ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದ ಸಾಧನೆ ಮಾಡಿದ ಸಾಗರದ ಯುವತಿ

Update: 2018-01-01 13:33 GMT

ಶಿವಮೊಗ್ಗ, ಜ. 1: ಜಿಲ್ಲೆಯ ಸಾಗರದ ಯುವತಿ ಮಾನಸ ಎಂಬ ಯುವತಿಯು ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾನಸ ಮಾತನಾಡಿದರು. ಮೌಂಟ್ ಎವರೆಸ್ಟ್ ಪರ್ವತಾರೋಹಣದ ಅನುಭವ ಹಂಚಿಕೊಂಡರು. ಡಿ. 17 ರಂದು ಬೆಂಗಳೂರಿನಿಂದ ದೆಹಲಿ ತಲುಪಿ, ನೇಪಾಳ್ ಅಡ್ವೆಂಚರ್ ನೇಚರ್ ಕ್ಯಾಂಪ್ ಸಂಸ್ಥೆಯ ಸಹಾಯದಿಂದ ಡಿ. 18 ರಂದು ಕಠ್ಮಂಡುವಿಗೆ ತೆರಳಿ ತನ್ನ ಚಾರಣ ಆರಂಭಿಸಿದ್ದಾಗಿ ವಿವರಿಸಿದರು.

ಪ್ರತಿದಿನ ಸುಮಾರು 12 ಕಿಮೀ ಚಾರಣ ನಡೆಸಲಾಯಿತು. ತನ್ನ ಜೊತೆ ದೆಹಲಿಯ ದೀಪಾಂಶು (32), ಆಸ್ಟ್ರೇಲಿಯಾದ ಆ್ಯನ್ ಮತ್ತು ಅಮೆರಿಕಾದ ದ್ವಾರಾ ಡಿಸೋಜಾ ತೆರಳಿದ್ದರು. ಡಿ.24 ರಂದು ನೇಪಾಳದ ದಿಂಗ್ ಬೂಚೆ ತಲುಪಿ, ಕ್ರಿಸ್‍ಮಸ್ ದಿನದಂದು ಬೇಸ್ ಕ್ಯಾಂಪ್‍ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾಗಿ ಹೆಮ್ಮೆಯಿಂದ ಹೇಳಿಕೊಂಡರು.

ವಿಪರೀತ ಚಳಿ ಇರುವ ಈ ಸಂದರ್ಭದಲ್ಲಿ ಈವರೆಗೆ ಭಾರತದ ಯಾರೂ ಅಲ್ಲಿಗೆ ತೆರಳಿರಲಿಲ್ಲ. ತೀರಾ ಚಳಿ ಅಲ್ಲಿದ್ದು, ಸ್ವಲ್ಪ ಹೆಚ್ಚು ಕಡಿಮೆಯಾದರೂ ಆಮ್ಲಜನಕದ ಕೊರತೆಯಿಂದ ಮರಳಿ ಬರುವ ಸಾಧ್ಯತೆ ಇರಲಿಲ್ಲ. ಆದರೆ ಧೈರ್ಯದಿಂದ ಮುನ್ನುಗ್ಗಿ ಈ ಸಾಹಸ ಮಾಡಿದ್ದಾಗಿ ಅವರು ತಿಳಿಸಿದರು. 

ಸಾಗರದ ಮ.ಸ. ನಂಜುಂಡಸ್ವಾಮಿ ಅವರ ಪುತ್ರಿಯಾಗಿರುವ ಇವರು, 2014 ರಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ತನ್ನ ತಾಯಿ ಜ್ಯೋತಿಯೊಂದಿಗೆ ಪೂರೈಸಿದ್ದಾರೆ. ಮಾನಸ ಯಾತ್ರೆ ಎಂಬ ಪುಸ್ತಕವನ್ನು ಹೊರತಂದಿರುವ ಇವರು 2015 ರಲ್ಲಿ ಅಮರನಾಥ್ ಮತ್ತು ವೈಷ್ಣವದೇವಿ ಯಾತ್ರೆಯನ್ನು ಸಹಾ ಪೂರೈಸಿ ಅದರ ಅನುಭವವನ್ನು ಪುಸ್ತಕರೂಪದಲ್ಲಿ ಹೊರತಂದಿದ್ದಾರೆ. ಗೋಷ್ಠಿಯಲ್ಲಿ ಶಿವಮೊಗ್ಗದ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿಯ ಉಪಾಧ್ಯಕ್ಷ ಎನ್. ಗೋಪಿನಾಥ್, ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರರಾವ್, ನಿರ್ದೇಶಕರಾದ ನಿರ್ಮಲಾ ಕಾಶಿ, ಪ್ರವೀಣ್‍ಕುಮಾರ್ ಸೇರಿದಂತೆ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News