ದಲಿತರ ಎದೆಯಾಳದ ಧ್ವನಿ

Update: 2017-12-25 18:31 GMT


ಡಾ. ಬಿ. ಆರ್. ಅಂಬೇಡ್ಕರ್ ಇಂಗ್ಲಿಷ್‌ನಲ್ಲಿ ರಚಿಸಿದ ಮೂರು ಭಾಷಣಗಳು ಮತ್ತು ಮೂರು ಲೇಖನಗಳನ್ನೊಳಗೊಂಡ ಕೃತಿ ‘ವೀಸಾದ ನಿರೀಕ್ಷೆಯಲ್ಲಿ ನೆನಪುಗಳು’. ಸದಾಶಿವ ಮರ್ಜಿ ಅವರು ಇದನ್ನು ಕನ್ನಡಕ್ಕಿಳಿಸಿದ್ದಾರೆ. ಕೃತಿಯ ಮೊದಲ ಲೇಖನ ‘ವೀಸಾದ ನಿರೀಕ್ಷೆಯಲ್ಲಿ-ನೆನಪುಗಳು’ ಎನ್ನುವುದಾಗಿದೆ. ಅಸ್ಪಶ್ಯತೆಯ ಅವಮಾನ ಎಷ್ಟು ಕ್ರೂರವಾಗಿರುತ್ತದೆ ಮತ್ತು ಆ ಗಾಯ ಒಣಗದೆ ಪದೇ ಪದೇ ಹೇಗೆ ಕಾಡುತ್ತದೆ ಎನ್ನುವುದನ್ನು ಅಂಬೇಡ್ಕರ್ ಈ ಲೇಖನದಲ್ಲಿ ವಿವರಿಸಿದ್ದಾರೆ. ಇಲ್ಲಿ ಅಂಬೇಡ್ಕರ್ ಅವರು ತಾವೇ ಸ್ವತಃ ಅನುಭವಿಸಿರುವ ಜಾತೀಯ ಅವಮಾನಗಳನ್ನು ದಾಖಲಿಸಿದ್ದಾರೆ. ಒಟ್ಟು ಆರು ಅಮಾನವೀಯ ಘಟನೆಗಳನ್ನು ಅವರು ಇಲ್ಲಿ ಹೇಳಿಕೊಂಡಿದ್ದಾರೆ. ಆರ್ಥಿಕವಾಗಿ ಸಬಲರಾಗಿದ್ದರೂ ಅಂಬೇಡ್ಕರ್ ಅವರು ಅವಮಾನಗಳನ್ನು ಎದುರಿಸಿದರು. ಮಡಿವಾಳರು ಅವರ ಬಟ್ಟೆಗಳನ್ನು ತೊಳೆಯಲು ಒಪ್ಪುತ್ತಿರಲಿಲ್ಲ. ಕ್ಷೌರಿಕರು ಕ್ಷೌರ ಮಾಡಲು ಒಪ್ಪುತ್ತಿರಲಿಲ್ಲ. ಎತ್ತಿನ ಗಾಡಿಯಲ್ಲಿ ಪ್ರಯಾಣಿಸುವುದು ಕೂಡ ಕಷ್ಟ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಕೊಳೆಯನ್ನು ತೊಳೆದುಕೊಳ್ಳಲು ನೀರು ಮುಟ್ಟಲೂ ಅನುಮತಿ ಇರಲಿಲ್ಲ. ಈ ಅಸ್ಪಶ್ಯತೆ ಕೇವಲ ಹಿಂದೂ ಸಮಾಜದಲ್ಲಷ್ಟೇ ಇರಲಿಲ್ಲ. ಅವಮಾನ ಜಾತಿಯಿಂದ ಜಾತಿಗೆ ಸರಪಣಿಯಂತೆ ಜೋಡಿಸಲ್ಪಟ್ಟಿತು. ಅಸ್ಪಶ್ಯರನ್ನು ದೂರ ತಳ್ಳುವ ಸಂದರ್ಭದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿದ್ದರು. ಭಾರತೀಯ ಮುಸ್ಲಿಮರು ಮತಾಂತರಗೊಂಡವರು. ಆದರೆ ಜಾತಿಯ ಮೇಲು ಕೀಳಿನಿಂದ ಹೊರಬರುವುದಕ್ಕೆ ಅವರಿಗೆ ಸಾಧ್ಯವಾಗಿರಲಿಲ್ಲ.
 ‘ಬುದ್ಧ ಮತ್ತು ಬೌದ್ಧ ಧರ್ಮದ ಭವಿಷ್ಯ’ ಲೇಖನದಲ್ಲಿ ಬುದ್ಧ ಮೋಕ್ಷದಾತನಲ್ಲ, ಮಾರ್ಗದಾತ ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ವಿವಿಧ ಧರ್ಮ ಬೋಧಕರಿಗೂ ಬುದ್ಧನಿಗೂ ಇರುವ ವ್ಯತ್ಯಾಸಗಳನ್ನು ಅವರು ಈ ಲೇಖನದಲ್ಲಿ ಗುರುತಿಸುತ್ತಾರೆ. ಹಿಂದೂಧರ್ಮಕ್ಕಿಂತ ಬೌದ್ಧ ಧರ್ಮ ಯಾವ ರೀತಿಯಲ್ಲಿ ಭಿನ್ನ ಎನ್ನುವುದನ್ನು ಅವರು ನಿರೂಪಿಸುತ್ತಾರೆ. ವರ್ಣವ್ಯವಸ್ಥೆಯನ್ನು ಬೌದ್ಧ ಧರ್ಮ ಹೇಗೆ ವಿರೋಧಿಸುತ್ತದೆ ಎನ್ನುವುದನ್ನು ಹೇಳುತ್ತಾರೆ. ಹಿಂದೂಗಳು ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಬೇಕಾದರೆ ಅವರು ಬೌದ್ಧ ಧರ್ಮದತ್ತ ಹೊರಳುವುದು ಅತ್ಯಗತ್ಯ ಎಂದು ಅಭಿಪ್ರಾಯಪಡುತ್ತಾರೆ. ‘ಪ್ರಜಾಪ್ರಭುತ್ವ ನಿರ್ಜೀವವಾದರೆ ಅದು ನಮ್ಮ ಅಂತ್ಯವೇ’ ಎನ್ನುವ ಲೇಖನ ವರ್ತಮಾನಕ್ಕೆ ಹೆಚ್ಚು ಪ್ರಸ್ತುತವಾಗುತ್ತದೆ. ಪ್ರಜಾಪ್ರಭುತ್ವ ಉಳಿಯುವುದು ಶೋಷಿತ ವರ್ಗಕ್ಕೆ ಎಷ್ಟು ಅಗತ್ಯ ಎನ್ನುವುದನ್ನು ಅವರು ವಿವರಿಸುತ್ತಾರೆ. ಹಾಗೆಯೇ ಅಖಿಲ ಭಾರತ ಪರಿಶಿಷ್ಟ ಜಾತಿ ಫೆಡರೇಶನ್‌ನಲ್ಲಿ ಅವರು ‘ಕೋಮುವಾರು ಪ್ರಶ್ನೆ ಮತ್ತು ಭಾರತೀಯ ಸಂವಿಧಾನ ರಚನೆ’ ಬಗ್ಗೆ ಮಾತನಾಡುತ್ತಾರೆ. ಇಲ್ಲಿರುವ ಎಲ್ಲ ಬರಹಗಳು ದಲಿತರ ನೋವಿನ ಒಳಧ್ವನಿಯಾಗಿ ಅಂಬೇಡ್ಕರ್ ಅವರಿಂದ ಹೊರಬಂದಿದೆ. ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗ ಳು 112. ಮುಖಬೆಲೆ 90 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News