ಮುಂಬೈನ ಕಮಲಾ ಮಿಲ್ಸ್ ಕಂಪೌಂಡ್ ನಲ್ಲಿ ಬೆಂಕಿ ಆಕಸ್ಮಿಕ: 15 ಮಂದಿ ಜೀವಂತ ದಹನ

Update: 2017-12-29 04:05 GMT

ಮುಂಬೈ, ಡಿ. 29: ಇಲ್ಲಿನ ಲೋವರ್ ಪರ್ಲ್ ಪ್ರದೇಶದ ಕಮಲಾ ಮಿಲ್ಸ್ ಕಂಪೌಂಡ್ ಕಟ್ಟಡದ ಮಹಡಿಯಲ್ಲಿ ಸಂಭವಿಸಿದ ಭೀಕರ ಬೆಂಕಿ ಆಕಸ್ಮಿಕದಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ. ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಮೃತಪಟ್ಟ ಬಹುತೇಕ ಮಂದಿ ಮಹಿಳೆಯರಾಗಿದ್ದು, ಅವರು ರೂಫ್‌ಟಾಪ್ ರೆಸ್ಟೋರೆಂಟ್‌ನಲ್ಲಿ ಔತಣಕೂಟದಲ್ಲಿ ಪಾಲ್ಗೊಂಡಿದ್ದರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ರೆಸ್ಟೋರೆಂಟ್‌ನಲ್ಲಿ ಆವರಿಸಿಕೊಂಡ ಬೆಂಕಿ ಅಕ್ಕಪಕ್ಕದ ಮೊಜೊ ಮತ್ತು ಲಂಡನ್ ಟ್ಯಾಕ್ಸಿ ಎಂಬ ಎರಡು ಬಾರ್‌ಗಳಿಗೆ ವ್ಯಾಪಿಸಿದೆ. ಗಾಯಾಳುಗಳಲ್ಲಿ ಶೆಫಾಲಿ ಮತ್ತು ಖುಶ್ಬೂ ಎಂಬವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ಗಾಯಾಳುಗಳು ಕೆಇಎಂ ಹಾಗೂ ಸಿಯಾನ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಂಟು ಅಗ್ನಿಶಾಮಕ ವಾಹನಗಳು, ಐದು ನೀರಿನ ಟ್ಯಾಂಕರ್, ತುರ್ತು ಆಂಬುಲೆನ್ಸ್ ಹಾಗೂ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿವೆ. ಬೆಂಕಿ ಆಕಸ್ಮಿಕಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಲವು ಮಂದಿ ಕಟ್ಟಡದ ಒಳಗೆ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಟೈಮ್ಸ್ ನೌ ಚಾನಲ್‌ನ ಪಕ್ಕದ ಕಟ್ಟಡದಲ್ಲೇ ಈ ದುರಂತ ಸಂಭವಿಸಿದ್ದು, ಚಾನಲ್ ಪ್ರಸಾರ ಕೂಡಾ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.
ಬೆಳಗ್ಗೆ ಬೆಂಕಿಯನ್ನು ನಿಯಂತ್ರಿಸಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ ಎಂದು ಬಿಎಂಸಿ ವಿಕೋಪ ನಿರ್ವಹಣೆ ತಂಡದ ಅಧಿಕಾರಿಗಳು ಹೇಳಿದ್ದಾರೆ. ಮಧ್ಯರಾತ್ರಿ 12.30 ಬಳಿಕ ಬೆಂಕಿ ಆವರಿಸಿಕೊಂಡಿತ್ತು.

ಟೈಮ್ಸ್ ನೌ ಹಿರಿಯ ಸಂಪಾದಕ ಆನಂದ್ ನರಸಿಂಹನ್ ಘಟನೆ ಬಗ್ಗೆ ಟ್ವೀಟ್ ಮಾಡಿ, "ಟೈಮ್ಸ್ ನೌ ಕಟ್ಟಡದ ಪಕ್ಕದ ಮೊಜೊಬಾರ್‌ನಲ್ಲಿ ಬೆಂಕಿ ದುರಂತ ಸಂಭವಿಸಿದೆ. ಸದ್ಯಕ್ಕೆ ಎಲ್ಲರೂ ಸುರಕ್ಷಿತವಾಗಿದ್ದೇವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಪ್ರಸಾರ ಸ್ಥಗಿತವಾಗಿದೆ" ಎಂದು ವಿವರಿಸಿದ್ದಾರೆ.

1-ಎಬವ್ ರೆಸ್ಟೋರೆಂಟ್ ಮಾಲೀಕರ ವಿರುದ್ಧ ಪೊಲೀಸರು ಸೆಕ್ಷನ್ 304ರ ಅನ್ವಯ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News