ಮಹಾದಾಯಿ ವಿವಾದ : ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಯತ್ನ

Update: 2017-12-27 13:13 GMT

ಬೆಂಗಳೂರು, ಡಿ.27: ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಇತ್ಯರ್ಥಕ್ಕೆ ಆಗ್ರಹಿಸಿ ರೈತರು ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಆಡಳಿತರೂಢ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿಯು, ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಬಿಜೆಪಿ ಕಾರ್ಯಕರ್ತರ ವರ್ತನೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಎನ್‌ಎಸ್‌ಯುವೈ, ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು, ಕೆಪಿಸಿಸಿ ಕಿಸಾನ್ ಘಟಕದ ಕಾರ್ಯಕರ್ತರು ಬಿಜೆಪಿ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡ ಪರಿಣಾಮ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಜಸ್ಮಾದೇವಿ ಭವನ ರಸ್ತೆ ಕಡೆಯಿಂದ ಆಗಮಿಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಬಿಜೆಪಿ ನಾಯಕರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಕ್ವೀನ್ಸ್‌ರಸ್ತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಇಳಿದರು. ಇದರಿಂದಾಗಿ ಸಂಚಾರದಟ್ಟಣೆ ಉಂಟಾಗಿ ಸಾರ್ವಜನಿಕರು ಪರದಾಡುವಂತಾಯಿತು.

ಗೋವಾ ಜತೆಗಿನ ಸಂಧಾನ ಮಾತುಕತೆ ಕೈ ಬಿಡಲ್ಲ:ಉತ್ತರ ಕರ್ನಾಟಕ ಭಾಗಕ್ಕೆ ಅಗತ್ಯವಿರುವ ಮಹಾದಾಯಿ ನದಿ ನೀರನ್ನು ತಂದೇ ತರುತ್ತೇವೆ. ಈ ವಿಚಾರದಲ್ಲಿ ಗೋವಾ ಸರಕಾರದ ಜತೆ ನಡೆಸುತ್ತಿರುವ ಸಂಧಾನ ಮಾತುಕತೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್‌ಗೆ ಪತ್ರ ಬರೆದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ರಾಜ್ಯದ ಮುಖ್ಯಮಂತ್ರಿಯೂ ಗೋವಾ ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬಹುದು. ಆದರೆ, ಆ ಕೆಲಸಕ್ಕೆ ಸಿದ್ದರಾಮಯ್ಯ ಕೈ ಹಾಕುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷಾತೀತವಾಗಿ ನಾವು ಕುಡಿಯುವ ನೀರಿನ ವಿಚಾರದಲ್ಲಿ ಹೋರಾಟ ಮಾಡಬೇಕಿತ್ತು. ಆದರೆ, ಗೋವಾ ಕಾಂಗ್ರೆಸ್ ನಾಯಕರ ಮನವೊಲಿಸಲು ನಿಮಗೆ ಏಕೆ ಸಾಧ್ಯವಾಗಿಲ್ಲ? ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ರೈತರು ಪ್ರತಿಭಟನೆ ನಡೆಸುವಾಗ ಏಕೆ ಬರಬೇಕಿತ್ತು ಎಂದು ಅವರು ಕೇಳಿದರು.

ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ. ಇಲ್ಲಿ ಕಾಂಗ್ರೆಸ್ ಕಾನೂನು ಮಾತ್ರ ಇದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ನಮ್ಮ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸಲಾಗುತ್ತಿದೆ. ಕರ್ನಾಟಕವು ಗೂಂಡಾಗಿರಿಯ ರಾಜ್ಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಎರಡು ಪಕ್ಷಗಳು, ಗೋವಾ ಹಾಗೂ ಮಹಾರಾಷ್ಟ್ರದಲ್ಲಿರುವ ನಮ್ಮ ಪಕ್ಷಗಳ ಮುಖಂಡರ ಮನವೊಲಿಸಬೇಕೆಂಬ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಕಾಂಗ್ರೆಸ್‌ನವರು ಇದುವರೆಗೆ ಅಂತಹ ಪ್ರಯತ್ನವನ್ನು ಮಾಡಿಲ್ಲ. ಆದರೆ, ನೀರು ತರಬೇಕೆಂಬ ನಮ್ಮ ಪ್ರಯತ್ನಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಪೊಲೀಸರಿಗೆ ಗೆಟ್‌ಔಟ್ ಅಂದ ಅಶೋಕ್: ಪ್ರತಿಭಟನಾನಿರತರಾಗಿದ್ದ ಅಶೋಕ್‌ರನ್ನು ವಶಕ್ಕೆ ಪಡೆಯಲು ಮುಂದಾದ ಪೊಲೀಸರಿಗೆ ಗೆಟ್‌ಔಟ್ ಎಂದ ಅವರು, ಎಲ್ಲರಿಗೂ ಒಂದೇ ರೀತಿಯಲ್ಲಿ ಕಾನೂನು ಅನುಸರಿಸಿ, ಅಲ್ಲೊಂದು, ಇಲ್ಲೊಂದು ಕಾನೂನು ಬೇಡ. ಲಾಠಿಚಾರ್ಜ್ ಮಾಡಿ, ಗುಂಡು ಹಾರಿಸಿ ನಾವು ಮಾತ್ರ ಇಲ್ಲಿಂದ ಕದಲುವುದಿಲ್ಲ ಎಂದು ಕಿಡಿಗಾರಿದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಮಾಜಿ ಸಚಿವರಾದ ಕಟ್ಟಾಸುಬ್ರಹ್ಮಣ್ಯನಾಯ್ಡು, ವಿ.ಸೋಮಣ್ಣ, ಶಾಸಕ ರಾದ ಎಸ್.ಆರ್.ವಿಶ್ವನಾಥ್, ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ಅಝೀಮ್, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಪಾಲಿಕೆ ಸದಸ್ಯ ಎಸ್.ಮುನಿಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಶೋಕ್ ತಲೆಗೆ ಗಾಯ
ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡದೆ ಇದ್ದಾಗ ಬಿಜೆಪಿ ಕಿಸಾನ್ ಮೋರ್ಚಾದ ಸದಸ್ಯರು ಬ್ಯಾರಿಕೇಡ್‌ಗಳನ್ನು ತಳ್ಳಿ ನುಗ್ಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಕಿಸಾನ್ ಮೋರ್ಚಾ ಸದಸ್ಯರನ್ನು ವಶಕ್ಕೆ ಪಡೆದು ಬಿಎಂಟಿಸಿ ಬಸ್‌ನೊಳಗೆ ತಳ್ಳುವಾಗ ಅಶೋಕ್ ತಲೆಗೆ ಗಾಯವಾಗಿದೆ. ಕೂಡಲೆ ಅವರನ್ನು ಮಲ್ಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.

ಇದೇನು ಗೂಂಡಾ ರಾಜ್ಯವೇ?
ಯಡಿಯೂರಪ್ಪಗೆ ಶಹಬ್ಬಾಸ್ ಗಿರಿ ನೀಡಬೇಕಾದ ಮುಖ್ಯಮಂತ್ರಿ, ರೈತರನ್ನು ಛೂ ಬಿಟ್ಟು ಪ್ರತಿಭಟನೆ ಮಾಡಿಸುತ್ತಿದ್ದಾರೆ. ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಬರುತ್ತಿದ್ದ ಕಾರ್ಯಕರ್ತರನ್ನು ತಡೆಯುತ್ತಿರುವ ಸಿದ್ದರಾಮಯ್ಯ, ಪೊಲೀಸರನ್ನು ಬಿಟ್ಟು ಬೆದರಿಸುತ್ತಿದ್ದಾರೆ. ಇದೇನು ಗೂಂಡಾ ರಾಜ್ಯವೇ?
-ಶೋಭಾ ಕರಂದ್ಲಾಜೆ, ಸಂಸದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News