ಸಂವಿಧಾನ ಬದಲಾವಣೆ ಮಾಡಲು ನಾವು ಬಂದಿದ್ದೇವೆ : ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ

Update: 2017-12-24 13:51 GMT

ಕೊಪ್ಪಳ, ಡಿ. 24: ‘ತಾವು ಜಾತ್ಯತೀತರು ಎಂದು ಹೇಳಿಕೊಳ್ಳುವವರಿಗೆ ತಮ್ಮ ಅಪ್ಪ-ಅಮ್ಮಂದಿರ ರಕ್ತದ ಪರಿಚಯವೇ ಇರುವುದಿಲ್ಲ’ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರವಿವಾರ ಜಿಲ್ಲೆಯ ಕುಕನೂರಿನ ಮಹಾಮಾಯಾ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಬ್ರಾಹ್ಮಣ ಯುವ ಪರಿಷತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಂದೆ-ತಾಯಿ ಗುರುತು ಇಲ್ಲದವರು ಮಾತ್ರ ಜಾತ್ಯತೀತರು. ಇವರನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು.

ನಾನೊಬ್ಬ ಮುಸ್ಲಿಂ, ಕ್ರೈಸ್ತ, ಲಿಂಗಾಯತ, ಬ್ರಾಹ್ಮಣ, ಹಿಂದೂ ಎಂದು ಹೇಳಿದರೆ ಸಂತೋಷವಾಗುತ್ತದೆ. ಏಕೆಂದರೆ ಅವರಿಗೆ ಅವರ ತಂದೆ-ತಾಯಿಗಳ ಗುರುತು ಇರುತ್ತದೆ. ಆದರೆ ಈ ವಿಚಾರವಾದಿಗಳು ಜಾತ್ಯತೀತರೆಂದು ಹೇಳಿಕೊಳ್ಳುತ್ತಾರೆ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದರು.

ಸಂವಿಧಾನ ಬದಲು: ಕಾಲಕ್ಕೆ ತಕ್ಕಂತೆ ಸಂವಿಧಾನ ಬದಲಾಗಬೇಕು. ಈಗಾಗಲೇ ಅನೇಕ ಬಾರಿ ಸಂವಿಧಾನ ಬದಲಾವಣೆ ಮಾಡಲಾಗಿದೆ. ನಾವೂ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ. ಅದಕ್ಕಾಗಿಯೇ ನಾವು ಬಂದಿದ್ದೇವೆ ಎಂದು ಅನಂತ್ ಕುಮಾರ್ ಹೆಗಡೆ ಹೇಳಿದರು.

ಒಂದು ಕಾಲದಲ್ಲಿ ದೇಶದಲ್ಲಿ ಮನುಸ್ಮೃತಿ ಇತ್ತು. ಇದೀಗ ಅಂಬೇಡ್ಕರ್ ಅವರು ರೂಪಿಸಿರುವ ಸ್ಮೃತಿ ಇದೆ. ಅದೂ ಕಾಲಕ್ಕೆ ತಕ್ಕಂತೆ ಬದಲಾಗಬೇಕಿದೆ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಜಾತಿ ಅನ್ನೋ ವಿಕೃತಿ ಬೆಳದಿದೆ. ಈ ವಿಕೃತಿಯನ್ನು ನಾವೂ ಎಂದೂ ಒಪ್ಪುವುದಿಲ್ಲ. ಹುಟ್ಟಿದಾಗ ಪ್ರತಿಯೊಬ್ಬ ಮನುಷ್ಯ ಪ್ರಾಣಿನೇ. ಆದರೆ, ಅವನು ಮಾಡುವ ಕೆಲಸ ಕಾರ್ಯಗಳಿಂದ ಮನುಷ್ಯನಾಗಿ ಬದಲಾಗುತ್ತಾನೆ ಎಂದರು.

ಕಾರ್ಯಕ್ರಮದಲ್ಲಿ ಲೋಕಸಭೆ ಸದಸ್ಯ ಸಂಗಣ್ಣ ಕರಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮುಖಂಡರಾದ ಹಾಲಪ್ಪ ಆಚಾರ್, ಡಾ.ಕೆ.ಜಿ.ಕುಲಕರ್ಣಿ, ಸುಮಾ ಶಾಸ್ತ್ರಿ ಸೇರಿ ಬ್ರಾಹ್ಮಣ ಸಮುದಾಯದ ಮುಖಂಡರು ಹಾಜರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News