ಕೇಂದ್ರ ನಯಾಪೈಸೆ ಅನುದಾನ ನೀಡಿಲ್ಲ : ಮಲ್ಲಿಕಾರ್ಜುನ ಖರ್ಗೆ ಆರೋಪ

Update: 2017-12-24 13:00 GMT

ಕಲಬುರಗಿ, ಡಿ. 24: ಸ್ಮಾರ್ಟ್‌ಸಿಟಿ, ಸಂಸದರ ಆದರ್ಶ ಗ್ರಾಮ ಯೋಜನೆಗಳಿಗೆ ಕೇಂದ್ರ ಸರಕಾರ ಎಳ್ಳು ನೀರು ಬಿಟ್ಟಿದ್ದು, ಮೂರುವರೆ ವರ್ಷದಲ್ಲಿ ಕೇಂದ್ರ ಸರಕಾರ ಈ ಯೋಜನೆಗಳಿಗೆ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ ಎಂದು ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ರವಿವಾರ ನಗರದ ಹೊರವಲಯದಲ್ಲಿರುವ ನಂದಿಕೂರಿನಲ್ಲಿ ಆಯೋಜಿಸಿದ್ದ ತಾಜ್ಯ ನೀರು ಶುದ್ಧಿಕರಣ ಘಟಕ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಪೊಳ್ಳು ಆಶ್ವಾಸನೆಗಳನ್ನು ನೀಡುವುದನ್ನು ಬಿಟ್ಟು ಪ್ರಾಯೋಗಿಕವಾಗಿ ಕೆಲಸ ಮಾಡಬೇಕೆಂದು ತಾಕೀತು ಮಾಡಿದರು.

ರಾಜ್ಯ ಸರಕಾರ 47.30 ಕೋಟಿ ರೂ.ವೆಚ್ಚದಲ್ಲಿ ತ್ಯಾಜ್ಯ ನೀರು ಶುದ್ಧಿಕರಣ ನಿರ್ಮಿಸಿದ್ದು, ಶೇ.30ರಷ್ಟು ನೀರನ್ನು ಶುದ್ಧಿಕರಣ ಮಾಡಲಾಗುವುದು ಎಂದ ಅವರು, ಎರಡನೆ ಹಂತದಲ್ಲಿ ಮತ್ತೊಂದು ಘಟಕವನ್ನು ಸ್ಥಾಪಿಸಿ ಜನ ಸಾಮಾನ್ಯರ ಆರೋಗ್ಯಕ್ಕೆ ಒತ್ತು ನೀಡಲಾಗಿದೆ ಎಂದು ಖರ್ಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಮೇಯರ್ ಶರಣಕುಮಾರ್ ಮೋದಿ, ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಇಲಿಯಾಸ್ ಸೇಠ್, ಕೆಎಂಸಿ ಸದಸ್ಯ ಆದಿಲ್ ಸುಲೈಮಾನ್, ಗ್ರಾ.ಪಂ. ಅಧ್ಯಕ್ಷೆ ಪವೀನ್ ರಿಯಾಝ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

‘ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್‌ಗೆ ಸಿಬಿಐ ಕೋರ್ಟ್ ಶಿಕ್ಷೆ ಪ್ರಕಟಿಸಿದ್ದು, ಕಾನೂನು ಎಲ್ಲರಿಗೂ ಒಂದೇ. ಅದೇ ರೀತಿ ಬಿಹಾರದಲ್ಲಿ ಬಿಜೆಪಿ- ಜೆಡಿಯು ಅಧಿಕಾರದಲ್ಲಿ ನಡೆದಿದ್ದ ಬಹುಕೋಟಿ ಹಗರಣ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೂ ಶಿಕ್ಷೆ ವಿಧಿಸಬೇಕು’
-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News