ಮಾಂಸಾಹಾರ, ಮಕ್ಕಳು ಮತ್ತು ಪಾಪ ಪ್ರಜ್ಞೆ

Update: 2017-12-28 07:29 GMT

ಮಾಂಸಾಹಾರ ಸೇವನೆ ಸ್ವಾರ್ಥ ಮನೋಭಾವದ ಮನುಷ್ಯರಲ್ಲಿನ ಕಟುಕತನಕ್ಕೆ ಹಿಡಿದ ಕೈಗನ್ನಡಿ ಎಂದು ಬಿಂಬಿಸುವ ಕಸರತ್ತು ಇನ್ನಷ್ಟು ತೀವ್ರ ಸ್ವರೂಪ ಪಡೆಯುತ್ತಿದೆಯೇ? ಹೀಗೊಂದು ಪ್ರಶ್ನೆ ಸುಳಿಯಲು ಕಾರಣವಾದದ್ದು ಇತ್ತೀಚಿನ ಕೆಲ ಬೆಳವಣಿಗೆಗಳು.

ಕಳೆದ ವಾರ ಶಾಲಾ ಮಕ್ಕಳು ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಗೆ ಬಂದ ಬರಹಗಳನ್ನು ಓದಿ, ಬಹುಮಾನಿತ ರನ್ನು ಗುರುತಿಸುವ ಕೆಲಸ ನನ್ನ ಹೆಗಲೇರಿತ್ತು. ಪ್ರಬಂಧದ ವಿಷಯ ವನ್ಯಜೀವಿಗಳ ಸಂರಕ್ಷಣೆ ಕುರಿತು ಮನುಷ್ಯರಲ್ಲಿ ಕಾಳಜಿ ಇದೆಯೇ? ಎಂಬುದಾಗಿತ್ತು. ಪ್ರಬಂಧ ಸ್ಪರ್ಧೆಯ ವಿಷಯವನ್ನು ಕೆಲ ವಿದ್ಯಾರ್ಥಿಗಳು ಪರಿಭಾವಿಸಿದ ರೀತಿ ಮತ್ತದನ್ನು ಅವರು ಅಭಿವ್ಯಕ್ತ ಪಡಿಸಿದ ಬಗೆ ನನ್ನನ್ನು ದಂಗುಬಡಿಸಿತು. ಸಂಕುಚಿತ ಮನಸ್ಥಿತಿಯ ವಿಚಾರಧಾರೆಗಳು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತಿರುವುದು ಢಾಳಾಗಿಯೇ ಗೋಚರಿಸಿತು.

ಪ್ರಬಂಧ ಸ್ಪರ್ಧೆಯ ಪಿಯು ವಿದ್ಯಾರ್ಥಿ ವಿಭಾಗದಲ್ಲಿ ಭಾಗವಹಿಸಿದ್ದ 19 ವಿದ್ಯಾರ್ಥಿಗಳ ಪೈಕಿ ಐವರು, ಗೋವು ಕೂಡ ವನ್ಯಜೀವಿಯೇ ಎಂದು ದೃಢವಾಗಿ ನಂಬಿದಂತಿತ್ತು. ಗೋ ಸಂರಕ್ಷಣೆಯು ವನ್ಯಜೀವಿ ಸಂರಕ್ಷಣೆಯ ಭಾಗವೇ ಎಂದು ವಾದಿಸಿ ಬರೆದಿದ್ದ ಅವರು, ಮಾನವನಿಗೆ ಹಾಲು-ತುಪ್ಪ-ಸೆಗಣಿ ಎಲ್ಲವನ್ನೂ ನೀಡುವ ಗೋವನ್ನೇ ಕೊಂದು ತಿನ್ನುವಷ್ಟು ಮನುಷ್ಯ ಸ್ವಾರ್ಥಿಯಾಗಿದ್ದಾನೆ ಅಂತೆಲ್ಲ ಅಭಿಪ್ರಾಯಪಟ್ಟಿದ್ದರು. ಅವುಗಳನ್ನು ಓದುವಾಗ, ಈ ಮಕ್ಕಳಿಗೆ ಸಾಕು ಪ್ರಾಣಿ ಮತ್ತು ವನ್ಯಜೀವಿಗಳಿಗೂ ಇರುವ ಅಂತರದ ಬಗ್ಗೆ ಅರಿವಿಲ್ಲವೇ ಎಂಬ ವಿಷಾದದ ಜೊತೆಗೆ, ಹಸು ಮನುಷ್ಯನಿಗೆ ಸ್ವಯಂಪ್ರೇರಿತವಾಗಿ ಹಾಲು ತುಪ್ಪನೀಡುತ್ತದೆ ಎಂದು ಈ ಮಕ್ಕಳು ಅದು ಹೇಗೆ ಭಾವಿಸಿದರು ಎನ್ನುವ ಪ್ರಶ್ನೆಯೂ ಎದುರಾಯಿತು. ಕರುವಿನ ಪಾಲಿನ ಹಾಲನ್ನು ಕಸಿದುಕೊಳ್ಳುವುದರಲ್ಲಿ ತಪ್ಪೇ ಇಲ್ಲ ಎನ್ನುವುದನ್ನು ಬಿಂಬಿಸುತ್ತ, ಮಾಂಸಾಹಾರಿಗಳು ಅದರಲ್ಲೂ ಗೋಮಾಂಸ ಸೇವಿಸುವವರ ಕುರಿತು ಮಕ್ಕಳ ಮನಸ್ಸಿನಲ್ಲಿ ನಂಜು ತುಂಬಿದವರು, ಆ ನಂಜೇ ಮಾನವತೆಯ ಜೀವದ್ರವ್ಯವೆಂಬ ಸಂದೇಶ ರವಾನಿಸುತ್ತಿರುವುದು ವಿಪರ್ಯಾಸವೇ ಸರಿ.

ಇಲ್ಲಿ ಮತ್ತೊಂದು ಗಮನಾರ್ಹ ಸಂಗತಿಯೂ ಇದೆ. ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 60ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಲ್ಲಿ ಒಂದಿಬ್ಬರು ಮಾತ್ರ ಗೋ ಹತ್ಯೆ ಕುರಿತು ಪ್ರಸ್ತಾಪಿಸಿದ್ದರು. ಆದರೆ, ಪಿಯುಸಿ ವಿಭಾಗದಲ್ಲಿ ಶೇ.25ಕ್ಕೂ ಹೆಚ್ಚು ವಿದ್ಯಾರ್ಥಿಗಳು ವನ್ಯಜೀವಿ ಸಂರಕ್ಷಣೆ ಎಂದರೆ ಗೋ ರಕ್ಷಣೆ ಎಂದೇ ಪರಿಭಾವಿಸಿದ್ದರು.

ಗೋ ಹತ್ಯೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದ ನಂತರ ಅದರಿಂದ ಉಂಟಾಗುತ್ತಿರುವ ಅಡ್ಡಪರಿಣಾಮಗಳ ಕುರಿತು ಇತ್ತೀಚೆಗಷ್ಟೇ ಆಂಗ್ಲ ನಿಯತಕಾಲಿಕವೊಂದು ಸಮಗ್ರವಾಗಿ ವರದಿ ಮಾಡಿತ್ತು. ಮಧ್ಯ ಪ್ರದೇಶದಲ್ಲಿ ಗೋ ಹತ್ಯೆ ನಿಷೇಧದ ನಂತರ ರೈತರು ತಮ್ಮಲ್ಲಿರುವ ಉಪಯೋಗಕ್ಕೆ ಬಾರದ, ತಮಗೆ ಹೊರೆಯಾಗಿರುವ ದನಗಳನ್ನು ಅತ್ತ ಕಸಾಯಿಖಾನೆಗಳಿಗೂ ದೂಡಲಾಗದೆ ಇತ್ತ ಸಾಕಲೂ ಸಾಧ್ಯವಾಗದೆ ತಮ್ಮ ಊರಿಗೆ ಸಮೀಪದಲ್ಲಿರುವ ರಕ್ಷಿತಾರಣ್ಯಗಳಿಗೆ ಅಟ್ಟುತ್ತಿರುವುದು ಮತ್ತು ಅದರಿಂದಾಗಿ ಅಲ್ಲಿನ ವನ್ಯಜೀವಿ ಸಂಕುಲಕ್ಕೆ ಎದುರಾಗುತ್ತಿರುವ ಸಮಸ್ಯೆ ಸವಾಲುಗಳ ಕುರಿತು ಆ ವರದಿ ಗಮನ ಸೆಳೆದಿತ್ತು. ಸಾಕು ಪ್ರಾಣಿಗಳ ಅರಣ್ಯ ಪ್ರವೇಶದಿಂದಾಗುವ ಅಡ್ಡಪರಿಣಾಮಗಳ ಕುರಿತು ನಾನು ಓದಿದ ಪ್ರಬಂಧಗಳ ಪೈಕಿ ಒಂದರಲ್ಲೂ ಪ್ರಸ್ತಾಪವಿರಲಿಲ್ಲ. ಬದಲಿಗೆ ಮನುಷ್ಯ ಸಾಕು ಪ್ರಾಣಿಗಳ ಹತ್ಯೆ ಮಾಡಿ ಆಹಾರವಾಗಿ ಸೇವಿಸುವುದನ್ನು ನಿಲ್ಲಿಸಿದರೆ ವನ್ಯಜೀವಿ ಸಂರಕ್ಷಣೆ ಮಾಡಿದಂತಾಗುತ್ತದೆ ಎಂದು ಬರೆದಿದ್ದರು. ಆದರೆ, ಆಂಗ್ಲ ನಿಯತಕಾಲಿಕದ ವರದಿ ಗೋ ಸಂರಕ್ಷಣೆಯ ಹೆಸರಿನಲ್ಲಿ ಹೇರಲ್ಪಟ್ಟ ಗೋ ಹತ್ಯೆ ನಿಷೇಧವೆಂಬ ಕಾನೂನು ವನ್ಯಜೀವಿ ಸಂರಕ್ಷಣೆಗೆ ಹೇಗೆಲ್ಲ ತೊಡಕಾಗಿದೆ ಎಂಬುದನ್ನು ಮನದಟ್ಟು ಮಾಡಿಕೊಡುತ್ತಿತ್ತು.

ಮಾಂಸಾಹಾರ ಸೇವನೆಯೇ ಅಪರಾಧವೆಂದು ಬಿಂಬಿಸುವ ವ್ಯವಸ್ಥಿತ ಷಡ್ಯಂತ್ರದ ವಿರುದ್ಧ ಆಗಾಗ ದನಿಯೆತ್ತುವ ಸ್ನೇಹಿತರೊಬ್ಬರು, ಹೀಗೇ ಹರಟುವಾಗ ಮಾಂಸಾಹಾರ ಸೇವಿಸುವವರಲ್ಲಿ ಪಾಪ ಪ್ರಜ್ಞೆ ಮೂಡಿಸುತ್ತಿರುವುದರ ದುಷ್ಪರಿಣಾಮಗಳ ಕುರಿತು ತಾವು ಗಮನಿಸಿದ ಕೆಲ ಅಂಶಗಳನ್ನು ಹಂಚಿಕೊಂಡರು. ಅಪೌಷ್ಟಿಕತೆಯಿಂದ ಜನ ಬಳಲಿ ಸಾಯುವುದನ್ನು ತಡೆಗಟ್ಟಲು ಆಹಾರವಾಗಿ ನಾವು ಸೇವಿಸುವ ಮಾಂಸದ ಉತ್ಪಾದನೆ ಹೆಚ್ಚಿಸಬೇಕಿದೆ. ಹಾಗೆ ಮಾಡುವ ಮೂಲಕ ಮಾಂಸೋದ್ಯಮದ ಬೆಳವಣಿಗೆ ವೃದ್ಧಿಯಾಗುವುದರ ಜೊತೆಗೆ ಉದ್ಯೋಗ ಸೃಷ್ಟಿಗೂ ಉತ್ತೇಜನ ದೊರೆತಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಮಾಂಸಾಹಾರ ತುಷ್ಟವೆಂಬ ತಮ್ಮ ವಾದ ಸಮರ್ಥಿಸಿಕೊಳ್ಳಲು ಮಾನವ ದೇಹಕ್ಕೆ ಸಸ್ಯಾಹಾರವಷ್ಟೇ ಪೂರಕ ಎಂಬ ಸುಳ್ಳನ್ನೇ ವ್ಯವಸ್ಥಿತವಾಗಿ ಹರಡುವವರ ಬಳಿ, ತಮ್ಮ ವಿಚಾರಧಾರೆಯನ್ನು ಆಚರಣೆಗೆ ತಂದ ನಂತರ ಎದುರಾಗುವ ಸಮಸ್ಯೆಗಳನ್ನು ನಿವಾರಿಸಬಲ್ಲಂಥ ಪರ್ಯಾಯ ಮಾರ್ಗಗಳಾದರೂ ಇವೆಯೇ?

ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೇವಸ್ಥಾನವೊಂದಕ್ಕೆ ಭೇಟಿ ನೀಡುವ ಮುನ್ನ ಮೀನು ಸೇವಿಸಿದ್ದರೆಂಬ ವಿಚಾರವನ್ನೇ ದೊಡ್ಡದು ಮಾಡಿ, ಸಿಎಂ ಹೀಗೆ ಮಾಡಿದ್ದು ಸರಿಯೇ ಎಂದು ಪ್ರಶ್ನಿಸುವ ಧೋರಣೆಗೆ ಜೋತು ಬಿದ್ದ ಮಾಧ್ಯಮಗಳು, ಆ ಮೂಲಕ ಸಮಾಜಕ್ಕೆ ರವಾನಿಸಿದ ಸಂದೇಶವಾದರೂ ಏನು? ವಾಸ್ತವಗಳಿಗೆ ಬೆನ್ನು ತೋರಿ, ಮಾಂಸಾಹಾರ ಸೇವನೆಯ ವಿಷಯ ಬಂದಾಗ ಮಾತ್ರ ಮನುಷ್ಯ ಹಿತ ಬದಿಗಿರಿಸಿ ಪ್ರಾಣಿಗಳ ಪರವಾಗಿ ವಕಾಲತ್ತು ವಹಿಸುವವರು, ಉಳಿದ ವಿಚಾರಗಳ ಕುರಿತು ನಿಲುವು ತಳೆಯಲು ಮತ್ತದೇ ಮನುಷ್ಯ ಕೇಂದ್ರಿತ ಅಭಿವೃದ್ಧಿ ಮಾದರಿಯ ಮೊರೆ ಹೋಗುವುದು ಮತ್ತು ಅದುವೇ ಸೂಕ್ತವೆಂದು ಸಮರ್ಥಿಸುವುದು ವಿರೋಧಾಭಾಸವೆಂಬಂತೆ ತೋರುವುದಿಲ್ಲವೇ?

Writer - ಎಚ್. ಕೆ. ಶರತ್, ಹಾಸನ

contributor

Editor - ಎಚ್. ಕೆ. ಶರತ್, ಹಾಸನ

contributor

Similar News