ಅಭಿವೃದ್ದಿ ವಿಚಾರದಲ್ಲಿ ಟಿ.ಬಿ.ಜಯಚಂದ್ರ ಇತರೆ ಶಾಸಕರಿಗೆ ಮಾದರಿ-ಸಿದ್ದರಾಮಯ್ಯ

Update: 2017-12-28 12:38 GMT

ತುಮಕೂರು/ಶಿರಾ,ಡಿ.28: ಸಿರಾ ಇತಿಹಾಸದಲ್ಲಿ 1105 ಕೋಟಿ ರೂಪಾಯಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಏಕಕಾಲದಲ್ಲಿ ಶಂಕುಸ್ಥಾಪನೆ ಉದ್ಘಾಟನೆ ಇದೇ ಪ್ರಥಮ.ಇಷ್ಟೆಲ್ಲ ಅಭಿವೃದ್ಧಿ ಕಾರ್ಯಕ್ರಮಗಳು ಸಿರಾ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲು ಸಚಿವ ಜಯಚಂದ್ರ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶಿರಾ ತಾಲೂಕಿನ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ನಾಲ್ಕೂವರೆ ವರ್ಷದಲ್ಲಿ 2300 ಕೋಟಿ ಅನುದಾನವನ್ನು ಸಿರಾ ಕ್ಷೇತ್ರಕ್ಕೆ ತಂದಿದ್ದಾರೆ.ಹಿರಿಯ ಸಚಿವರಾಗಿರುವ ಹಿನ್ನೆಲೆಯಲ್ಲಿ ಬಹುತೇಕ ಕಾಮಗಾರಿಗಳನ್ನು ಅವರೇ ಉದ್ಘಾಟಿಸಿದ್ದಾರೆ. ಬರಪೀಡಿತ ಪ್ರದೇಶ ಆ ಕಾರಣಕ್ಕಾಗಿ ಜಯಚಂದ್ರ ನೀರಾವರಿ ಮೂಲಕ ರೈತರ ಜಮೀನಿಗೆ ನೀರು ಕೊಡುವುದಕ್ಕಾಗಿ ಬ್ಯಾರೇಜ್ ನಿರ್ಮಾಣ, ಕೆರೆಗೆ ನೀರು ತುಂಬಿಸಲು ಒತ್ತು ನೀಡಿದ್ದಾರೆ.ಇದರಿಂದ ರೈತರಿಗೆ, ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಹೇಮಾವತಿ, ಎತ್ತಿನಹೊಳೆ ಮತ್ತು ಭದ್ರ ಮೇಲ್ದಂಡೆಯಿಂದ ಶಿರಾ ತಾಲೂಕಿಗೆ ನೀರು ಸಿಗಲು ಜಯಚಂದ್ರ ಅವರ ನಿರಂತರ ಪರಿಶ್ರಮವೇ ಕಾರಣ.ಸಿರಾ ಕ್ಷೇತ್ರಕ್ಕೆ ನಿಜವಾದ ಭಗೀರಥ ಜಯಚಂದ್ರ.ಬ್ಯಾರೇಜ್ ಮಾಡುವುದರಿಂದ ನೀರು ತುಂಬಿಸುವ್ಯದರಿಂದ ಅಂತರಜಲ ವೃದ್ದಿಯಾಗಿ,ಕೊಳವೆಗೆ ನೀರು,ಕುಡಿಯುಲು ಮತ್ತು ವ್ಯವಸಾಯಕ್ಕೆ ನೀರು ಸಿಗುತ್ತದೆ. ರೈತರ  ಬದುಕು ಹಸನಾಗುತ್ತದೆ. ರೈತರಿಗೆ, ಗ್ರಾಮೀಣ ಜನರಿಗೆ ವರದಾನವಾಗಿದೆ.ಯಾವುದೇ ಜವಾಬ್ದಾರಿ ನೀಡಿದರು ಶ್ರದ್ಧೆಯಿಂದ ಮಾಡುತ್ತಾರೆ.ಸಿರಾ ಚಿತ್ರಣ ಬದಲಾಗಿದೆ.ಯಾರು ಅಭಿವೃದ್ಧಿ ಪರವಾಗಿರುತ್ತಾರೆ,ಯಾರು ಕ್ರಿಯಾಶೀಲರಾಗಿರುತ್ತಾರೋ ಅಂತಹವರು ಶಾಸಕರಾದರೆ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಸಿದ್ದರಾಮಯ್ಯ ತಿಳಿಸಿದರು.

ಸಿರಾಗೆ ಭದ್ರ ಮೇಲ್ದಂಡೆ, ಹೇಮಾವತಿ, ಎತ್ತಿನಹೊಳೆ ಯೋಜನೆಯಿಂದ ನೀರು, ಸುಮಾರು 4.5 ಟಿಎಂಸಿ ಎತ್ತಿನಹೊಳೆ, 36 ಹೆಕ್ಟೇರ್ ನೀರಾವರಿ,41 ಕೆರೆಗೆ ನೀರು, ಹಿರಿಯೂರಿನ ಭರಮಪುರ ಕೆರೆವರೆಗೆ ನೀರು ಹರಿದಿದೆ.ತುಮಕೂರು ಜಿಲ್ಲೆಗೆ ಹೇಮಾವತಿ ಯೋಜನೆಯಿಂದ 27 ಟಿಎಂಸಿ ನೀರು ಸಿಗುತ್ತದೆ ಎಂದರು.

ಬಳ್ಳಾರಿಯ ಹೊಸಪೇಟೆಯಿಂದ ಕೂಡಲಸಂಗಮದವರೆಗೆ ನೀರಿಗಾಗಿ ಪಾದಯಾತ್ರೆ ನಡೆಸಲಾಯಿತು. ಅಂದು ನಮಗೆ ಅಧಿಕಾರ ನೀಡಿದರೆ ಪ್ರತಿವರ್ಷ 10 ಕೋಟಿ ರೂಗಳಂತೆ ಹಣ ಖರ್ಚು ಮಾಡುವ ಭರವಸೆ ನೀಡಿದ್ದವು. ಕಳೆದ ನಾಲ್ಕುವರೆ ವರ್ಷದಲ್ಲಿ 45 ಸಾವಿರ ಕೋಟಿ ರೂ ಖರ್ಚು ಮಾಡಲಾಗಿದೆ.ಮುಂದಿನ ಮಾರ್ಚ್ ಒಳಗೆ 50 ಸಾವಿರ ಕೋಟಿಗೂ ಅಧಿಕ ಹಣ ನೀರಾವರಿಯ ಮೇಲೆ ಖರ್ಚಾಗಲಿದೆ. ತುಮಕೂರು ಜಿಲ್ಲೆಗೆ ಐದು ವರ್ಷಗಳಲ್ಲಿ 5000 ಕೋಟಿ ರೂ ಖರ್ಚು ಮಾಡಿದ್ದೇವೆ.ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಜಿಲ್ಲೆಗೆ 1,300 ಕೋಟಿ ಖರ್ಚು ಮಾಡಿದೆ ನಾವು 5000 ಕೋಟಿ ಖರ್ಚು ಮಾಡಿದ್ದೇವೆ.ಬಿಜೆಪಿ ಅಧಿಕಾರದಲ್ಲಿದ್ದಾಗ ನೀರಾವರಿಗೆ ಹಣ ಖರ್ಚು ಮಾಡಲಿಲ್ಲ,ಬಿಜೆಪಿಗಿಂತ ಮೂರಪಟ್ಟು ಹೆಚ್ಚು ಖರ್ಚು ಮಾಡಿದ್ದೇವೆ.ಬಿಎಸ್‍ವೈ ಈಗ ಒಂದು ಲಕ್ಷ ಕೋಟಿ ಖರ್ಚು ಮಾಡುವ ತುತ್ತೂರಿ ಊದುತ್ತಿದ್ದಾರೆ.ಅಧಿಕಾರದಲ್ಲಿ ಖರ್ಚು ಮಾಡದೇ ಈಗ ಬುರುಡೆ ಹೊಡೆಯುತ್ತಿರುವ ಇವರನ್ನು ಮತ್ತೆ ಜನ ನಂಬಬೇಕೆ ಎಂದು ಪ್ರಶ್ನಿಸಿದ ಅವರು,ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಬಿ.ಎಸ್.ವೈಗೆ ಎರಡು ಮುಖ ಮತ್ತು ಎರಡು ನಾಲಿಗೆ,ಬಿಎಸ್‍ವೈಗೆ ನಾವು ಸತ್ಯ ಹೇಳಿ ಅಧಿಕಾರಕ್ಕೆ ಬರುವುದು ಕಷ್ಟ ಎಂಬ ಸತ್ಯ ಗೊತ್ತಾಗಿದೆ.ಆದ್ದರಿಂದ ಜನರ ಮುಂದೆ ಅದು ಇದು ಸುಳ್ಳು ಹೇಳಿ  ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಚುನಾವಣೆ ಸಮೀಪಿಸುತ್ತಲೇ ಬಿಜೆಪಿ ಒಂದೊಂದೆ ಹಿಡನ್ ಅಜೆಂಡಾಗಳು ಹೊರಬರುತ್ತಿವೆ.ಭಾತೃತ್ವ, ಸಹಭಾಳ್ವೆ, ಸ್ವಾತಂತ್ರ,ಜಾತ್ಯತೀತತೆಯನ್ನು ಭೋಧಿಸಿದ ಸಂವಿಧಾನ ಬದಲಾಯಿಸುವ ಮಾತುಗಳನ್ನಾಡುತ್ತಿದ್ದಾರೆ.ಸಂವಿಧಾನ ಬದಲಾಯಿಸಲು ಮುಂದಾದರೆ ದೇಶದಲ್ಲಿಯೇ ದಂಗೆ ಏಳಲಿದೆ ಎಂಬುದು ಅವರಿಗೆ ಗೊತ್ತಿಲ್ಲ.ಬಿಜೆಪಿಯವರಿಗೆ ಸಮಾನತೆ, ಸಹಬಾಳ್ವೆಯಲ್ಲಿ ನಂಬಿಕೆಯಿಲ್ಲ, ಧರ್ಮಗಳ ಸಂಘರ್ಷವನ್ನುಂಟು ಮಾಡಿ, ಸಮಾಜದ ಸಾಮರಸ್ಯ ಹಾಳುಮಾಡುತ್ತಿದ್ದಾರೆ. ಬಿಜೆಪಿ ಅಭಿವೃದ್ಧಿ ಪರ ಚಿಂತನೆಗಳಿಲ್ಲದ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವ ಗುರುತರ ಶೋಷಿತ ಸಮುದಾಯದ  ಮುಂದಿದೆ ಎಂದು ಸಿದ್ದರಾಮಯ್ಯ ನುಡಿದರು.

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ದಲಿತರಿಗೆ ಯಾವುದೇ ಕಾರ್ಯಕ್ರಮ ನೀಡಲಿಲ್ಲ.ಈಗ ದಲಿತರ ಮನೆಗೆ ಹೋಗಿ ಊಟದ ನಾಟಕ ಮಾಡುತ್ತಿದ್ದಾರೆ.ಎಸ್.ಸಿ.ಪಿ, ಟಿ.ಎಸ್.ಪಿ ಅನುದಾನ ಬಿಜೆಪಿ ಸರಕಾರದ ಕೇವಲ 21 ಸಾವಿರ ಕೋಟಿ ಮಾತ್ರ ಖರ್ಚಾಗಿತ್ತು.ನಾವು ಅಧಿಕಾರಕ್ಕೆ ಬಂದು ವಿಶೇಷ ಕಾನೂನು ಜಾರಿಗೆ ತಂದ ನಂತರ 86 ಸಾವಿರ ಕೋಟಿ ಖರ್ಜಾಗಿದೆ.ಗುತ್ತಿಗೆಯಲ್ಲಿ ದಲಿತರಿಗೆ ಮೀಸಲಾತಿ ದೇಶದಲ್ಲಿ ಮೊದಲು. ನೂರಾರು ಹಟ್ಟಿ,ತಾಂಡಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲಾಗಿದೆ.ಇದು ಕಾಂಗ್ರೆಸ್ ಸರಕಾರ ದಲಿತರಿಗೆ ನೀಡಿದ ಕೊಡುಗೆ ಎಂದರು.
ಮಣ್ಣಿನ ಮಗನೆಂದು ಸ್ವಯಂ ಘೋಷಿಸಿಕೊಂಡಿರುವ ದೇವೇಗೌಡರಿಗೆ ಹಾಸನವೇ ಪ್ರಪಂಚ.ಎಲ್ಲಾ ಅಭಿವೃದ್ದಿ ಹಾಸನ ಜಿಲ್ಲೆಗೆ ಮಾತ್ರ ಸಿಮೀತ.ಹೇಮಾವತಿ ನೀರನ್ನು ತುಮಕೂರು ಜಿಲ್ಲೆಗೆ ತೆಗೆದುಕೊಂಡು ಹೋದರೂ ಎಂಬ ಕಾರಣಕ್ಕೆ ಜಯಚಂದ್ರ ಮೇಲೆ ಹೆಚ್.ಡಿ.ಡಿ.ಗೆ ಸಿಟ್ಟು.ಜೆಡಿಎಸ್ ಅಂದ್ರೆ ತಂದೆ ಮಕ್ಕಳ ಪಾರ್ಟಿ,ಅಧಿಕಾರ ಸಿಕ್ಕಾಗ ದಲಿತರಿಗೆ ಅಧಿಕಾರ ನೀಡದೆ, ಈಗ ಉಪಮುಖ್ಯಮಂತ್ರಿ ಪಟ್ಟ ನೀಡುವ ಮಾತನಾಡುತಿದ್ದಾರೆ.ದೇವೇಗೌಡರಿಗೆ ನಿಜವಾಗಿಯೂ ದಲಿತರ ಮೇಲೆ ಪ್ರೀತಿ ಇದ್ದರೆ ಮುಖ್ಯಮಂತ್ರಿ ಮಾಡುವ ಭರವಸೆ ನೀಡಲಿ ಎಂದ ಸಿದ್ದರಾಮಯ್ಯ,ಹೆಚ್.ಡಿ.ಕೆ.ಯಾಗಲಿ, ಬಿ.ಎಸ್.ವೈ ಆಗಲಿ ಮುಖ್ಯಮಂತ್ರಿಯಾಗಲು ಸಾಧ್ಯವೇ ಇಲ್ಲ.ಎಕೆಂದರೆ ಮುಂದಿನ ಭಾರಿಯೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.

ಕೇಂದ್ರದ ಎನ್.ಡಿ.ಎ ಸರಕಾರ ನಡೆಸುತ್ತಿರುವ ಪ್ರಧಾನಿ ಮೋದಿ ಅವರದ್ದು, ಮನಕೀ ಭಾತ್, ನಮ್ಮದು ಕಾಮ್‍ಕೀ ಬಾತ್, ಕಪ್ಪು ಹಣ, ಉದ್ಯೋಗ ಸೃಷ್ಟಿ,ಅಗತ್ಯವಸ್ತುಗಳ ಬೆಲೆ ಇಳಿಕೆ ಯಾವುದೇ ಆಗಿಲ್ಲ.ಬದಲಿಗೆ ಕಾರ್ಪೋರೆಟ್ ಕಂಪನಿಗಳು ನೂರಾರು ಪಟ್ಟು ಅದಾಯಗಳಿಸಿ,ದೇಶವನ್ನು ಲೂಟಿ  ಮಾಡುತ್ತಿವೆ.ಚೆಕ್‍ಮೂಲಕ ಲಂಚ ಪಡೆದು ಜೈಲಿಗೆ ಹೋಗಿ ಬಂದ ಯಡಿಯೂರಪ್ಪ,ಅಮಿತ್‍ಷಾ ಅವರ ಜೊತೆ ವೇದಿಕೆ ಹಂಚಿಕೊಂಡು ನಮ್ಮದು ಭ್ರಷ್ಟ ಸರಕಾರ ಎಂದು ಹೇಳು ಪ್ರಧಾನಿಗೆ ನಾಲಿಗೆಯಾದರೂ ಹೇಗೆ ಬರುತ್ತದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.  

ಕಾರ್ಯಕ್ರಮ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದ ಸಚಿವ ಟಿ.ಬಿ.ಜಯಚಂದ್ರ,ಸಿರಾದಲ್ಲಿ ಅತ್ಯಂತ ಬಡವರಿದ್ದಾರೆ. ಅವರಿಗೆ ನಿವೇಶನ ಕೊಡುವುದಕ್ಕೆ 960 ಎಕರೆ ಭೂಮಿಯನ್ನು ಗುರುತಿಸಿ,600 ಎಕರೆ ಸ್ವಾಧೀನ ಪಡಿಸಿಕೊಂಡು 16 ಸಾವಿರ ನಿವೇಶನಗಳನ್ನು ಕೊಡುವುದಕ್ಕೆ ಎಲ್ಲಾ  ಕ್ರಮಗಳನ್ನು ಕೈಗೊಳ್ಳಲಾಗಿದೆ.ಹೇಮಾವತಿ ತಾಲೂಕಿಗೆ ಹರಿಯುವುದಿಲ್ಲ ಎಂದು ಕೆಲವರು ಹೇಳಿದ್ದರು. ಆದರೆ ಅವರ ಭವಿಷ್ಯವನ್ನು ಸುಳ್ಳು ಮಾಡಿ, ಹೇಮಾವತಿ ಕಳ್ಳಂಬೆಳ್ಳ, ಸಿರಾ, ಮಮದಲೂರು ಕೆರೆಗೆ ಹರಿದಿದೆ. 23 ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ.ಭದ್ರ ಮೇಲ್ದಂಡೆ ಯೋಜನೆ ಕನಸಿಗೆ ಸಿದ್ದರಾಮಯ್ಯ ಬೆಂಬಲ ನೀಡಿದ್ದಾರೆ. ಚಿಕ್ಕನಾಯಕನಹಳ್ಳಿ,ಸಿರಾ,ಪಾವಗಡಕ್ಕೆ ಈ ಯೋಜನೆಯಿಂದ ಅನುಕೂಲವಾಗಲಿದೆ.ಯೋಜನೆ ಜನವರಿ ತಿಂಗಳಲ್ಲಿ ಉದ್ಘಾಟನೆ ಆಗಲಿದೆ. 35 ಸಾವಿರ ಎಕರೆಗೆ ನೀರಾವರಿ ಸೌಲಭ್ಯ, 2020ಕ್ಕೆ ಕಾಮಗಾರಿ ಮುಗಿಯಲಿದೆ ಎಂದರು.

ವೇದಿಕೆಯಲ್ಲಿ ಸಚಿವ ಹೆಚ್.ಅಂಜನೇಯ,ಚಿತ್ರದುರ್ಗ ಸಂಸದ ಚಂದ್ರಪ್ಪ, ಶಾಸಕರಾದ ಕೆ.ಷಡಕ್ಷರಿ,ಡಾ.ರಫೀಕ್ ಅಹಮದ್,ಮುರಳೀಧರ ಹಾಲಪ್ಪ ಸ್ಭೆರಿದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರುಗಳು ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News