ವಚನಕಾರರ ಮರು ಓದು

Update: 2017-12-24 18:33 GMT

ಸದ್ಯದ ಕರ್ನಾಟಕದ ಸಂದರ್ಭದಲ್ಲಿ ‘ಲಿಂಗಾಯತ ಸ್ವತಂತ್ರ ಧರ್ಮ’ ಹೋರಾಟ ಬೇರೆ ಬೇರೆ ನೆಲೆಗಳಲ್ಲಿ ಚರ್ಚೆಗೆ ಒಳಗಾಗುತ್ತಿದೆ. ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸಂಚಲನ ಸೃಷ್ಟಿಸಿರುವ ಈ ಆಂದೋಲನಕ್ಕೆ ಬೇರೆ ಬೇರೆ ಸಿದ್ಧಾಂತದ ಜನರೂ ಕೈ ಜೋಡಿಸುತ್ತಿದ್ದಾರೆ. 12ನೆ ಶತಮಾನದಲ್ಲಿ ಬಸವಣ್ಣ ಒಂದು ಹೊಸ ಧರ್ಮವನ್ನು ಯಾಕೆ ಸ್ಥಾಪನೆ ಮಾಡಬೇಕಾಯಿತು, ಆ ಧರ್ಮದ ಮೂಲ ಉದ್ದೇಶಗಳೇನು, ಆ ಧರ್ಮದ ನೇತೃತ್ವ ವಹಿಸಿದವರು ಯಾರು, ಆ ಧರ್ಮವನ್ನು ವಿರೋಧಿಸಿದವರು ಮತ್ತು ಬಸವಣ್ಣರ ಬಳಗವನ್ನು ಬಲಿಪಶು ಮಾಡಿದವರು ಯಾರು ಮೊದಲಾದ ಚರ್ಚೆಗಳೆಲ್ಲ ಈ ಆಂದೋಲನದ ಜೊತೆಗೆ ಮುನ್ನೆಲೆಗೆ ಬರುತ್ತಿದೆ. ದೇಶದಲ್ಲಿ ಮತ್ತೆ ತಲೆಯೆತ್ತಿ ನಿಂತಿರುವ ಮನುವಾದ, ಈ ಆಂದೋಲನದಿಂದ ವಿಚಲಿತಗೊಂಡಂತಿದೆ ಮತ್ತು ಈ ಆಂದೋಲನವನ್ನು ಮಟ್ಟ ಹಾಕುವ ಪ್ರಯತ್ನವನ್ನು ಬೇರೆ ಬೇರೆ ರೀತಿಯಲ್ಲಿ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಬಸವಣ್ಣರಿಂದ ಹಿಡಿದು ಬೇರೆ ಬೇರೆ ಅನುಭಾವಿ ವಚನಕಾರರ ವಚನಗಳ ಮರು ಓದು ನಡೆಯುತ್ತಿದೆ. ಹಾಗೆಯೇ ಬದಿಗೆ ಸರಿಯಲ್ಪಟ್ಟ ವಚನಕಾರರ ವಚನಗಳನ್ನು ಪರಿಚಯಿಸುವ ಪ್ರಯತ್ನವೂ ನಡೆಯುತ್ತಿದೆ. ಇಂತಹ ಒಂದು ಪ್ರಯತ್ನದಲ್ಲಿ ಹೊರಬಂದಿರುವ ಪ್ರಮುಖ ಕೃತಿ ಪ್ರೊ. ಎಚ್. ಲಿಂಗಪ್ಪ ಅವರ ‘ಅನುಭಾವಿ ವಚನಕಾರರು-ಮಾದಾರ ಚನ್ನಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಮಾದಾರಧೂಳಯ್ಯ’.
ಈ ಕೃತಿಯಲ್ಲಿ ಶರಣರಾದ ಮಾದಾರ ಚೆನ್ನಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಮಾದಾರ ಧೂಳಯ್ಯರ ಹೋರಾಟದ ವ್ಯಕ್ತಿತ್ವವನ್ನು, ಅವರ ವಚನಗಳ ಹಿನ್ನೆಲೆಯಲ್ಲಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಇವರು 12ನೆ ಶತಮಾನದ ಶರಣ ಚಳವಳಿಯ ಮುಖ್ಯ ಚೇತನಗಳು ಎಂಬುದನ್ನು ಹಲವು ಜನ ಸಂಶೋಧಕರು ಈಗಾಗಲೇ ತಿಳಿಯಪಡಿಸಿದ್ದಾರೆ. ಆದರೆ ಅವೇ ಆಕರ ಮೂಲಗಳಿಂದ ಭಿನ್ನವಾಗಿ ಅನುಭವದ ನೆಲೆಯ ಬದುಕನ್ನು ಸಾಕ್ಷಿ ಪ್ರಜ್ಞೆಯಾಗಿಸಿಕೊಂಡ ಲಿಂಗಪ್ಪನವರು ಶರಣರ ವಚನಗಳ ಮೂಲಕ ಅವರ ಬದುಕಿನ ದರ್ಶನ ಮಾಡಿಸಿರುವುದು ಬಹು ಮಹತ್ವದ ವಿಚಾರವಾಗಿದೆ. ಇಲ್ಲಿ ವಚನಕಾರರ ಬದುಕಿನ ಜೊತೆಗೆ ಅಪರೂಪದ ವಚನಗಳನ್ನು ವಿಶ್ಲೇಷಣೆಗಳ ಜೊೆಗೆ ಲಿಂಗಪ್ಪ ಅವರು ಮಂಡಿಸಿದ್ದಾರೆ.
ರಶ್ಮಿ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 200. ಮುಖ ಬೆಲೆ 160 ರೂಪಾಯಿ. ಆಸಕ್ತರು 99459 98099 ೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News