ರೋಹಿತ್ ವೇಮುಲಾ ನೆಪದಲ್ಲಿ...

Update: 2017-12-28 18:31 GMT

ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ, ಭಾರತಾದ್ಯಂತ ಹೊಸ ಆಂದೋಲವನ್ನೇ ಹುಟ್ಟು ಹಾಕಿತು. ದಲಿತರ ಹಕ್ಕುಗಳು ಮತ್ತೆ ಚರ್ಚೆಗೊಳಗಾದವು. ದಿಲ್ಲಿಯಲ್ಲಿ ಕನ್ಹಯಾ, ಗುಜರಾತ್‌ನಲ್ಲಿ ಜಿಗ್ನೇಶ್‌ರಂತಹ ಹೊಸ ನಾಯಕರನ್ನು ಹುಟ್ಟು ಹಾಕುವುದಕ್ಕೂ ವೇಮುಲಾನಿಗೆ ಆದ ಅನ್ಯಾಯ ಕಾರಣವಾಯಿತು. ವೇಮುಲಾ ಸಾವಿನ ಕುರಿತಂತೆ ಲೇಖನಗಳು, ಕವಿತೆಗಳು ಸಾಲು ಸಾಲಾಗಿ ಹೊರ ಬಂದವು. ಇದು ಕೇವಲ ಆಂಧ್ರ ಪ್ರದೇಶಕ್ಕಷ್ಟೇ ಸೀಮಿತವಾಗಿರಲಿಲ್ಲ. ‘ಕತ್ತಲ ನಕ್ಷತ್ರ’ ತೆಲುಗಿನಲ್ಲಿ ವೇಮುಲಾ ಕುರಿತಂತೆ ಬಂದಿರುವ ಬರಹಗಳು ಮತ್ತು ಕಾವ್ಯಗಳು. ವಿರಸಂ ಅವರು ಇದನ್ನು ಸಂಪಾದಿಸಿದ್ದು, ಬಿ. ಸುಜ್ಞಾನ ಮೂರ್ತಿ ಕನ್ನಡಕ್ಕಿಳಿಸಿದ್ದಾರೆ. ರೋಹಿತ್ ಕುರಿತಂತೆ ಅಥವಾ ರೋಹಿತ್‌ನನ್ನು ಹಿನ್ನೆಲೆಯಾಗಿಟ್ಟುಕೊಂಡ ಸುಮಾರು 44 ವೈವಿಧ್ಯಮಯ ಬರಹಗಳು ಇಲ್ಲಿವೆ.

 ರೋಹಿತ್ ಕುರಿತಂತೆ ಯೋಚಿಸುವುದು ಎಂದರೆ, ಬೀದಿಗಿಳಿದು ಆಂದೋಲನವನ್ನು ಗಟ್ಟಿಗೊಳಿಸುವುದು ಎಂದು ಬರೆಯುವ ವಾಣಿ, ವಿಶ್ವವಿದ್ಯಾನಿಲಯಗಳಲ್ಲಿ ಬೇರಿಳಿಸುತ್ತಿರುವ ಸಂಘಪರಿವಾರ ಮತ್ತು ಅದರ ವಿರುದ್ಧ ವಿದ್ಯಾರ್ಥಿಗಳ ಹೊಣೆಗಾರಿಕೆಯೇನು ಎನ್ನುವುದನ್ನು ತಿಳಿಸುತ್ತಾರೆ. ವೇಮುಲಾ ಸಾವನ್ನು ಕವಿತೆಯಾಗಿಸುವ ಉದಯ್ ಭಾನು, ‘ಎಳಸು ಭಾವವು/ ಮುಚ್ಚಿದ ಮನಸುಗಳಿಗೂ ತಿವಿಯುತ್ತಾ/ನಾರುವ ನಾಡಿನ ಆತ್ಮಸಾಕ್ಷಿಯನೇ/ ನಡುಗಿಸುತಿದೆ ಮೃತಾತ್ಮವೊಂದು’ ಎಂದು ಬರೆಯುತ್ತಾರೆ. ಸಾಗರ್ ಎಂಬವರು ವೇಮುಲಾ ಸಾವನ್ನು ‘ಆಲೋಚನೆಗಳ ಮೇಲೆ ಭೌತಿಕ ದಾಳಿ’ ಎಂದು ಬಣ್ಣಿಸುತ್ತಾರೆ. ‘ನೂತನ ಪರಿಮಳ’ ಕವಿತೆಯಲ್ಲಿ ಮಲ್ಲೇಶ್ ಅವರು ‘ವೇಮುಲಾ ಸಾವನ್ನು ಖಂಡಿಸಿದ ಮನುವಾದಿ ಮನಸ್ಸಿನ’ ಇನ್ನೊಂದು ಮುಖವನ್ನು ತೆರೆದಿಡುತ್ತದೆ. ಎಂ. ರಾಘವಾಚಾರಿ ಎಂಬವರ ‘ಬೆಳಕು ಹಂಚುತ್ತಿರುವವರು’ ಕವಿತೆ ವೇಮುಲಾ ಸಾವು ಭಾರತವನ್ನು ಬದಲಿಸುತ್ತದೆ ಎಂಬ ಆಶಾದಾಯಕ ಚಿಂತನೆಯನ್ನು ಬಿತ್ತುತ್ತದೆ. ಡಿ. ಉದಯಭಾನು ಅವರ ‘ಹೊಲಗೇರಿಯೇ ಮುಂಜಾವಾಗಿ..’ ಕವಿತೆ ದಲಿತರ ಎದೆಯೊಳಗಿನ ಆಕ್ರೋಶವನ್ನು ತೆರೆದಿಡುತ್ತದೆ. ಉದಯಭಾನು ಅವರ ಇನ್ನೊಂದು ಲೇಖನ ‘ಹತ್ಯೆಗಳ ಚೌರಸ್ತಾ ಸೆಂಟ್ರಲ್ ಯೂನಿವರ್ಸಿಟಿ’ ಲೇಖನ, ವಿಶ್ವವಿದ್ಯಾನಿಲಯಗಳ ರಾಜಕೀಯಕ್ಕೆ ರೋಹಿತ್ ಬಲಿಯಾದ ಬಗೆಯನ್ನು ತೆರೆದಿಡುತ್ತದೆ. ಇಡೀ ಕೃತಿ ಬೇರೆ ಬೇರೆ ನೆಲೆಗಳಲ್ಲಿ ರೋಹಿತ್ ಸಾವನ್ನು ನೋಡುತ್ತಾ, ಮತ್ತೊಂದು ದಲಿತ ಆಂದೋಲನ ಈ ನೆಲೆದಿಂದ ಚಿಮ್ಮಬೇಕಾದ ಅಗತ್ಯವನ್ನು ಎತ್ತಿ ಹಿಡಿಯುತ್ತದೆ. ಆದುದರಿಂದ ಈ ಕೃತಿಯಲ್ಲಿ ವೇಮುಲಾ ಒಂದು ನೆಪಮಾತ್ರ. ನವ ವಿದ್ಯಾರ್ಥಿ ಚಳವಳಿ, ದಲಿತ ಚಳವಳಿಯ ಸಾಧ್ಯತೆಗಳನ್ನು, ಅಗತ್ಯಗಳನ್ನು ವಿವರವಾಗಿ ಚರ್ಚಿಸುತ್ತದೆ.

ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 120 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News