ಎನ್‌ಆರ್‌ಸಿ ವಿರುದ್ಧ ವಾಗ್ದಾಳಿ: ಮುಖ್ಯಮಂತ್ರಿ ಮಮತಾ ವಿರುದ್ಧ ಪ್ರಕರಣ

Update: 2018-01-05 04:12 GMT

ಗುವಾಹತಿ, ಜ. 5: ಅಸ್ಸಾಂ ರಾಜ್ಯದ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್‌ಆರ್‌ಸಿ) ಪರಿಷ್ಕರಿಸುತ್ತಿರುವ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಅಸ್ಸಾಂ ಸರ್ಕಾರ ಪ್ರಕರಣ ದಾಖಲಿಸಿದೆ.

ಎನ್‌ಆರ್‌ಸಿ ಪರಿಷ್ಕರಣೆ ಬಂಗಾಳಿಗಳನ್ನು ರಾಜ್ಯದಿಂದ ಹೊರಗಟ್ಟುವ ವ್ಯವಸ್ಥಿತ ಪಿತೂರಿ ಎಂದು ಮಮತಾ ಆಪಾದಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿರುವ ಬಗ್ಗೆ ತೃಣಮೂಲ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಇಂಥ ಸೇಡಿನ ಕ್ರಮದಿಂದ ಬಂಗಾಲಿಗಳ ಪರವಾದ ಹೋರಾಟದಿಂದ ಮಮತಾ ಬ್ಯಾನರ್ಜಿಯವರನ್ನು ವಿಮುಖಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ವಿಚಾರದಲ್ಲಿ ರಾಜಕೀಯ ಲಾಭ ಪಡೆಯಲು ಮಮತಾ ಹೊರಟಿದ್ದಾರೆ ಎಂದು ಬಿಜೆಪಿ ಪ್ರತಿದಾಳಿ ನಡೆಸಿದೆ.

ಬ್ಯಾನರ್ಜಿ ಹೇಳಿಕೆಯನ್ನು ಅಸ್ಸಾಂ ಬಿಜೆಪಿ ಸರ್ಕಾರ ಖಂಡಿಸಿದ್ದು, ಇದು ದುರುದ್ದೇಶಪೂರಿತ. ಅಸ್ಸಾಂನ ಜನರನ್ನು ಅವಹೇಳನ ಮಾಡುವ, ಸಂವಿಧಾನ ಹಾಗೂ ಸುಪ್ರೀಂಕೋರ್ಟ್ ತೀರ್ಪನ್ನು ಅವಮಾನಿಸುವ ಹುನ್ನಾರ ಎಂದು ಟೀಕಿಸಿದೆ.

ಟಿಎಂಸಿ ಮುಖ್ಯಸ್ಥೆಯ ಹೇಳಿಕೆಯನ್ನು ಖಂಡಿಸಿ ಹಲವು ಸಂಘ ಸಂಸ್ಥೆಗಳು ಅಸ್ಸಾಂನಲ್ಲಿ ಪ್ರತಿಭಟನೆ ನಡೆಸಿದ್ದವು. ಹಲವು ಕಡೆಗಳಲ್ಲಿ ಮಮತಾ ಪ್ರತಿಕೃತಿ ಸುಟ್ಟು ಹಾಕಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News