ಆಧಾರ್ ಸೋರಿಕೆಯ ವರದಿ ಮಾಡಿದ ಪತ್ರಕರ್ತೆಗೆ ಬಹುಮಾನ ನೀಡಿ: ಎಡ್ವರ್ಡ್ ಸ್ನೋಡೆನ್

Update: 2018-01-09 07:09 GMT

ಹೊಸದಿಲ್ಲಿ.ಜ.9 : ಆಧಾರ್ ಮಾಹಿತಿ ಸೋರಿಕೆ  ಬಹಿರಂಗಪಡಿಸಿ ವರದಿ ಪ್ರಕಟಿಸಿದ್ದ ಭಾರತೀಯ ಪತ್ರಿಕೆ ಮತ್ತದರ ಪತ್ರಕರ್ತರಿಗೆ ಬಹುಮಾನ ನೀಡಬೇಕೇ ಹೊರತು ದಂಡ ವಿಧಿಸಬಾರದು ಎಂದು ಅಮೆರಿಕಾ ಗುಪ್ತಚರ ಇಲಾಖೆಯ ಬೇಹುಗಾರಿಕೆಯನ್ನು ಬಯಲುಗೊಳಿಸಿದ್ದ ಎಡ್ವರ್ಡ್ ಸ್ನೋಡೆನ್ ಹೇಳಿದ್ದಾರೆ.

ಆಧಾರ್ ಮಾಹಿತಿ ಸೋರಿಕೆ ವರದಿ ಪ್ರಕಟಿಸಿದ್ದ ಪತ್ರಕರ್ತರನ್ನು ಬೆಂಬಲಿಸಿ ಟ್ವೀಟ್ ಮಾಡಿದ ಸ್ನೋಡೆನ್ ಈ  ವಿಚಾರದಲ್ಲಿ ನಿಜವಾಗಿ ಬಂಧಿತರಾಗಬೇಕಾದವರು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರದ ಅಧಿಕಾರಿಗಳು ಎಂದು ಹೇಳಿದ್ದಾರೆ.

"ಸರಕಾರಕ್ಕೆ ನ್ಯಾಯ ಒದಗಿಸಬೇಕೆಂಬ ಮನಸ್ಸು ನಿಜವಾಗಿಯೂ ಇದ್ದರೆ ಅವರು  ಲಕ್ಷಗಟ್ಟಲೆ ಭಾರತೀಯರ ಖಾಸಗಿತನವನ್ನು ನಾಶಪಡಿಸಿರುವಂತಹ ನೀತಿಯಲ್ಲಿ ಬದಲಾವಣೆ ತರುತ್ತಿದ್ದರು. ಇದಕ್ಕೆ ಕಾರಣೀಕರ್ತರಾದವರನ್ನು ಬಂಧಿಸಬೇಕೇ ? ಅವರೇ ವಿಶಿಷ್ಟ ಗುರುತು ಪ್ರಾಧಿಕಾರದವರು,'' ಎಂದು ಸ್ನೋಡೆನ್ ಟ್ವೀಟ್ ಮಾಡಿದ್ದಾರೆ.

ಸ್ನೋಡೆನ್ ಅವರು ವರದಿ ಪ್ರಕಟಿಸಿದ್ದ 'ದಿ ಟ್ರಿಬ್ಯೂನ್' ಪತ್ರಿಕೆಯ  ಸಂಪಾದಕರು  ತಾವು ಪ್ರಕಟಿಸಿದ್ದ  ವರದಿ ವಸ್ತುನಿಷ್ಠವಾಗಿದ್ದು ಹಾಗೂ ಅದಕ್ಕೆ ಬದ್ಧರಾಗಿದ್ದೇವೆ ಎಂದು ಟ್ವೀಟ್ ಮಾಡಿದ್ದನ್ನು ಸ್ನೋಡೆನ್ ಮರುಟ್ವೀಟ್ ಮಾಡಿದ್ದಾರೆ.

ಆಧಾರ್ ಮಾಹಿತಿ ಸೋರಿಕೆ ಬಗ್ಗೆ ವರದಿ ಪ್ರಕಟವಾದ ಬೆನ್ನಿಗೇ ವಿಶಿಷ್ಟ ಗುರುತು ಪ್ರಾಧಿಕಾರ ಅದನ್ನು ತಪ್ಪು ಎಂದು ಬಣ್ಣಿಸಿ ಪತ್ರಿಕೆ ಹಾಗೂ ವರದಿ ಪ್ರಕಟಿಸಿದ್ದ ರಚನಾ ಖೈರಾ ಎಂಬ ಪತ್ರಕರ್ತೆಯ ವಿರುದ್ಧ ಎಫ್‍ಐಆರ್ ದಾಖಲಿಸಿತ್ತು. ತಮ್ಮ ವರದಿಯಲ್ಲಿ ರಚನಾ ಅವರು ತಾವು ಏಜಂಟನೊಬ್ಬನಿಗೆ ಪೇಟಿಎಂ ಮುಖಾಂತರ ರೂ.500 ಪಾವತಿಸಿದ ಹತ್ತೇ ನಿಮಿಷಗಳಲ್ಲಿ ಲಾಗಿನ್ ಐಡಿ ಹಾಗೂ ಪಾಸ್ ವರ್ಡ್ ನೀಡಿದ್ದು ಈ ಮೂಲಕ ಯಾವುದೇ ಆಧಾರ್ ಸಂಖ್ಯೆ ನಮೂದಿಸಿದರೂ ಆ ಸಂಖ್ಯೆ ಹೊಂದಿರುವ ವ್ಯಕ್ತಿಯ ಎಲ್ಲಾ ಮಾಹಿತಿಗಳೂ ತಕ್ಷಣ ದೊರೆಯುತ್ತದೆ ಎಂದು ವಿವರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News