​"ಮುಸ್ಲಿಮರು ಉದ್ದೇಶಪೂರ್ವಕವಾಗಿ ಹೆಚ್ಚು ಮಕ್ಕಳನ್ನು ಹುಟ್ಟಿಸುತ್ತಿದ್ದಾರೆ"

Update: 2018-01-02 05:57 GMT

ಜೈಪುರ, ಜ.2: ''ಹಿಂದೂಗಳನ್ನು ತಮ್ಮದೇ ದೇಶದಲ್ಲಿ ಮೂಲೆಗುಂಪು ಮಾಡುವ ಸಲುವಾಗಿ ಉದ್ದೇಶಪೂರ್ವಕವಾಗಿ ಮುಸ್ಲಿಮರು ಹೆಚ್ಚು ಮಕ್ಕಳನ್ನು ಹುಟ್ಟಿಸುತ್ತಿದ್ದಾರೆ'' ಎಂಬ ಫೇಸ್‌ಬುಕ್ ಪೋಸ್ಟ್ ಪ್ರಕಟಿಸುವ ಮೂಲಕ ಆಡಳಿತರೂಢ ಬಿಜೆಪಿಯ ಅಲ್ವಾರ ಶಾಸಕ ಬನ್ವಾರಿ ಲಾಲ್ ಸಿಂಘಾಲ್ ವಿವಾದದಲ್ಲಿ ಸಿಲುಕಿಸಿಕೊಂಡಿದ್ದಾರೆ.

ಟಿವಿ ಚಾನಲ್ ಒಂದರಲ್ಲಿ ಮುಸ್ಲಿಂ ಜನಸಂಖ್ಯೆ ಕುರಿತು ನಡೆಸಿದ ಚರ್ಚೆಗೆ ಪ್ರತಿಕ್ರಿಯೆ ರೂಪದಲ್ಲಿ ಪೋಸ್ಟ್ ಮಾಡಿದ್ದಾರೆ. "ಮುಸ್ಲಿಂ ಜನಸಂಖ್ಯೆ ತಡೆಯದೇ ಇರುವುದರಿಂದ ದೇಶದಲ್ಲಿ ಮುಂದೊಂದು ದಿನ ಮುಸ್ಲಿಂ ಪ್ರಧಾನಿ, ಮುಸ್ಲಿಂ ರಾಷ್ಟ್ರಪತಿ ಹಾಗೂ ಬಹುತೇಕ ರಾಜ್ಯಗಳಲ್ಲಿ ಮುಸ್ಲಿಂ ಮುಖ್ಯಮಂತ್ರಿಗಳು ಬರಲಿದ್ದಾರೆ" ಎಂದು ಪ್ರತಿಪಾದಿಸಿದ್ದಾರೆ.

"ಮುಸ್ಲಿಮರು ರಾಜಕೀಯವನ್ನು ಆಳುವಂತಾದರೆ ಹಿಂದೂಗಳನ್ನು ಎರಡನೇ ದರ್ಜೆಯ ನಾಗರಿಕರಾಗಿ ಕಾಣಲಿದ್ದಾರೆ. ಜನಸಂಖ್ಯೆ ಹೆಚ್ಚಿಸುವ ಮೂಲಕ ದೇಶವನ್ನು ಆಳುವುದು ಅವರ ಏಕೈಕ ಉದ್ದೇಶ. ಹಿಂದೂಗಳು ನೀಡಿದ ತೆರಿಗೆ ಹಣವನ್ನು ಅವರು ತಿಂದು ಹಾಕುತ್ತಿದ್ದಾರೆ. ದೇಶದಲ್ಲಿ ಯಾರು ಕೂಡಾ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಬಾರದು ಎಂಬ ಕಾನೂನು ಜಾರಿಗೆ ತರಬೇಕು" ಎಂದು ಆಗ್ರಹಿಸಿದ್ದಾರೆ.

''ದೇಶದಲ್ಲಿ 2030ರ ವೇಳೆಗೆ ಮುಸ್ಲಿಂ ಬಾಹುಳ್ಯವನ್ನು ಸೃಷ್ಟಿಸುವ ಸಲುವಾಗಿ ಮುಸ್ಲಿಮರು 10-12 ಮಕ್ಕಳನ್ನು ಕೆಲವರು 14 ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಹೆಚ್ಚು ಮಕ್ಕಳನ್ನು ಹುಟ್ಟಿಸುವ ಸಲುವಾಗಿ ಪತ್ನಿಯರನ್ನು ಖರೀದಿಸುತ್ತಿದ್ದಾರೆ'' ಎಂಬ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.

''ಮುಸ್ಲಿಮರು ಪ್ರಾಬಲ್ಯ ಸ್ಥಾಪಿಸಿದ ಬಳಿಕ ಹಿಂದೂಗಳಿಗೆ ವಾಸಿಸಲು ಸ್ಥಳ ಇಲ್ಲ. ಹಿಂದೂಗಳು ಕೂಡಾ ಹೆಚ್ಚು ಮಕ್ಕಳನ್ನು ಹುಟ್ಟಿಸುವ ಮೂಲಕ ಇದಕ್ಕೆ ಪ್ರತ್ಯುತ್ತರ ನೀಡಬೇಕು. ಹಿಂದೂಗಳು ಹೆಚ್ಚಿನ ಹಣವನ್ನು ಜೀವನಶೈಲಿ ವಸ್ತುಗಳ ಖರೀದಿಗೆ ಬಳಸಿದರೆ, ಮುಸ್ಲಿಮರು ಶಸ್ತ್ರಾಸ್ತ್ರ ಖರೀದಿಗೆ ಬಳಸುತ್ತಿದ್ದಾರೆ'' ಎಂದೂ ದ್ವೇಷ ಹುಟ್ಟಿಸುವ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News