ಮಹಾದಾಯಿ ವಿಚಾರದಲ್ಲಿ ಯಡಿಯೂರಪ್ಪ-ಗೋವಾ ಸಿಎಂ ಆಡಿರುವ ನಾಟಕ ಬಯಲಾಗಿದೆ: ಸಿಎಂ ಸಿದ್ದರಾಮಯ್ಯ

Update: 2017-12-28 12:35 GMT

ತುಮಕೂರು, ಡಿ,28: ಮಹಾದಾಯಿ ವಿಚಾರವಾಗಿ ಬಿ.ಎಸ್.ಯಡಿಯೂರಪ್ಪ ಹಾಗೂ ಗೋವಾ ಸಿಎಂ ಮನೋಹರ್ ಪರಿಕ್ಕರ್ ಆಡಿರುವ ನಾಟಕ ಜನತೆಯ ಮುಂದೆ ಬಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶಿರಾದಲ್ಲಿಂದು ನಡೆದ 1,105 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಗೋವಾ ಸಿಎಂ ಮಹಾದಾಯಿ ವಿಚಾರವಾಗಿ ಮಾತುಕತೆ ನಡೆಸಲು ಕರೆದರೆ ಸರ್ವಪಕ್ಷಗಳ ಸಭೆಯಲ್ಲಿ ತೀರ್ಮಾನ ಮಾಡುವುದಾಗಿ ಹೇಳಿದರು.

ಗೋವಾ ಮಾತುಕತೆಗೆ ಬಾರದೆ ಬಿಜೆಪಿಗೆ ಮತ ಗಿಟ್ಟಿಸಿಕೊಳ್ಳಲು ರಾಜಕೀಯ ನಾಟಕವಾಡುತ್ತಿದೆ. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಪಕ್ಷದ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವುದು ಇದೇ ಮೊದಲು. ಬಿಎಸ್‍ವೈ ಪ್ರತಿಭಟನೆ ಮಾಡುವುದನ್ನು ಬಿಟ್ಟು ಕೊಟ್ಟ ಮಾತಿನಂತೆ ಮೊದಲು 7.56 ಟಿಎಂಸಿ ನೀರು ಹರಿಸಲಿ ಎಂದು ಸವಾಲು ಹಾಕಿದರು.

ನಾನು ಹಾಗೂ ಸರಕಾರದ ಮುಖ್ಯಕಾರ್ಯದರ್ಶಿಗಳು ಮಹಾದಾಯಿ ವಿಚಾರವಾಗಿ ಗೋವಾ ಸರಕಾರಕ್ಕೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಆದರೆ ಈಗ ಬಿಜೆಪಿ ನಾಟಕವಾಡುತ್ತಿದೆ. ಬಿಎಸ್‍ವೈ ಮಹಾದಾಯಿ ಸಮಸ್ಯೆ ಬಗೆಹರಿಯಿತು ಎಂದರೆ, ಪರಿಕ್ಕರ್ ಚುನಾವಣೆ ನಂತರ ಮಾತುಕತೆ ಎನ್ನುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ನಡುವೆ ತೆಲುಗು ಗಂಗಾ ವಿವಾದ ಉಂಟಾದಾಗ ಇಂದಿರಾಗಾಂಧಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಮಹಾದಾಯಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಒಪ್ಪುತ್ತಿಲ್ಲ. ಕರ್ನಾಟಕ ವಿವಾದವನ್ನು ಬಗೆಹರಿಸಿಕೊಳ್ಳಲು ಮುಕ್ತವಾಗಿದೆ ಎಂದರು.

ಸದಾಶಿವ ಆಯೋಗದ ವರದಿ ಜಾರಿಗೆ ಪರ ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿವೆ. ಈ ಬಗ್ಗೆ ಡಿಸೆಂಬರ್ 31ರಂದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದ ಅವರು, ನಾನು ಚಾಮುಂಡೇಶ್ವರಿ ಬಿಟ್ಟು ಬೇರೆ ಕ್ಷೇತ್ರದಿಂದ ಸ್ಪರ್ಧಿಸಲ್ಲ ಎಂದು ಸ್ಪಷ್ಟಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News