ವಿದ್ಯಾರ್ಥಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಲಿ : ಮೊಹಮ್ಮದ್ ಮುಸವ್ವಿರ್

Update: 2017-12-31 13:40 GMT

ಶಾಲಾ ಕಾಲೇಜುಗಳಲ್ಲಿ ಗೋ ಸಂರಕ್ಷಣೆಯ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಕರಪತ್ರ ವಿತರಣೆ ಮತ್ತು ಸಹಿ ಸಂಗ್ರಹ ನಡೆಯುತ್ತಿದ್ದು ಕೋಮು ವೈಷಮ್ಯ ಹುಟ್ಟಿಸುವ ಅಭಿಯಾನಕ್ಕೆ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿದೆ. ಈ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೌನ ಸಮ್ಮತಿಯನ್ನು ಸೂಚಿಸುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ರಾಜ್ಯ ಉಪಾಧ್ಯಕ್ಷರಾದ ಮೊಹಮ್ಮದ್ ಮುಸವ್ವಿರ್ ಆರೋಪಿಸಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳ ಶಾಲೆಗಳಲ್ಲಿ ‘ಗೋ ಸಂರಕ್ಷಣೆಯ ಕುರಿತು ಹಕ್ಕೊತ್ತಾಯ’ ಎಂಬ ತಲೆಬರಹದಡಿ ಲಿಖಿತ ಪ್ರತಿಗಳನ್ನು ನೀಡಿ ವಿದ್ಯಾರ್ಥಿಗಳು ,ಪೋಷಕರ ಸಹಿ ಮತ್ತು ವಿಳಾಸವನ್ನು ಬರೆಯಿಸಿ ಕಡ್ಡಾಯವಾಗಿ ತರಬೇಕು ಎಂದು ಸೂಚಿಸಲಾಗಿದೆ .ಈ ಪತ್ರದಲ್ಲಿ ಪ್ರಧಾನಮಂತ್ರಿಗಳು ಮತ್ತು ಮುಖ್ಯ ಮಂತ್ರಿಗಳು ಕರ್ನಾಟಕ ಇವರಿಗೆ ಎಂದು ನಮೂದಿಸಲಾಗಿದೆ .ಅಲ್ಲದೆ ಎಳೆಯ ವಿದ್ಯಾರ್ಥಿಗಳ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರ ವಿತರಣೆ ಮತ್ತು ಸಹಿ ಸಂಗ್ರಹವನ್ನೂ ನಡೆಸಲಾಗುತ್ತಿದೆ. ಎಳೆಯ ಮಕ್ಕಳ ಮನಸ್ಸಿನಲ್ಲಿ ಪರಸ್ಪರ ಧರ್ಮಗಳ ನಡುವೆ ವೈರತ್ವ ಉಂಟುಮಾಡುವ ಈ ಅಭಿಯಾನಕ್ಕೆ ಕೆಲವು ಖಾಸಗಿ ಮತ್ತು ಸರ್ಕಾರಿ ಅಧ್ಯಾಪಕ ವೃಂದದಿಂದಲೇ ಈ ಪ್ರಕ್ರಿಯೆಯು ನಡೆಯುತ್ತಿರುವುದು ಬಹಳ ಅಪಾಯಕಾರಿಯಾದಂತಹ ಬೆಳವಣಿಗೆಯಾಗಿದೆ.


ರಾಷ್ಟ್ರಾದ್ಯಂತ ಗೋವಿನ ಹೆಸರಿನಲ್ಲಿ ಹಲವಾರು ಕಡೆ ಕೋಮುಗಲಭೆಗಳು ಗುಂಪು ಹಿಂಸಾ ಹತ್ಯೆಗಳು, ಅತ್ಯಾಚಾರ ಮತ್ತು ಹಲ್ಲೆಗಳು ನಡೆಯುತ್ತಿದೆ. ಪ್ರಸ್ತುತ ರಾಜಕೀಯ ಪಕ್ಷಗಳು ಈ ವಿಚಾರವನ್ನು ಚುನಾವಣಾ ತಂತ್ರಗಳನ್ನಾಗಿ ಬಳಸಿಕೊಳ್ಳುತ್ತಿದೆ. ಅದಾಗಿಯೂ ಮಕ್ಕಳ ಮೂಲಕ ಈ ಅಭಿಯಾನವನ್ನು ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಧರ್ಮ-ಧರ್ಮಗಳ ಬಗ್ಗೆ ಭಿನ್ನಾಭಿಪ್ರಾಯಗಳು ಉಂಟಾಗಿ ಸೌಹಾರ್ದತೆಯಿಂದ ಶಿಕ್ಷಣ ಪಡೆಯಬೇಕಾದ ವಿದ್ಯಾರ್ಥಿಗಳು ಪರಸ್ಪರ ದ್ವೇಷಭಾವನೆಯಿಂದಿರಬೇಕಾದ ಸನ್ನಿವೇಶಗಳು ಎದುರಾಗಬಹುದು. 


ಈಗಾಗಲೇ ಹಲವಾರು ಸಂಘ ಸಂಸ್ಥೆಗಳು ಈ ವಿಚಾರವಾಗಿ ಸರ್ಕಾರದ ಗಮನ ಸೆಳೆದಿದ್ದರೂ, ಸರ್ಕಾರದಿಂದ ಯಾವುದೇ ರೀತಿಯ ಸುತ್ತೋಲೆಗಳು ಇದುವರೆಗೂ ಬಂದಿಲ್ಲ. ಈ ಹಿಂದೆ ಉಡುಪಿಯ ಧರ್ಮ ಸಂಸದ್ ಕಾರ್ಯಕ್ರಮದ ವಸ್ತು ಪ್ರದರ್ಶನಕ್ಕೆ ಅಧಿಕಾರಿಗಳೇ ಮಕ್ಕಳನ್ನು ಕಳುಹಿಸಲು ಸುತ್ತೋಲೆ ಹೊರಡಿಸಿರುವುದು ಬಹಳಷ್ಟು ವಿವಾದಕ್ಕೀಡಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಸರ್ಕಾರ ಕ್ರಮಗಳು ಕೈಗೊಳ್ಳದಿರುವುದು ಖೇದಕರ. ಆದುದರಿಂದ ಸರ್ಕಾರಗಳು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ಅಭಿಯಾನಕ್ಕೆ ಕುಮ್ಮಕ್ಕು ನೀಡುವವರು ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದ ಶಿಕ್ಷಕರು ,ಶಿಕ್ಷಣ ಸಂಸ್ಥೆಗಳು ಮತ್ತು‌ಅಧಿಕಾರಿಗಳ ಮೇಲೆ ಮೇಲೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಂದು ಮೊಹಮ್ಮದ್ ಮುಸವ್ವಿರ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News