ಐಎಎಸ್/ಐಪಿಎಸ್ ಅಧಿಕಾರಿಗಳ ವೇತನ, ಭತ್ಯೆ ವಿವರ ಸಲ್ಲಿಸದ ಕೇಂದ್ರ ಸರಕಾರ : ಸಂಸದೀಯ ಸಮಿತಿ ಅಸಮಾಧಾನ

Update: 2018-01-07 14:41 GMT

ಹೊಸದಿಲ್ಲಿ, ಜ.7: ಐಎಎಸ್, ಐಪಿಎಸ್ ಹಾಗೂ ಇತರ ಅಧಿಕಾರಿಗಳ ವೇತನ, ಭತ್ಯೆಗಳಿಗಾಗಿ ಮಾಡುತ್ತಿರುವ ವೆಚ್ಚದ ವಿವರ ನೀಡದಿರುವುದಕ್ಕೆ ಸಂಸದೀಯ ಸಮಿತಿಯೊಂದು ಕೇಂದ್ರ ಸರಕಾರಕ್ಕೆ ತೀವ್ರ ಅಸಮಾಧಾನ ಸೂಚಿಸಿದೆ.

ಭಾರತೀಯ ಆಡಳಿತಾತ್ಮಕ ಸೇವೆ(ಐಎಎಸ್), ಭಾರತೀಯ ಪೊಲೀಸ್ ಸೇವೆ(ಐಪಿಎಸ್) ಹಾಗೂ ಭಾರತೀಯ ಅರಣ್ಯ ಸೇವೆ(ಐಎಫ್‌ಎಸ್)- ಈ ವಿಭಾಗದ ಅಧಿಕಾರಿಗಳು ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ನೀಡಿರುವ ಕೊಡುಗೆಯನ್ನು ನಿರ್ಧರಿಸಲು ಸೂಕ್ತ ವ್ಯವಸ್ಥೆಯೊಂದನ್ನು ನೇಮಿಸುವಂತೆ ಸಂಸತ್‌ನ ಅಂದಾಜು ಸಮಿತಿಯ ಇತ್ತೀಚಿನ ವರದಿಯಲ್ಲಿ ಸಲಹೆ ಮಾಡಿದೆ. ರಾಜ್ಯ ಹಾಗೂ ಕೇಂದ್ರ ಸರಕಾರದ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಖಿಲ ಭಾರತೀಯ ಸೇವೆಯ ಅಧಿಕಾರಿಗಳ ವೇತನ, ಭತ್ಯೆ ಮತ್ತಿತರ ವೆಚ್ಚದ ವಿವರ ಒದಗಿಸದ ಬಗ್ಗೆ ಸರಕಾರಕ್ಕೆ ತೀವ್ರ ಅಸಮಾಧಾನ ಸೂಚಿಸಲಾಗಿದ್ದು, ಮೂರು ತಿಂಗಳೊಳಗೆ ವಿವರ ಒದಗಿಸುವಂತೆ ತಿಳಿಸಲಾಗಿದೆ ಎಂದು ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ್ ಜೋಷಿ ನೇತೃತ್ವದ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.

ಈ ಸೇವೆಗಳಿಂದ ಸಂದಾಯವಾಗಿರುವ ಕೊಡುಗೆಗಳನ್ನು ನಿರ್ಧರಿಸಲು ಸರಕಾರ ಯಾವುದೇ ಪ್ರಯತ್ನ ನಡೆಸದಿರುವುದು ನಿರಾಶೆಯುಂಟುಮಾಡಿದೆ . ಅಖಿಲ ಭಾರತೀಯ ಸೇವೆಯ ಅಧಿಕಾರಿಗಳ ಕಾರ್ಯನಿರ್ವಹಣೆಗೆ ಮಾಡಿರುವ ವೆಚ್ಚ ಹಾಗೂ ಅವರಿಂದ ಜಿಡಿಪಿ ಹೆಚ್ಚಳಕ್ಕೆ ಸಂದಾಯವಾಗಿರುವ ಕೊಡುಗೆಯನ್ನು ನಿರ್ಧರಿಸಲು ಸೂಕ್ತ ವ್ಯವಸ್ಥೆ ಯೊಂದನ್ನು ರಚಿಸಬೇಕು ಎಂದು ಸಮಿತಿ ತಿಳಿಸಿದೆ.

ಜನತೆಯ ಕಳವಳ, ಸಮಸ್ಯೆಯ ನಿವಾರಣೆಗೆ ಇಂತಹ ಅಧಿಕಾರಿ ವರ್ಗದವರು ಬದ್ಧರಾಗಿರಬೇಕು. ಅಲ್ಲದೆ ಈ ಅಧಿಕಾರಿಗಳಿಗೆ ವಹಿಸಿಕೊಟ್ಟಿರುವ ಯೋಜನೆ, ಕಾರ್ಯಕ್ರಮಗಳನ್ನು ನಿರ್ದಿಷ್ಟ ಕಾಲದಲ್ಲಿ , ಸೂಕ್ತ ರೀತಿಯಲ್ಲಿ ಪೂರ್ಣಗೊಳಿಸದಿದ್ದರೆ ಈ ಅಧಿಕಾರಿಗಳನ್ನು ಹೊಣೆಗಾರರಾಗಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಖಿಲ ಭಾರತೀಯ ಸೇವೆಯ ಅಧಿಕಾರಿಗಳಿಂದ ದೇಶದ ಅಭಿವೃದ್ಧಿಗೆ ದೊರಕಿರುವ ಕೊಡುಗೆಯನ್ನು ನಿರ್ಧರಿಸುವ ಕಾರ್ಯ ನಡೆಸಬೇಕು. ಈ ಕಾರ್ಯವನ್ನು ಐಐಎಂ, ಐಐಟಿಗಳಂತಹ ಸಂಸ್ಥೆಗಳ ಪರಿಣತರಿಗೆ ಹೊರಗುತ್ತಿಗೆ ನೀಡುವ ಮೂಲಕ ನಡೆಸಲೂ ಸಾಧ್ಯವಿದೆ. ಶೀಘ್ರ ಈ ಕುರಿತ ಕ್ರಮಗಳನ್ನು ಕೈಗೊಂಡು ಸಮಿತಿಗೆ ಮಾಹಿತಿ ನೀಡಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಅಧಿಕಾರಿಗಳ ವೇತನ, ಭತ್ಯೆ, ಪಿಂಚಣಿ, ಅಲ್ಲದೆ ಕಾರ್ಯನಿರ್ವಹಣೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ಕಚೇರಿ, ಪೀಠೋಪಕರಣ ಇತ್ಯಾದಿಗಳ ವೆಚ್ಚದ ವಿವರ ನೀಡಲು ಸಿಬ್ಬಂದಿ ಸಚಿವಾಲಯ ವಿಫಲವಾಗಿದೆ ಎಂದು ವರದಿ ತಿಳಿಸಿದೆ. ಅದಾಗ್ಯೂ,ಸರಕಾರ ಅಸ್ಪಷ್ಟ ಮಾಹಿತಿ ನೀಡಿದ್ದು, ಅಧಿಕಾರಿಗಳು ನೀಡಿರುವ ಕೊಡುಗೆಯ ಪ್ರಮಾಣ 2011ರಲ್ಲಿ ಶೇ.7.97 ಆಗಿದ್ದರೆ, 2014-15ರಲ್ಲಿ ಶೇ.8.15 ಎಂದು ಸರಕಾರ ತಿಳಿಸಿದೆ. ಸರಕಾರಿ ಉದ್ಯೋಗಿಗಳ ಒಟ್ಟಾರೆ ವೆಚ್ಚವನ್ನು ಗಮನಿಸಿದರೆ ಅಖಿಲ ಭಾರತೀಯ ಸೇವೆಯ ಅಧಿಕಾರಿಗಳ ವೇತನಕ್ಕೆ ಅಧಿಕ ವೆಚ್ಚ ಮಾಡಿರುವುದನ್ನು ಗಮನಿಸಬಹುದು ಎಂದು ಸಮಿತಿ ತಿಳಿಸಿದೆ.

ಐಎಎಸ್ ಪದವೃಂದದ ಅಧಿಕೃತ ಹುದ್ದೆಗಳ ಸಂಖ್ಯೆ 1951ರಲ್ಲಿ 1,232 ಆಗಿದ್ದರೆ 1981ರಲ್ಲಿ 4,599ಕ್ಕೆ, 2016ರಲ್ಲಿ 6,396ಕ್ಕೆ ಹೆಚ್ಚಿದೆ. ಇದೇ ರೀತಿ, 2017ರ ಜನವರಿ 1ರ ಪ್ರಕಾರ ಐಪಿಎಸ್ ಹಾಗೂ ಐಎಫ್‌ಎಸ್ ಪದವೃಂದದ ಅಧಿಕೃತ ಸಾಮರ್ಥ್ಯ ಕ್ರಮವಾಗಿ 4,863 ಹಾಗೂ 3,152 ಆಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News