ಜನರ ನಂಬಿಕೆ ಕಳೆದುಕೊಳ್ಳುತ್ತಿರುವ ಬ್ಯಾಂಕಿಂಗ್ ವ್ಯವಸ್ಥೆ

Update: 2018-01-04 04:06 GMT

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರ ಸೂತ್ರ ಹಿಡಿದು ಮೂರೂವರೆ ವರ್ಷ ಗತಿಸಿದೆ. ಈ ಕಾಲಾವಧಿಯಲ್ಲಿ ದೇಶದ ಆರ್ಥಿಕ ಸ್ಥಿತಿಯನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿರುವುದೇ ಈ ಸರಕಾರದ ಸಾಧನೆಯಾಗಿದೆ. ದೇಶದ ಆರ್ಥಿಕ ರಂಗದ ಜೀವಸೆಲೆಯಾದ ಬ್ಯಾಂಕಿಂಗ್ ವ್ಯವಸ್ಥೆ ಈಗ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ 70ರ ದಶಕದಲ್ಲಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿ ಬಡವರ ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ವಿಸ್ತರಿಸಿದರು. ಮೊದಲು ನಗರಗಳಿಗೆ ಸೀಮಿತವಾಗಿದ್ದ ಬ್ಯಾಂಕ್ ಶಾಖೆಗಳು ಗ್ರಾಮೀಣ ಪ್ರದೇಶಗಳಲ್ಲೂ ತಲೆ ಎತ್ತಿದವು. ಮುಂಚೆ ಭಾರೀ ಬಂಡವಾಳಗಾರರಿಗೆ ಮತ್ತು ವ್ಯಾಪಾರಸ್ಥರಿಗೆ ಮೀಸಲಾಗಿದ್ದ ಬ್ಯಾಂಕ್ ಸಾಲ ಸೌಲಭ್ಯ ರಾಷ್ಟ್ರೀಕರಣದ ಆನಂತರ ಹಳ್ಳಿಗಾಡಿನ ಬಡರೈತರಿಗೆ, ಕಾರ್ಮಿಕರಿಗೆ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಸುಲಭವಾಗಿ ಲಭಿಸುವಂತಾಯಿತು. ಹೀಗಾಗಿ ಬ್ಯಾಂಕಿಂಗ್ ಕ್ಷೇತ್ರ ಈ ದೇಶದಲ್ಲಿ ಬಲಿಷ್ಠವಾಗಿ ಬೆಳೆಯಿತು. ಬಲಿಷ್ಠವಾಗಿ ಬೆಳೆದ ಈ ಬ್ಯಾಂಕಿಂಗ್ ಕ್ಷೇತ್ರ ಕಳೆದ ಮೂರೂವರೆ ವರ್ಷಗಳಲ್ಲಿ ಅವನತಿಯ ಅಂಚಿಗೆ ಬಂದು ನಿಂತಿದೆ.

ಹಿಂದಿನ ಯುಪಿಎ ಸರಕಾರ ಭಾರೀ ಬಂಡವಾಳಗಾರರ ಸಾಲ ಮನ್ನಾ ಮಾಡಿ ತೀವ್ರ ಟೀಕೆಗೆ ಒಳಗಾಗಿತ್ತು. ಮೋದಿ ಬಂದ ಆನಂತರ ಪರಿಸ್ಥಿತಿಯೇನೂ ಸುಧಾರಿಸಲಿಲ್ಲ. ಇನ್ನಷ್ಟು ಬಂಡವಾಳಗಾರರ ಸಾವಿರಾರು ಕೋಟಿ ರೂ. ಸಾಲದ ಬಾಕಿಯನ್ನು ಈ ಸರಕಾರ ಮನ್ನಾ ಮಾಡಿತು. ಮೋದಿ ಸರಕಾರ ದಿನಕ್ಕೊಂದು ಕಾನೂನುಗಳನ್ನು ಮಾಡಿ ಈ ದೇಶದ ಬಡವರು ಬದುಕಲಾಗದಂತಹ ವಾತಾವರಣವನ್ನು ನಿರ್ಮಾಣಮಾಡಿದೆ. ನೋಟು ಅಮಾನ್ಯೀಕರಣದಿಂದ ಈ ದೇಶದ ಬ್ಯಾಂಕ್ ಗ್ರಾಹಕರು ಅನುಭವಿಸಿದ ಯಾತನೆ ಎಲ್ಲರಿಗೂ ಗೊತ್ತಿದೆ. ಇದೀಗ ಠೇವಣಿದಾರರ ಜೇಬಿಗೆ ಕೈಹಾಕುವ ದುಸ್ಸಾಹಸಕ್ಕೆ ಸರಕಾರ ಮುಂದಾಗಿದೆ. ಯಾವುದೇ ಬ್ಯಾಂಕ್ ದಿವಾಳಿಯಾದರೆ ಅಥವಾ ನಷ್ಟವನ್ನು ಅನುಭವಿಸಿದರೆ ಅಂತಹ ಬ್ಯಾಂಕ್‌ಗಳನ್ನು ಕಾಪಾಡಲು ಆ ಬ್ಯಾಂಕ್‌ನ ಠೇವಣಿದಾರರ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೇಂದ್ರ ಸರಕಾರಕ್ಕೆ ಅಧಿಕಾರ ನೀಡುವ ಮಸೂದೆಯೊಂದನ್ನು ಸರಕಾರ ಸಂಸತ್‌ನ ಮುಂದೆ ತಂದಿದೆ. ಇದರಿಂದ ಸಾರ್ವಜನಿಕರಲ್ಲಿ ತೀವ್ರ ಆತಂಕ ಉಂಟಾಗಿದೆ.

ಕೇಂದ್ರ ಸರಕಾರ ಸಂಸತ್‌ನಲ್ಲಿ ಮಂಡಿಸಲಿರುವ ಹಣಕಾಸು ಪರಿಹಾರ ಮತ್ತು ಠೇವಣಿ ವಿಮೆ ವಿಧೇಯಕ (ಎಫ್‌ಆರ್‌ಡಿಐ) ಬ್ಯಾಂಕ್‌ಗಳ ಮಧ್ಯಮವರ್ಗಗಳ ಉಳಿತಾಯದಾರರನ್ನು ಹಾಗೂ ಬ್ಯಾಂಕ್‌ಗಳ ಠೇವಣಿಯನ್ನು ನಂಬಿಕೊಂಡು ಜೀವನವನ್ನು ನಡೆಸುವ ವರ್ಗವನ್ನು ದಿಗ್ಭ್ರಮೆಗೊಳಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆಗಳ ಓದುಗರ ವೇದಿಕೆಗಳಲ್ಲಿ ಈಗಾಗಲೇ ಆಕ್ರೋಶ ವ್ಯಕ್ತವಾಗಿವೆ. ಅನೇಕರು ಬ್ಯಾಂಕ್‌ಗಳಲ್ಲಿರುವ ಠೇವಣಿಯನ್ನು ವಾಪಸ್ ಪಡೆದು ಬೇರೆ ಕಡೆ ಹೂಡಿಕೆ ಮಾಡಬಹುದೇ ಎಂದು ಯೋಚಿಸುತ್ತಿದ್ದಾರೆ. ಆದರೆ, ಸರಕಾರ ಬುಧವಾರ ಸಂಸತ್‌ನಲ್ಲಿ ಇನ್ನೊಂದು ಭರವಸೆಯನ್ನು ನೀಡಿದೆ. ಈ ಮಸೂದೆ ಸಾರ್ವಜನಿಕರಂಗದ ಬ್ಯಾಂಕ್‌ಗಳಿಗೆ ಅನ್ವಯವಾಗುವುದಿಲ್ಲ ಹಾಗೂ ಕೊನೆಯ ಅಸ್ತ್ರವಾಗಿ ಇದನ್ನು ಬಳಸಲಾಗುವುದು ಎಂದು ಹೇಳಲಾಗಿದೆ. ಆದರೆ, ನಮ್ಮ ಬಹುತೇಕ ಗ್ರಾಮೀಣಪ್ರದೇಶದ ಜನ ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿ ಹೊಂದಿರುತ್ತಾರೆ. ಅಂತಹ ಬ್ಯಾಂಕ್‌ಗಳು ದಿವಾಳಿಯಾದರೆ ಅವರ ಠೇವಣಿಯ ಗತಿ ಏನು ಎಂಬ ಬಗ್ಗೆ ಈ ವಿಧೇಯಕದಲ್ಲಿ ಉತ್ತರವಿಲ್ಲ.

ಕೇಂದ್ರ ಸರಕಾರ ಮಂಡಿಸಲಿರುವ ಈ ವಿಧೇಯಕ ಬ್ಯಾಂಕಿಂಗ್ ಕ್ಷೇತ್ರದ ಭವಿಷ್ಯಕ್ಕೆ ಮಾರಕವಾಗಿದೆ. ಅದೇರೀತಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಜನರು ಇರಿಸಿರುವ ನಂಬಿಕೆಗೆ ಧಕ್ಕೆ ತಂದಿದೆ. ಜಿಎಸ್‌ಟಿ ಮತ್ತು ನೋಟು ಅಮಾನ್ಯೀಕರಣದಂತಹ ಕ್ರಮಗಳಿಂದಾಗಿ ಈಗಾಗಲೇ ಜನಸಾಮಾನ್ಯರು ಮತ್ತು ವಾಣಿಜ್ಯವಲಯ ಸಾಕಷ್ಟು ತೊಂದರೆ ಅನುಭವಿಸುತ್ತಿದೆ. ಸರಕಾರ ಈ ವಿಧೇಯಕದ ಮೂಲಕ ಗಾಯದ ಮೇಲೆ ಬರೆ ಎಳೆಯಲು ಹೊರಟಿದೆ. ನಮ್ಮ ದೇಶದ ಬ್ಯಾಂಕ್‌ಗಳು ದಿವಾಳಿಯ ಅಂಚಿಗೆ ಬಂದು ನಿಲ್ಲಲು ಕಾರಣ ಠೇವಣಿದಾರರಲ್ಲ. ಇದಕ್ಕೆ ಮುಖ್ಯವಾದ ಕಾರಣ ಬ್ಯಾಂಕ್‌ಗಳಿಂದ ಪಡೆದ ಕೋಟ್ಯಂತರ ರೂ. ಸಾಲವನ್ನು ವಾಪಸ್ ಮಾಡದ ಭಾರೀ ಬಂಡವಾಳದಾರರಾಗಿದ್ದಾರೆ.

ಸದ್ಯ ನಮ್ಮ ದೇಶದಲ್ಲಿ ಬ್ಯಾಂಕ್‌ಗಳು 7 ಲಕ್ಷ ಕೋಟಿ ರೂ. ಸುಸ್ತಿ ಸಾಲದ ಹೊರೆಯಿಂದ ತತ್ತರಿಸಿ ಹೋಗಿವೆ. ಬ್ಯಾಂಕ್‌ಗಳಿಂದ ಸಾಲ ಪಡೆದು ಮರು ಪಾವತಿ ಮಾಡದ ವಿಜಯ ಮಲ್ಯ ಮತ್ತು ಮಿತ್ತಲ್ ಅವರಂತಹ ಶ್ರೀಮಂತರು ಬ್ಯಾಂಕ್‌ಗಳ ದಿವಾಳಿಗೆ ಕಾರಣರಾಗಿದ್ದಾರೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳು 2017-18ರ ಹಣಕಾಸು ವರ್ಷದ ಮೊದಲ 6 ತಿಂಗಳಲ್ಲಿ ಒಟ್ಟು 55,356 ಕೋಟಿ ರೂ.ಯಷ್ಟು ಸಾಲವನ್ನು ಮನ್ನಾ ಮಾಡಿದೆ. ಅಂದರೆ ಬ್ಯಾಂಕ್‌ಗಳು ತಮ್ಮ ಲೆಕ್ಕದಿಂದ ತೆಗೆದುಹಾಕಿವೆ. ಕಳೆದ ವರ್ಷ ಇದೇ ಹಣಕಾಸು ವರ್ಷದ ಅವಧಿಯಲ್ಲಿ 35,986 ಕೋಟಿ ರೂ. ಬಂಡವಾಳಗಾರರ ಸಾಲವನ್ನು ಮನ್ನಾ ಮಾಡಲಾಗಿತ್ತು. ಹೀಗಾಗಿ ಬ್ಯಾಂಕ್‌ಗಳು ವಸೂಲಿಯಾಗದ ಸಾಲದ ಭಾರದಿಂದ ತತ್ತರಿಸಿ ಹೋಗಿವೆ. ಭಾರೀ ಬಂಡವಾಳಗಾರರ ಸಾಲವನ್ನು ಮನ್ನಾ ಮಾಡುವ ಸರಕಾರ ಮಧ್ಯಮವರ್ಗದ ಜನರ ಠೇವಣಿಗೆ ಮುಟ್ಟುಗೋಲು ಹಾಕಿಕೊಂಡು ದಿವಾಳಿಯಾಗುತ್ತಿರುವ ಬ್ಯಾಂಕ್‌ಗಳನ್ನು ಉಳಿಸಲು ಹೊರಟಿದೆ.

ಮಾಹಿತಿ ಹಕ್ಕು ಕಾನೂನಿನ ಅನ್ವಯ ಇಂಗ್ಲಿಷ್ ಪತ್ರಿಕೆಯೊಂದು ರಿಸರ್ವ್ ಬ್ಯಾಂಕ್ ನಿಂದ ಪಡೆದ ಅಧಿಕೃತ ಅಂಕಿಅಂಶದ ಪ್ರಕಾರ ಹೇಳುವುದಾದರೆ ಕಳೆದ 10 ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮನ್ನಾ ಮಾಡಿರುವ ಬಂಡವಾಳಗಾರರ ಒಟ್ಟು ಸಾಲದ ಮೊತ್ತ 3.6 ಲಕ್ಷ ಕೋಟಿ ರೂ.ಅಗಿದೆ. ಆದರೆ, ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಪ್ರಕಾರ ಇದನ್ನು ಸಾಲಮನ್ನಾ ಎಂದು ಕರೆಯಬಾರದಂತೆ! ಇದು ಬ್ಯಾಂಕ್‌ಗಳು ತಮ್ಮ ಲೆಕ್ಕಪತ್ರವನ್ನು ಸರಿಪಡಿಸುವ ತಾಂತ್ರಿಕ ವಿಧಾನವಂತೆ. ಬ್ಯಾಂಕ್‌ಗಳು ಲೆಕ್ಕಪತ್ರ ಸರಿಪಡಿಸುವುದು ಅಂದರೆ ಏನು ಅರ್ಥ? ವಿಜಯ ಮಲ್ಯರ ಸಾಲವನ್ನು ಮನ್ನಾ ಮಾಡಿ ಅದು ಸರಿಪಡಿಸಲು ತೆಗೆದುಕೊಂಡ ಕ್ರಮ ಎಂದು ಹೇಳಿದರೆ ಯಾರೂ ನಂಬುವುದಿಲ್ಲ. ಈ ಲೆಕ್ಕಪತ್ರ ಸರಿಪಡಿಸುವಿಕೆಗೂ ಸಾಲ ಮನ್ನಾಕ್ಕೂ ಹೆಚ್ಚಿನ ಅಂತರವಿಲ್ಲ. ಇದು ಜನಸಾಮಾನ್ಯರನ್ನು ದಾರಿತಪ್ಪಿಸಲು ಹೇಳಿರುವ ಮಾತು. ಜನಸಾಮಾನ್ಯರು ಕಷ್ಟಪಟ್ಟು ದುಡಿದು ಗಳಿಸಿದ ಹಣದ ಮೇಲೆ ಸರಕಾರ ಈ ರೀತಿ ಕಣ್ಣು ಹಾಕಬಾರದು. ಬೇಕಾದರೆ ಠೇವಣಿ ಹಣದ ಮೇಲೆ ತೆರಿಗೆ ವಿಧಿಸಲಿ. ಅದರ ಬದಲಾಗಿ ಬ್ಯಾಂಕ್‌ಗಳು ದಿವಾಳಿಯಾದರೆ ಗ್ರಾಹಕರ ಹಣವನ್ನು ಮುಟ್ಟುಗೋಲು ಹಾಕುವುದಾಗಿ ಹೇಳುವುದು ಸರಿಯಲ್ಲ. ಬ್ಯಾಂಕಿಂಗ್ ವ್ಯವಸ್ಥೆ ನಿಂತಿರುವುದೇ ನಂಬಿಕೆಯ ಮೇಲೆ. ಆದರೆ, ಈ ಉದ್ದೇಶಿತ ಹೊಸ ಮಸೂದೆ ಜನರ ನಂಬಿಕೆಗೆ ಭಂಗ ಉಂಟುಮಾಡುತ್ತಿದೆ.

ಸದ್ಯ ಇರುವ ಠೇವಣಿ ವಿಮೆ ಹಾಗೂ ಖಾತರಿ ನಿಗಮದಿಂದ ಜನರು ಬ್ಯಾಂಕ್‌ಗಳಲ್ಲಿ ಇರಿಸಿರುವ ಲಕ್ಷ ರೂ. ಠೇವಣಿಗೆ ಬ್ಯಾಂಕ್ ದಿವಾಳಿಯಾದರೆ ಲಕ್ಷ ರೂ. ಮಾತ್ರ ಸಿಗುತ್ತದೆ. ಆದರೆ, ಉದ್ದೇಶಿತ ವಿಮೆಯಲ್ಲಿ ಈ ಖಾತರಿ ಇರುವುದಿಲ್ಲ. ಇದನ್ನು 10 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂಬ ಬೇಡಿಕೆ ಇರುವಾಗ ಅದಕ್ಕೆ ವ್ಯತಿರಿಕ್ತವಾದ ಹೆಜ್ಜೆ ಇರಿಸಲು ಸರಕಾರ ಹೊರಟಿರುವುದು ಸರಿಯಲ್ಲ. ಕುಸಿಯುತ್ತಿರುವ ಬ್ಯಾಂಕ್‌ಗೆ ಮರು ಬಂಡವಾಳ ಪೂರೈಕೆಗೆ ಠೇವಣಿದಾರರ ಠೇವಣಿ ಹಾಗೂ ಇತರ ವಸ್ತುಗಳನ್ನು ಅವರ ಒಪ್ಪಿಗೆ ಪಡೆಯದೇ ಬಳಸುವುದು ಈ ಮಸೂದೆಯ ಒಂದು ಅಂಶವಾಗಿದೆ. ಇದರಿಂದ ಕೋಟ್ಯಂತರ ಠೇವಣಿದಾರರ ಜೀವಮಾನದ ಉಳಿತಾಯಗಳಿಗೆ ಧಕ್ಕೆ ಬರಲಿದೆ. ಆದ್ದರಿಂದ ಈ ಮಸೂದೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡುವುದು ಅಗತ್ಯವಾಗಿದೆ. ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿರುವ ಗ್ರಾಹಕರ ಹಿತಾಸಕ್ತಿಗೆ ಯಾವುದೇ ಕಾರಣಕ್ಕೂ ಧಕ್ಕೆ ಉಂಟಾಗಬಾರದು. ಈ ನಿಟ್ಟಿನಲ್ಲಿ ಸರಕಾರ ಭರವಸೆ ನೀಡಬೇಕು. ಈವರೆಗೆ ಬ್ಯಾಂಕ್‌ಗಳು ದಿವಾಳಿಯಾಗಲು ರಿಸರ್ವ್ ಬ್ಯಾಂಕ್ ಬಿಡುತ್ತಿರಲಿಲ್ಲ. ಆದರೆ, ಉದ್ದೇಶಿತ ಎಫ್‌ಆರ್‌ಡಿಐ ಕಾಯ್ದೆಯಲ್ಲಿ ಬ್ಯಾಂಕ್‌ಗಳನ್ನು ರಕ್ಷಿಸುವ ಹೊಣೆಯನ್ನು ಕೇಂದ್ರ ಸರಕಾರ ರಿಸರ್ವ್ ಬ್ಯಾಂಕ್‌ನಿಂದ ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ. ಬ್ಯಾಂಕ್‌ಗಳನ್ನು ಕಾಪಾಡಲು ಇರುವ ಇನ್ನೊಂದು ವಿಧಾನ ಬೇಲ್‌ಔಟ್. ಇದು ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದವರ ಹಣವನ್ನು ಭಾಗಶಃ ಮುಟ್ಟುಗೋಲು ಹಾಕಿಕೊಂಡು ಬ್ಯಾಂಕ್‌ನ್ನು ಉಳಿಸುವ ವಿಧಾನವಾಗಿದೆ.

ಉದ್ದೇಶಿತ ಕಾಯ್ದೆಯಲ್ಲಿ ಈ ವಿಧಾನವನ್ನು ಅನುಸರಿಸಲು ಸರಕಾರ ಹೊರಟಿದೆ. ಆದರೆ, ಯಾರದೋ ತಪ್ಪಿಗೆ ಬ್ಯಾಂಕ್‌ಗಳು ದಿವಾಳಿಯಾಗುತ್ತಿದ್ದರೆ ಠೇವಣಿದಾರರನ್ನು ಶಿಕ್ಷೆಗೆ ಗುರಿಪಡಿಸುವುದು ಸರಿಯಲ್ಲ. ಯಾವ ಬ್ಯಾಂಕ್‌ಗಳೂ ದಿವಾಳಿಯಾಗುವುದಿಲ್ಲ, ಹೆದರಬೇಡಿ ಎಂದು ಸ್ವತಃ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಸ್ಪಷ್ಟನೆ ನೀಡಿದ್ದಾರೆ. ಆದರೆ, ಈ ಮಸೂದೆಯಲ್ಲಿ ರುವ ಈ ಅಪಾಯಕಾರಿ ಅಂಶಗಳನ್ನು ಕೈಬಿಡುವ ಬಗ್ಗೆ ಅವರು ಭರವಸೆಯನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿದ ಜನಸಾಮಾನ್ಯರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಈ ಆತಂಕವನ್ನು ಸರಕಾರ ನಿವಾರಿಸದಿದ್ದರೆ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಜನರು ನಂಬಿಕೆ ಕಳೆದುಕೊಳ್ಳುತ್ತಾರೆ.

ಈ ದೇಶದ ಬ್ಯಾಂಕಿಂಗ್ ವ್ಯವಸ್ಥೆ ನಮ್ಮ ದೇಶದ ಆರ್ಥಿಕ ವಲಯದ ಮತ್ತು ಕೃಷಿ ರಂಗದ ಜೀವನಾಡಿಯಾಗಿದೆ. ಅದು ಕುಸಿದು ಬಿದ್ದರೆ ಆರ್ಥಿಕತೆಗೆ ಚೇತರಿಸಲಾಗ ಪೆಟ್ಟು ಬೀಳುತ್ತದೆ. ಅದಕ್ಕೆ ಸರಕಾರ ಅವಕಾಶ ಕೊಡಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News