ಬಣಕಲ್: ಕಳಸ ತಾಲೂಕಿಗೆ ಬಾಳೂರು ಹೋಬಳಿಯನ್ನು ಸೇರ್ಪಡಿಸದಂತೆ ಆಗ್ರಹ

Update: 2018-01-04 12:03 GMT

ಬಣಕಲ್, ಜ.4: ಕಳಸ ಹೋಬಳಿಯು ಸದ್ಯದಲ್ಲೇ ತಾಲೂಕು ಕೇಂದ್ರವಾಗಿ ಘೋಷಣೆಯಾಗಲಿದ್ದು, ಕಳಸ ತಾಲೂಕು ಆದರೆ ಬಾಳೂರು ಹೋಬಳಿಯನ್ನು ಕಳಸ ತಾಲೂಕಿಗೆ ಸೇರ್ಪಡೆ ಮಾಡದಂತೆ ವಿರೋಧಿಸಿ ಬಾಳೂರು ಹೋಬಳಿಯ ಗ್ರಾಮಸ್ಥರು ಚಿಕ್ಕಮಗಳೂರು ಅಪರ ಜಿಲ್ಲಾಧಿಕಾರಿ ವೈಶಾಲಿಯವರಿಗೆ ಮನವಿ ಸಲ್ಲಿಸಿದ್ದಾರೆ.

ಮನವಿ ಸಲ್ಲಿಸಿದ ಬಾಳೂರು ಗ್ರಾಪಂ ಅಧ್ಯಕ್ಷ ಬಿ.ಎಂ.ಕೃಷ್ಣೇಗೌಡ ಮಾತನಾಡಿ, ಬಾಳೂರು ಹೋಬಳಿಯನ್ನು ಕಳಸಕ್ಕೆ ಸೇರಿಸಿದರೆ ಗ್ರಾಮಸ್ಥರಿಗೆ 50 ಕಿ.ಮೀ ಕ್ರಮಿಸಿ ತಾಲ್ಲೂಕು ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಜಿಲ್ಲಾ ಕೇಂದ್ರಕ್ಕೆ 120 ಕಿ.ಮೀ ಕ್ರಮಿಸಬೇಕಾಗುತ್ತದೆ. ಬಾಳೂರು ಹೋಬಳಿ ಮೂಡಿಗೆರೆ ತಾಲೂಕು ಗಡಿ ವ್ಯಾಪ್ತಿಯಲ್ಲಿರುವುದರಿಂದ ಕಳಸವು ದೂರವಾಗಿದ್ದು ಗ್ರಾಮಸ್ಥರಿಗೆ ಇದರಿಂದ ಅನಾನುಕೂಲವಾಗಲಿದೆ. ಬಾಳೂರು ಹೋಬಳಿಯನ್ನು ಕಳಸ ತಾಲೂಕು ವ್ಯಾಪ್ತಿಗೆ ಸೇರ್ಪಡೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

ಬಾಳೂರು ಹೋಬಳಿಯ ಕಾಂಗ್ರೆಸ್ ಅಧ್ಯಕ್ಷ ಕಲ್ಮನೆ ಮಹೇಂದ್ರಗೌಡ ಮಾತನಾಡಿ, ಹೆಚ್ಚಾಗಿ ಕೂಲಿ ಕಾರ್ಮಿಕರು ಬಾಳೂರು ಹೋಬಳಿಯಲ್ಲಿದ್ದು ಕಳಸ ತಾಲ್ಲೂಕಿಗೆ ಹೋಗಲು 2 ದಿನ ರಜೆ ಹಾಕಿ ತಾಲೂಕು ಕಛೇರಿಗೆ ಅಲೆಯಬೇಕಾಗುತ್ತದೆ. ಇದರಿಂದ ಕೇವಲ ಕೂಲಿ ಕಾರ್ಮಿಕರಿಗೆ ಮಾತ್ರವಲ್ಲ ಇತರ ನಾಗರೀಕರಿಗೂ ಕಳಸ ತಾಲೂಕಿಗೆ ಕೆಲಸದ ನಿಮಿತ್ತ ಹೋಗಲು ತೊಂದರೆಯಾಗುತ್ತದೆ. ಬಾಳೂರು ಮೂಡಿಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿದ್ದು ಗಡಿ ಭಾಗವಾಗಿರುವುದರಿಂದ ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕೆಂದರು. ಈ ಬಗ್ಗೆ ಬಾಳೂರು ಹೋಬಳಿಯ ಜಾವಳಿ ಗ್ರಾಪಂ ಸಭೆಯಲ್ಲಿ ಕೂಡ ಪ್ರಸ್ತಾಪಿಸಲಾಗಿದೆ. ನಡಾವಳಿಯಲ್ಲಿ ಬಾಳೂರು ಹೋಬಳಿಯನ್ನು ಕಳಸಕ್ಕೆ ಸೇರಿಸದಂತೆ ಒಕ್ಕೊರಲಾಗಿ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಕೇಶವೇಗೌಡ, ಬಾಳೂರು ನಾಗರಾಜ್, ಪರೀಕ್ಷಿತ್‍ ಜಾವಳಿ, ಬಾಳೂರು ನಟೇಶ್, ತಿಲಕ್‍ ಬಾಳೂರು, ವಾಟೇಖಾನ್ ರವಿ, ಮರ್ಕಲ್ ಉಪೇಂದ್ರ, ಅಬ್ರುಗೂಡಿಗೆ ಪ್ರಕಾಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News