸ್ವಾತಂತ್ರವಾಗಿತ್ತು ಎಂಬ 'ದಿ ವೈರ್‌'ನ ನಿಲುವನ್ನು ನ್ಯಾಯಾಲಯವು ಎತ್ತಿ ಹಿಡಿದಂತಾಗಿದೆ.

'ದಿ ವೈರ್', ಅದರ ಸಂಪಾದಕರು ಮತ್ತು ವರದಿಯ ಲೇಖಕರು ಈ ಲೇಖನದ ಆಧಾರದಲ್ಲಿ ಜಯ್ ಶಾ ವಿರುದ್ಧ ಯಾವುದೇ ರೂಪದಲ್ಲಿ ಯಾವುದೇ ಸುದ್ದಿ, ವರದಿಗಳನ್ನು ಪ್ರಕಟಿಸದಂತೆ ನ್ಯಾಯಾಲಯವು 2017, ಅ.12ರಂದು ಶಾ ಪರವಾಗಿ ಮಧ್ಯಂತರ ತಡೆಯಾಜ್ಞೆಯನ್ನು ಹೊರಡಿಸಿತ್ತು.

ಮಧ್ಯಂತರ ತಡೆಯಾಜ್ಞೆಯನ್ನು ಪ್ರಶ್ನಿಸಿದ್ದ ದಿ ವೈರ್, ಅದು ಅಭಿವ್ಯಕ್ತಿ ಸ್ವಾತಂತ್ರದ ಮೇಲಿನ ಅಸಾಂವಿಧಾನಿಕ ನಿರ್ಬಂಧವಾಗಿದೆ ಮತ್ತು ಸಾರ್ವಜನಿಕ ದಾಖಲೆಗಳು ಹಾಗೂ ಜಯ್ ಶಾ ಒದಗಿಸಿದ್ದ ಮಾಹಿತಿಯನ್ನು ಆಧರಿಸಿದ್ದ ಮೂಲ ಲೇಖನದಲ್ಲಿ ಮಾನಹಾನಿ ಕರವಾದುದು ಏನೂ ಇಲ್ಲ ಎಂದು ವಾದಿಸಿತ್ತು.

ತನ್ನ ತಡೆಯಾಜ್ಞೆಯು ಈಗ ‘ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ’ ಎಂಬ ಒಂದು ಸಾಲಿಗೆ ಮಾತ್ರ ಸೀಮಿತಗೊಂಡಿದೆ ಎಂದು ಶನಿವಾರ ಘೋಷಿಸುವ ಮೂಲಕ ಮಿರ್ಝಾಪುರ ನ್ಯಾಯಾಲಯವು ತನ್ನ ಹಿಂದಿನ ಮಧ್ಯಂತರ ತಡೆಯಾಜ್ಞೆಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸಿದೆ. ಸರಳವಾಗಿ ಹೇಳಬೇಕೆಂದರೆ ದಿ ವೈರ್ ತನ್ನ ಮೂಲ ಲೇಖನಕ್ಕೆ ಸಂಬಂಧಿಸಿದ ಯಾವುದೇ ಚರ್ಚೆಯಲ್ಲಿ ಈ ಶಬ್ದಗಳನ್ನು ಬಳಸುವಂತಿಲ್ಲ. ಮೂಲ ಲೇಖನ ಸೇರಿದಂತೆ ಜಯ್ ಶಾ ಅವರ ಉದ್ಯಮದ ಯಾವುದೇ ಮತ್ತು ಪ್ರತಿಯೊಂದು ಮಗ್ಗಲಿನ ಕುರಿತು ವರದಿ ಮಾಡಲು ಮತ್ತು ಲೇಖನಗಳನ್ನು ಪ್ರಕಟಿಸಲು 'ದಿ ವೈರ್' ಈಗ ಮುಕ್ತ ಸ್ವಾತಂತ್ರ್ಯ ಹೊಂದಿದೆ.

ತಾವು ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರುವವರೆಗೆ ಒಂದು ತಿಂಗಳ ಅವಧಿಗಾದರೂ ಮೂಲ ಮಧ್ಯಂತರ ತಡೆಯಾಜ್ಞೆ(ಈಗ ತೆರವುಗೊಂಡಿರುವ)ಯನ್ನು ವಿಸ್ತರಿಸುವಂತೆ ಜಯ್ ಶಾ ಅವರ ವಕೀಲರು ಕೋರಿದ್ದು, ತಾನು 15 ದಿನಗಳ ಕಾಲಾವಕಾಶ ನೀಡುವುದಾಗಿ ನ್ಯಾಯಾಲಯವು ಹೇಳಿತ್ತು. ಆದರೆ ಒಂದು ದಿನದ ವಿಸ್ತರಣೆ ನೀಡುವುದನ್ನೂ 'ದಿ ವೈರ್' ಬಲವಾಗಿ ವಿರೋಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News