ಕಸಾಪವನ್ನು ಜನರ ಬಳಿಗೆ ಕೊಂಡೊಯ್ದವರು ಅಜ್ಜಂಪುರ ಜಿ. ಸೂರಿ: ಸಿಂಗಟಗೆರೆ ಸಿದ್ದಪ್ಪ

Update: 2017-12-30 10:28 GMT

ಚಿಕ್ಕಮಗಳೂರು, ಡಿ.30: ಕನ್ನಡ ಸಾಹಿತ್ಯ ಪರಿಷತ್ತನ್ನು ಜಿಲ್ಲೆಯಲ್ಲಿ ಜನರ ಬಳಿಗೆ ಕೊಂಡೊಯ್ದವರು ಸಾಹಿತಿ ಅಜ್ಜಂಪುರ ಜಿ. ಸೂರಿ ಅವರು ಎಂದು ಸಾಹಿತಿ ಸಿಂಗಟಗೆರೆ ಸಿದ್ದಪ್ಪ ಹೇಳಿದರು.

ಜಿಲ್ಲಾ ಕಸಾಪ ನಗರದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಟಿ.ಲಲಿತಮ್ಮ ಮತ್ತು ಆರ್.ವಿ.ಪಾಂಡುರಂಗ ಹಾಗೂ ಅಜ್ಜಂಪುರ ಜಿ. ಸೂರಿ, ರತ್ನಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಸೂರಿಯವರ ಸಂಘಟನೆ ಮತ್ತು ಕಸಾಪ ವಿಷಯ ಕುರಿತು ಮಾತನಾಡಿದರು.

ಜಿಲ್ಲಾದ್ಯಂತ ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕಗಳನ್ನು ಮೊಟ್ಟಮೊದಲಿಗೆ ಸ್ಥಾಪಿಸಿದವರು ಅಜ್ಜಂಪುರ ಜಿ.ಸೂರಿ ಎಂದ ಅವರು, ನಂತರ ಇಡೀ ರಾಜ್ಯದಲ್ಲಿ ಹೋಬಳಿ ಘಟಕಗಳನ್ನು ತೆರೆಯಲಾಯಿತು. ಸೂರಿ ಕಸಾಪ ಅಧ್ಯಕ್ಷರಾದಾಗ ಸದಸ್ಯರ ಸಂಖ್ಯೆ ಕೇವಲ 300ರಷ್ಟಿತ್ತು., ಅದನ್ನು 4,500ಕ್ಕೆ ಹೆಚ್ಚಿಸಿದರು. ರಾಜ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಅತೀ ಹೆಚ್ಚು ದತ್ತಿಗಳನ್ನು ಸಂಗ್ರಹ ಮಾಡಿದವರು ಜಿ.ಸೂರಿ ಎಂದು ತಿಳಿಸಿದರು.

ಅನುವಾದ ಸಾಹಿತ್ಯಕ್ಕೆ ಜಿ. ಸೂರಿಯವರ ಕೊಡುಗೆ ವಿಷಯ ಕುರಿತು ಉಪನ್ಯಾಸ ನೀಡಿದ ಸಾಹಿತಿ ಎಸ್.ಎನ್.ಚಂದ್ರಕಲಾ ಅಜ್ಜಂಪುರ ಜಿ. ಸೂರಿ ರಾಜ್ಯದ ಅನುವಾದಕರ ಸಾಲಿನಲ್ಲಿ ಅಗ್ರಸ್ಥಾನದಲ್ಲಿದ್ದರು. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಪ್ರಾವೀಣ್ಯತೆ ಸಾಧಿಸಿದ್ದ ಸೂರಿ ತೆಲುಗಿನ ಖ್ಯಾತ ಸಾಹಿತಿಗಳ 80ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದು, ಅವುಗಳಲ್ಲಿ ಅನೇಕ ಕೃತಿಗಳು ಮರುಮುದ್ರಣಗೊಂಡಿವೆ, ಅತ್ಯಂತ ಜನಪ್ರಿಯವಾಗಿವೆ ಎಂದು ಹೇಳಿದರು.

ಕಸಾಪ ಹಿರಿಯ ಸದಸ್ಯ ಡಿ.ಆರ್.ಪುಟ್ಟಸ್ವಾಮಿ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಅಧ್ಯಕ್ಷತೆ ವಹಿಸಿದ್ದರು.

 ಮುಖ್ಯ ಶಿಕ್ಷಕ ಬಿ.ಆರ್.ಕುಮಾರ್, ಸಾಹಿತಿ ರಮೇಶ್ ಬೊಂಗಾಳೆ, ತಾಲೂಕು ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಜಿಲ್ಲಾ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ, ಖಜಾಂಚಿ ಪ್ರೊ.ಕೆ.ಎನ್.ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News