ಸಿಎಂ ಜಾತಿ ಜಾತಿಗಳ ನಡುವೆ ವಿರಸ ಉಂಟು ಮಾಡುತ್ತಿದ್ದಾರೆ: ಮಾಜಿ ಸಚಿವ ಆರ್.ಅಶೋಕ್‍

Update: 2017-12-31 15:26 GMT

ಮೈಸೂರು,ಡಿ.31: ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಬದಲು ಮುಖ್ಯಮಂತ್ರಿ ಸಿದ್ಧರಾಮಯ್ಯ, ಲಿಂಗಾಯತ-ವೀರಶೈವ ಒಡೆದು, ಜಾತಿ ಜಾತಿಗಳ ಮಧ್ಯೆ ವಿರಸ ಉಂಟು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಆರ್.ಆಶೋಕ್ ಕಿಡಿಕಾರಿದರು.

ನಗರದ ಬೋಗಾದಿ ರಿಂಗ್ ರಸ್ತೆಯ ಖಾಸಗಿ ಭವನದಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಪ್ರಬಲ ವೀರಶೈವ ಲಿಂಗಾಯತ ಸಮುದಾಯವನ್ನು ಪ್ರತ್ಯೇಕದ ಹೆಸರಿನಲ್ಲಿ ವಿಂಗಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಒಕ್ಕಲಿಗ ಸೇರಿದಂತೆ ಹಲವು ಸಮುದಾಯಗಳನ್ನು ವಿಂಗಡಣೆ ಮಾಡಲಿದ್ದಾರೆ. ಸಮುದಾಯಗಳ ನಡುವೆ ಬೆಂಕಿ ಇಡುವ ಸಿದ್ದರಾಮಯ್ಯಗೆ ಯಾವುದೇ ಕಾರಣಕ್ಕೂ ಅಧಿಕಾರ ನೀಡಬಾರದು ಎಂದು ವಾಗ್ದಾಳಿ ನಡೆಸಿದರು. 

ಅನ್ನಭಾಗ್ಯ ಅಕ್ಕಿ ಬೆಲೆ 31 ರೂ. ಆಗಿದ್ದು, ಇದಕ್ಕೆ ಕೇಂದ್ರವೇ 28 ರೂ.ಗಳನ್ನು ನೀಡುತ್ತಿದೆ. ಹೀಗಿರುವಾಗ 3 ರೂ. ಕೊಡುವ ನೀವು ಅದರ ಪ್ಯಾಕೇಟ್‍ನಲ್ಲಿ ಅನ್ನಭಾಗ್ಯದ ನೆಪದಲ್ಲಿ ಭಾವಚಿತ್ರ ಹಾಕಿಕೊಳ್ಳುತ್ತೀರಿ. ರಮ್ಯಾ ಮೂಲಕ ಎಲ್‍ಇಡಿ ಬಲ್ಬ್ ನೀಡಿ ಹೊಸ ಬೆಳಕು ಎಂದ ನಿಮ್ಮ ಸರ್ಕಾರ ಜನರಿಗೆ ಸತ್ಯ ಮಾರೆಮಾಚಿಸಿದ್ದೀರಿ. ಆದರೆ, ಕೇಂದ್ರ ಸರ್ಕಾರದ ಪ್ರೋತ್ಸಾಹ ಬಲ್ಬ್ ಮೇಲೆಯೇ ಬರೆದಿದೆ ಎಂದು ಅವರು ತಿಳಿಸಿದರು. 

ಬೇರೆ ಪಕ್ಷದಿಂದ ಬಂದ ಸಿದ್ದರಾಮಯ್ಯ ಕಾಂಗ್ರೆಸ್‍ನಲ್ಲಿ ತಮ್ಮ ಸಾಮ್ರಾಜ್ಯ ನಿರ್ಮಿಸಲು ತಮ್ಮ ಪಕ್ಷದವರನ್ನೇ ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ, ಬಿಜೆಪಿ ಮುಖಂಡರಾದ ಫಣೀಶ್, ರಾಮಕೃಷ್ಣಪ್ಪ, ಬಿ.ಎಂ.ರಾಮು, ಎಲ್.ನಾಗೇಂದ್ರ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
  
ಧರ್ನುಮಾಸ ಬಳಿಕ ಹಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಅವರ ಬಲಾಬಲ ನೋಡಿ ಅವರಿಗೆ ಟಿಕೆಟ್ ನೀಡುವ ವಿಚಾರವನ್ನು ವರಿಷ್ಠರು ನಿರ್ಧರಿಸುವರು ಎಂದರು. ಜ. 28 ರಂದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿ ಹಲವು ರಾಷ್ಟ್ರೀಯ ನಾಯಕರು ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News