ಹೊನ್ನಾವರ ವಿದ್ಯಾರ್ಥಿನಿ ಕುರಿತ ಶೋಭಾ ಪ್ರಚೋದನಕಾರಿ ಟ್ವೀಟ್ ಅನ್ನು ಮತ್ತೆ ಟ್ವೀಟ್ ಮಾಡಿದ ಬಿಜೆಪಿ ವಕ್ತಾರ

Update: 2017-12-24 10:29 GMT

ಬೆಂಗಳೂರು,ಡಿ.24: ಹೊನ್ನಾವರದಲ್ಲಿ ಇತ್ತೀಚೆಗೆ ನಡೆದಿದೆ ಎನ್ನಲಾದ ಪ್ರಕರಣವೊಂದಕ್ಕೆ ಸಂಬಂಧಿಸಿ ಆಧಾರ ರಹಿತ ಹಾಗೂ ಪ್ರಚೋದನಕಾರಿ ಟ್ವೀಟ್ ಮಾಡಿರುವುದಕ್ಕೆ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಾದ ಬೆನ್ನಿಗೇ ಬಿಜೆಪಿಯ ವಕ್ತಾರನೊಬ್ಬ ಅದೇ ಆಧಾರ ರಹಿತ ಟ್ವೀಟ್ ಅನ್ನು ಮತ್ತೆ ಟ್ವೀಟ್ ಮಾಡಿದ್ದಾರೆ.

ಹೊನ್ನಾವರದ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದಾರೆ ಎಂದು ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದರು. ಆದರೆ ಆ ವಿದ್ಯಾರ್ಥಿನಿಯ ಮೇಲೆ ಯಾರೂ ಹಲ್ಲೆ ಅಥವಾ ಅತ್ಯಾಚಾರ ನಡೆಸಿಲ್ಲ. ಸ್ವತಃ ಆಕೆಯೇ ಕೈಗೆ ಗಾಯ ಮಾಡಿಕೊಂಡಿದ್ದಳು ಎಂಬುದು ವಿಚಾರಣೆಯಿಂದ ಬಯಲಾಯಿತು. ಈ ಬಗ್ಗೆ ಜಿಲ್ಲಾ ಎಸ್ಪಿಯವರೇ ಸ್ಪಷ್ಠೀಕರಣ ನೀಡಿದ್ದರು. ಆಧಾರ ರಹಿತ ಹಾಗೂ ಕೋಮುಪ್ರಚೋದನಕಾರಿ ಟ್ವೀಟ್ ಮಾಡಿದ್ದಕ್ಕೆ ಹೊನ್ನಾವರ ಪೊಲೀಸರು ಸಂಸದೆ ಶೋಭಾ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಆದರೆ ಇದೀಗ ಚುನಾವಣೆಯ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ವಿವಾದ ಸೃಷ್ಟಿಸಲೆಂದೇ ಬಿಜೆಪಿಯ ದಿಲ್ಲಿ ಘಟಕದ ಕುಖ್ಯಾತ ವಕ್ತಾರ ತೇಜಿಂದರ್ ಬಗ್ಗಾ ಶೋಭಾರನ್ನು ಬೆಂಬಲಿಸಿ ಮತ್ತೆ ಅದೇ ಸುಳ್ಳನ್ನು ಟ್ವೀಟ್ ಮಾಡಿದ್ದಾರೆ.ಈ ತೇಜಿಂದರ್ ಬಗ್ಗಾ ಪ್ರಚೋದನಾಕಾರಿ ಹೇಳಿಕೆಗಳು ಹಾಗೂ ಸುಳ್ಳುಗಳನ್ನು ಟ್ವೀಟ್ ಮಾಡುವುದಕ್ಕಾಗಿ ಕುಖ್ಯಾತಿ ಹೊಂದಿದ್ದಾರೆ.

ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರ ಕಾಶ್ಮೀರ ಕುರಿತ ನಿಲುವನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ನಲ್ಲಿರುವ ಅವರ ಕೊಠಡಿಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿ ಅದನ್ನು ಹೆಮ್ಮೆಯಿಂದ ಹೇಳಿಕೊಂಡ ವ್ಯಕ್ತಿ ಈ ತೇಜಿಂದರ್ ಬಗ್ಗಾ. ತನ್ನನ್ನು ತಾನು ಅಗ್ರ ಬಲಪಂಥೀಯ ಎಂದು ಘೋಷಿಸಿಕೊಳ್ಳುವ ಈ ವ್ಯಕ್ತಿ ಇತ್ತೀಚೆಗೆ ಬಿಜೆಪಿ ದಿಲ್ಲಿ ಘಟಕದ ವಕ್ತಾರನಾಗಿ ನೇಮಕಗೊಂಡಿದ್ದಾರೆ. ಟ್ವಿಟರ್ ನಲ್ಲಿ ಭಾರೀ ಸಂಖ್ಯೆಯ ಫಾಲೊವರ್ಸ್ ಹೊಂದಿರುವ ಈತನನ್ನು ಪ್ರಧಾನಿ ನರೇಂದ್ರ ಮೋದಿ ತನ್ನ ನಿವಾಸಕ್ಕೆ ಕರೆದು ಅಭಿನಂದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News